More

    ವರ್ಷದೊಳಗೆ ಮನೆ ಬಾಗಿಲಿಗೆ ಆಸ್ತಿ ದಾಖಲೆ ಪತ್ರ: ಡಿಸಿಎಂ

    ಬೆಂಗಳೂರು: ಮುಂದಿನ ಒಂದು ವರ್ಷದ ಒಳಗಾಗಿ ಸಾರ್ವಜನಿಕರ ಮನೆ ಬಾಗಿಲಿಗೆ ಆಸ್ತಿ ದಾಖಲೆಗಳನ್ನು ಸರ್ಕಾರ ಉಚಿತವಾಗಿ ತಲುಪಿಸುವ ವ್ಯವಸ್ಥೆ ಮಾಡಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

    ಕೆ.ಆರ್.ಪುರದ ಐಟಿಐ ಕ್ರೀಡಾಂಗಣದಲ್ಲಿ ಬಿಬಿಎಂಪಿ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ‘ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರಿ ಸಂಸ್ಥೆಗಳಿಂದ ಜನರಿಗೆ ತ್ವರಿತ ಸೇವೆ ನೀಡಲು ಜನಸ್ಪಂದನದಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಒಂದೇ ಸೂರಿನಡಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು. ಹೆಚ್ಚಿನ ಜನರ ಒತ್ತಾಯದಂತೆ ಸ್ವತ್ತುದಾರರ ಮನೆ ಬಾಗಿಲಿಗೆ ‘ನಮ್ಮ ಸ್ವತ್ತು ಯೋಜನೆ’ ಮೂಲಕ ಆಸ್ತಿ ದಾಖಲೆ ಪತ್ರವನ್ನು ತಲುಪಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

    ಕಳೆದ ಸರ್ಕಾರದ ಪಾಠ ಪುನರಾವರ್ತನೆ:

    ಅನುದಾನ ಬಿಡುಗಡೆ ವಿಚಾರದಲ್ಲಿ ಕಳೆದ ಸರ್ಕಾರ ಕಲಿಸಿದ ಪಾಠ ಈಗ ಪುನರಾವರ್ತನೆಯಾಗಿದೆ. ಆದರೂ ಅದನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇವೆ. ಈ ಭಾಗದ ಇಬ್ಬರು ಶಾಸಕರು ಕುಡಿಯುವ ನೀರು, ಸಂಚಾರ ದಟ್ಟಣೆ, ರಾಜಕಾಲುವೆ, ಮಳೆ ನೀರುಗಾಲುವೆ, ಕಸ ವಿಲೇವಾರಿ ವಿಚಾರವಾಗಿ ಗಮನ ಸೆಳೆದಿದ್ದಾರೆ. ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ಕಲ್ಪಿಸಲು ಬೆಂಗಳೂರಿನ ಹೊರವಲಯದಲ್ಲಿ 4 ಕಡೆ ಜಾಗ ಗುರುತಿಸಲು ತೀರ್ಮಾನಿಸಲಾಗಿದೆ.

    ರಾಜಕಾಲುವೆ ಹೂಳೆತ್ತುವ ವಿಚಾರದಲ್ಲಿ ಎನ್‌ಜಿಟಿ ಆದೇಶ ಪಾಲಿಸಬೇಕಿದೆ. ಆ ಆದೇಶದ ಪ್ರಕಾರ ರಾಜಕಾಲುವೆ ಬದಿಯಲ್ಲಿ 50 ಮೀ. ಬಫರ್ ಜಾಗದಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಹೀಗಾಗಿ ರಾಜಕಾಲುವೆ ಪಕ್ಕದ ಜಾಗವನ್ನು ಸರ್ಕಾರ ವಶಪಡಿಸಿಕೊಂಡು ಅಲ್ಲಿ ರಸ್ತೆ ನಿರ್ಮಾಣ ಮಾಡುವ ಯೋಜನೆ ಇದೆ. ಇದರಿಂದ ರಾಜಕಾಲುವೆ ಹೂಳೆತ್ತಲು ಸಹಕಾರಿ ಆಗಲಿದ್ದು, ಸ್ಥಳೀಯ ಸಂಚಾರಕ್ಕೆ ಹೊಸ ರಸ್ತೆ ಸಿಕ್ಕಂತಾಗುತ್ತದೆ ಎಂದರು.

    ಅಹವಾಲು ಹೊತ್ತು ತಂದ ಜನಸಾಗರ:

    ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ವ್ಯಾಪ್ತಿಯ ಬಿಬಿಎಂಪಿ, ಬಿಡಿಎ, ಬಿಎಂಟಿಸಿ, ಜಲಮಂಡಳಿ, ಕಂದಾಯ ಹಾಗೂ ಬೆಸ್ಕಾಂಗೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ಕುಂದು-ಕೊರತೆ ದಾಕಲಿಸಲು ಅವಕಾಶ ಕಲ್ಪಿಸಲಾಗಿತ್ತು. ಇವುಗಳಿಗೆ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿತ್ತು. ನಿರೀಕ್ಷೆಗಿಂತ ಹೆಚ್ಚು ಜನರು ತಮ್ಮ ಅಹವಾಲುಗಳನ್ನು ಹೊತ್ತು ತಂದಿದ್ದರು. ಆರಂಭದಲ್ಲಿ ನೂಕುನುಗ್ಗಲು ಉಂಟಾದರೂ, ನಂತರದಲ್ಲಿ ಡಿಸಿಎಂ ಅವರು ಪೊಲೀಸ್, ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿ ಎಲ್ಲ ನಾಗರಿಕರ ದೂರು ಪತ್ರವನ್ನು ಸ್ವೀಕರಿಸಿ ಪರಿಹಾರ ಒದಗಿಸಲು ಸೂಚಿಸಿದರು. ಸಂಜೆ ತನಕವೂ ಕಾರ್ಯಕ್ರಮ ನಡೆಯಿತು.

    ಕಾರ್ಯಕ್ರಮದಲ್ಲಿ ರಾಜ್ಯ ಪರಿವರ್ತನಾ ಸಂಸ್ಥೆಯ ಉಪಾಧ್ಯಕ್ಷ ಪ್ರೊ. ರಾಜೀವ್ ಗೌಡ, ಬಿಬಿಎಂಪಿ ಆಡಳಿತಗಾರ್ ರಾಕೇಶ್ ಸಿಂಗ್, ಮುಖ್ಯ ಆಯಯುಕ್ತ ತುಷಾರ್ ಗಿರಿನಾಥ್, ಕೆ.ಆರ್.ಪುರ ತಹಶಿಲ್ದಾರ್ ವೈ.ರವಿ, ಬೆಂಗಳೂರು ಪೂರ್ವ ತಾಲ್ಲೂಕು ಸಿಇಒ ವಸಂತ್ ಕುಮಾರ್ ಸೇರಿ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

    ಗ್ಯಾರಂಟಿ ಯೋಜನೆಗಳೇ ಮಂತ್ರಾಕ್ಷತೆ:

    ಬೇರೆಯವರು ನಮ್ಮ ಅನ್ನಭಾಗ್ಯ ಅಕ್ಕಿಗೆ ಅರಿಶಿನ ಹಚ್ಚಿ ಮಂತ್ರಾಕ್ಷತೆ ಮಾಡಿ ಹಂಚುತ್ತಿದ್ದಾರೆ. ಆದರೆ, ಜನರ ಹಸಿವಿಗೆ ಅನ್ನಭಾಗ್ಯವೇ ಮಂತ್ರಾಕ್ಷತೆ, ನಿರುದ್ಯೋಗಕ್ಕೆ ಯುವನಿಧಿಯೇ ಮಂತ್ರಾಕ್ಷತೆ, ಮಹಿಳೆಯರ ಕಷ್ಟಕ್ಕೆ ಗೃಹಲಕ್ಷ್ಮಿಯೇ ಮಂತ್ರಾಕ್ಷತೆ, ಮಹಿಳೆಯರ ಪ್ರಯಾಣಕ್ಕೆ ಶಕ್ತಿಯೇ ಮಂತ್ರಾಕ್ಷತೆ, ಮನೆಯ ಬೆಳಕಿಗೆ ಗೃಹಜ್ಯೋತಿಯೇ ಮಂತ್ರಾಕ್ಷತೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪರೋಪಕ್ಷವಾಗಿ ಬಿಜೆಪಿ ನಿಲುವನ್ನು ಟೀಕಿಸಿದರು.

    ನಗರದ ಮುಕ್ಕಾಲು ಕಸ ಕ್ಷೇತ್ರದ ಮಿಟ್ಟಗಾನಹಳ್ಳಿ ಕ್ವಾರಿಗೆ ಬರುತ್ತಿದೆ. ಇದರಿಂದ ಸ್ಥಳಿಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಹೆಚ್ಚು ತ್ಯಾಜ್ಯ ಸುರಿಯುವುದನ್ನು ತಡೆಯಬೇಕು. ರಾಜಕಾಲುವೆಗಳಲ್ಲಿ ಹೂಳೆತ್ತುವ ಕೆಲಸವಾಗುತ್ತಿಲ್ಲ. ಮಲಿನ ನೀರು ಕ್ಷೇತ್ರದಲ್ಲಿ ಹರಿಯುತ್ತಿರುವ ಕಾರಣ ವಿವಿಧ ಸಮಸ್ಯೆಗಳು ಉಂಟಾಗಿವೆ. ಇದಕ್ಕೆ ಸೂಕ್ತ ಪರಿಹಾರ ಒದಗಿಸಬೇಕು.
    – ಮಂಜುಳಾ ಅರವಿಂದ ಲಿಂಬಾವಳಿ, ಮಹದೇವಪುರ ಶಾಸಕಿ

    ಕೆ.ಆರ್.ಪುರ ಕ್ಷೇತ್ರದಲ್ಲಿ ಕುಡಿಯುವ ನೀರಿನ ಹಾಹಾಕಾರವಿದೆ. 110 ಹಳ್ಳಿಗಳ ಪಟ್ಟಿಯಲ್ಲಿರುವ ಗ್ರಾಮಗಳಿಗೆ ನೀರು ಒದಗಿಸಲು ಅನುದಾನ ಬಿಡುಗಡೆ ಮಾಡಬೇಕು. ರಾಜಕಾಲುವೆಗಳ ಪುನರುಜ್ಜೀವನ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ. ಹಳೇ ಮದ್ರಾಸ್ ರಸ್ತೆಯಲ್ಲಿ 350 ಕೋಟಿ ವೆಚ್ಚದಲ್ಲಿ ್ಲೈಓವರ್ ನಿರ್ಮಿಸಲು ಹಿಂದಿನ ಸರ್ಕಾರ ರೂಪಿಸಿದ್ದ ಯೋಜನೆಯನ್ನು ಈಗ ತಡೆಹಿಡಿದಿರುವುದನ್ನು ತೆರವು ಮಾಡಬೇಕು.
    – ಬೈರತಿ ಬಸವರಾಜು, ಕೆ.ಆರ್.ಪುರ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts