More

    ಉದಯ ಟಿವಿ ವೀಕ್ಷಕರಿಗೆ ಡಬಲ್ ಧಮಾಕಾ

    ಕಳೆದ ಎರಡೂವರೆ ದಶಕಗಳಿಂದ ಕನ್ನಡ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ಉದಯ ಟಿವಿ, ವೈವಿಧ್ಯಮಯ ಧಾರಾವಾಹಿಗಳ ಮೂಲಕ ವೀಕ್ಷಕರ ಹೃದಯಕ್ಕೆ ಇನ್ನಷ್ಟು ಹತ್ತಿರವಾಗುತ್ತಿದೆ. ಇದೀಗ ಈ ಗುಚ್ಛಕ್ಕೆ ಎರಡು ಹೊಸ ಧಾರಾವಾಹಿಗಳು ಸೇರ್ಪಡೆಯಾಗುತ್ತಿವೆ. ಮಾ. 15ರಿಂದ ಸಂಜೆ 6.30ಕ್ಕೆ ಹಾಸ್ಯಮಯ ಸಸ್ಪೆನ್ಸ್ ಕಥೆ ‘ಗೌರಿಪುರದ ಗಯ್ಯಾಳಿಗಳು’ ಹಾಗೂ ಸಂಜೆ 7.30ಕ್ಕೆ ಮಂಜುನಾಥ ಸ್ವಾಮಿಯ ಭಕ್ತೆಯೂ ಆಗಿರುವ ಆಶಾ ಕಾರ್ಯಕರ್ತೆಯೊಬ್ಬಳ ಜೀವನ ಪಯಣ ‘ನೇತ್ರಾವತಿ’ ಧಾರಾವಾಹಿ ಪ್ರಸಾರವಾಗಲಿವೆ.

    ಗೌರಿಪುರ ಎಂಬ ಮಧ್ಯಮ ವರ್ಗದವರ ಕಾಲನಿಯಲ್ಲಿ ಇರುವ ನಾಲ್ವರು ಗಯ್ಯಾಳಿಗಳು ಸ್ತ್ರೀ ಸಂಘ ಸ್ಥಾಪಿಸಿಕೊಂಡು ಹಪ್ಪಳ, ಸಂಡಿಗೆ ತಯಾರು ಮಾಡುವಂಥವರು. ಇವರ ಬಾಯಿಗೆ ಕಾಲನಿಯೇ ಹೆದರುತ್ತದೆ. ಇವರ ನಡುವೆಯೂ ಸಮಸ್ಯೆಗಳಿವೆ. ಆದರೆ ಹೊರಗಿನವರು ಬಂದರೆ ಒಗ್ಗಟ್ಟಾಗುತ್ತಾರೆ. ಇಂಥವರ ನಡುವೆ ಗುಲಾಬಿಯಂಥ ಹುಡುಗಿ ತನ್ನ ತಂದೆಯ ನಿಗೂಢ ಸಾವಿಗೆ ಸಾಕ್ಷಿ ಹುಡುಕಿಕೊಂಡು ಬರುತ್ತಾಳೆ. ಈ ಗಯ್ಯಾಳಿಗಳ ನಡುವೆ ನಡೆಯುವ ಹಾಸ್ಯಮಯ ಪ್ರಸಂಗಗಳು ಹಾಗೂ ಗುಲಾಬಿಯ ನಿಗೂಢ ನಡೆಗಳು ಕಥೆಗೆ ಹೊಸತನದ ಸ್ಪರ್ಶ ನೀಡಿವೆ. ‘ಜಾತ್ರೆ’, ‘ಸಾಗುತ ದೂರದೂರ’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ರವಿತೇಜ ಈ ಧಾರಾವಾಹಿಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸೀರಿಯಲ್​ನಲ್ಲಿ ನವ್ಯ, ರೋಹಿಣಿ, ದಿವ್ಯ, ವೀಣಾ, ರಚನಾ, ಆರ್ವ ಬಸವಟ್ಟಿ, ರವಿತೇಜ ನಟಿಸುತ್ತಿದ್ದಾರೆ. ಹಾಸ್ಯನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ತಮ್ಮ ಸುರಾಗ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಈ ಧಾರಾವಾಹಿ ನಿರ್ವಿುಸುತ್ತಿದ್ದಾರೆ. ಇದು ಕಿರುತೆರೆಯಲ್ಲಿ ಅವರ ಮೊದಲ ಪ್ರಯತ್ನ.

    2 ದಶಕದ ಬಳಿಕ ಬಂದ ಅಂಜಲಿ

    ‘ಅನಂತನ ಅವಾಂತರ’, ‘ತರ್ಲೆ ನನ್ನ ಮಗ’, ‘ನೀನು ನಕ್ಕರೆ ಹಾಲು ಸಕ್ಕರೆ’ ಮುಂತಾದ ಚಿತ್ರಗಳ ನಾಯಕಿಯಾಗಿ 90ರ ದಶಕದಲ್ಲಿ ಮಿಂಚಿದ್ದ ನಟಿ ಅಂಜಲಿ, 22 ವರ್ಷಗಳ ನಂತರ ‘ನೇತ್ರಾವತಿ’ ಧಾರಾವಾಹಿ ಮೂಲಕ ಆಗಮಿಸಿದ್ದಾರೆ. ನೇತ್ರಾವತಿಯ ತಾಯಿ ಭಾಗೀರಥಿಯಾಗಿ ಅಂಜಲಿ ಕಾಣಿಸಿಕೊಳ್ಳಲಿದ್ದಾರೆ.

    ನೇತ್ರಾವತಿಯಲ್ಲಿ ಆಶಾಕಾರ್ಯಕರ್ತೆಯ ಬದುಕು ಬವಣೆ

    ತನ್ನೊಳಗೆ ನೋವಿದ್ದರೂ ತೋರಿಸಿಕೊಳ್ಳದೆ ಇತರರಿಗೆ ನಗು ಹಂಚುವ, ಸಮಾಧಾನ ನೀಡುವ, ಆಶಾ ಕಾರ್ಯಕರ್ತೆ, ಮಂಜುನಾಥ ಸ್ವಾಮಿ ಭಕ್ತೆಯ ಕಥೆಯೇ ‘ನೇತ್ರಾವತಿ’. ವೃತ್ತಿ ಜೀವನದ ಏರಿಳಿತಗಳು ಇವಳನ್ನು ಒಬ್ಬ ಒರಟ ನಾಯಕನ ಮನೆಗೆ ತಂದು ನಿಲ್ಲಿಸುತ್ತವೆ. ಶರೀರದ ಗಾಯಕ್ಕೆ ಮುಲಾಮು ಹಚ್ಚಬಲ್ಲ ನೇತ್ರಾವತಿ, ಆ ಒರಟನ ಮನಸ್ಸಿನ ಗಾಯಕ್ಕೆ ಮದ್ದು ನೀಡಿ ಅವನಿಗೆ ಸತ್ಯದ ಅರಿವು ಮೂಡಿಸುವುದು ಮುಂದಿನ ಪಯಣ. ಡಾ. ರಾಜಕುಮಾರ್ ಕುಟುಂಬದ ‘ಪೂರ್ಣಿಮಾ ಪೊ›ಡಕ್ಷನ್ಸ್’ ಬ್ಯಾನರ್​ನಲ್ಲಿ ‘ನೇತ್ರಾವತಿ’ ಧಾರಾವಾಹಿ ಮೂಡಿಬರುತ್ತಿದೆ. ಸಂತೋಷ್ ಗೌಡ ನಿರ್ದೇಶನದ ಈ ಧಾರಾವಾಹಿಯಲ್ಲಿ ದುರ್ಗಾಶ್ರೀ, ಸನ್ನಿ ಮಹಿಪಾಲ್, ಸಚಿನ್, ಚೈತ್ರಾ ರಾವ್, ದಾನಪ್ಪ, ಐಶ್ವರ್ಯಾ ಮುಂತಾದವರಿದ್ದಾರೆ. ‘ನೇತ್ರಾವತಿ’ ಸಂಜೆ 7.30 ಕ್ಕೆ ಉದಯವಾಹಿನಿಯಲ್ಲಿ ಪ್ರಸಾರವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts