More

    ಯಾರೋ ಬಂದು ಸ್ಫೂರ್ತಿ ತುಂಬಲೆಂದು ಕಾಯಬಾರದು: ಸೆಲೆಬ್ರಿಟಿ ಕಾರ್ನರ್​ನಲ್ಲಿ ತಾರಾ ಅನೂರಾಧಾ

    ಯಾರೋ ಬಂದು ಸ್ಫೂರ್ತಿ ತುಂಬಲೆಂದು ಕಾಯಬಾರದು: ಸೆಲೆಬ್ರಿಟಿ ಕಾರ್ನರ್​ನಲ್ಲಿ ತಾರಾ ಅನೂರಾಧಾಈ ಬಾರಿ ಒಳ್ಳೆಯ ಮಾರ್ಕ್ಸ್ ಪಡೆದರೆ ಸೈಕಲ್ ಕೊಡಿಸುತ್ತೀನಿ ಎಂದು ಅಪ್ಪ ಮಗನಿಗೆ ಪ್ರಾಮಿಸ್ ಮಾಡಿದ್ದರು. ಅದಕ್ಕೆ ಸರಿಯಾಗಿ ಮಗ ಚೆನ್ನಾಗಿ ಓದಿ, ಒಳ್ಳೆಯ ಅಂಕ ಪಡೆದು ಅಪ್ಪನನ್ನು ಸಂತೋಷಪಡಿಸಿದ. ಮಾತು ಕೊಟ್ಟಂತೆ ಒಂದಿಷ್ಟು ಹಣವನ್ನು ಮಗನ ಕೈಗಿಟ್ಟ ಅಪ್ಪ, ಅವನಿಗೆ ಬೇಕಾದ ಸೈಕಲ್ ಕೊಳ್ಳುವಂತೆ ಹೇಳಿದರು. ಮಗ ಒಂದು ಅಂಗಡಿಗೆ ಹೋಗಿ, ಅತ್ಯುತ್ತಮವಾದ ಸೈಕಲ್ ಕೊಡಿ ಎಂದು ಹೇಳಿದ. ಅದಕ್ಕೆ ಅಂಗಡಿಯವನು, ತನ್ನ ಅಂಗಡಿಯಲ್ಲಿನ ಅತ್ಯುತ್ತಮವಾದ ಸೈಕಲ್ ಕೊಟ್ಟ. ಸರಿ, ಸೈಕಲ್ ಮನೆಗೆ ತಂದ ಮಗ, ಅದನ್ನು ಓಡಿಸಿದ. ಎಷ್ಟು ಪ್ರಯತ್ನಪಟ್ಟರೂ ಅವನಿಗೆ ಸಮಾಧಾನವಾಗಲಿಲ್ಲ. ಕೊನೆಗೆ ವಾಪಸ್ಸು ಅಂಗಡಿಗೆ ಹೋದ ಅವನು, ಈ ಸೈಕಲ್ ಸರಿ ಇಲ್ಲ ಎಂದ. ಆಶ್ಚರ್ಯಗೊಂಡ ಅಂಗಡಿಯವ, ಏನಾಗಿದೆ ಎಂದು ಪರೀಕ್ಷಿಸಿದ. ಆದರೆ, ಎಷ್ಟು ತಲೆ ಕೆಡಿಸಿಕೊಂಡರೂ, ಆ ಸೈಕಲ್​ನಲ್ಲಿ ಅವನಿಗೆ ಯಾವುದೇ ಸಮಸ್ಯೆ ಕಾಣಲಿಲ್ಲ. ‘ಏನು ಸಮಸ್ಯೆ ಎಂದು ನೀನೇ ತೋರಿಸು’ ಎಂದು ಅವನು ಹುಡುಗನಿಗೆ ಹೇಳಿದ. ಹುಡುಗ ಸೈಕಲ್ ಏರಿ ಒಂದಿಷ್ಟು ದೂರ ಹೋಗುತ್ತಿದ್ದಂತೆಯೇ, ಅಂಗಡಿಯವನಿಗೆ ಸಮಸ್ಯೆ ಏನು ಎಂದು ಸ್ಪಷ್ಟವಾಗಿ ಗೊತ್ತಾಗಿ ಹೋಯಿತು. ಹುಡುಗನನ್ನ ವಾಪಸ್ಸು ಕರೆದ ಅಂಗಡಿಯವ, ‘ನಾನು ನನ್ನ ಅಂಗಡಿಯಲ್ಲಿರುವ ಅತ್ಯುತ್ತಮ ಸೈಕಲ್ ನಿನಗೆ ಕೊಡಬಹುದು. ಆದರೆ, ಅದನ್ನು ಸರಿಯಾಗಿ ಬ್ಯಾಲೆನ್ಸ್ ಮಾಡಬೇಕಾಗಿರುವುದು ನೀನೇ. ಬ್ಯಾಲೆನ್ಸಿಂಗ್ ಬರದಿದ್ದರೆ, ಎಷ್ಟೇ ಅತ್ಯುತ್ತಮ ಸೈಕಲ್ ಆದರೂ ಚೆನ್ನಾಗಿರುವುದಿಲ್ಲ. ಹಾಗಾಗಿ, ಮೊದಲು ಸೈಕಲ್ ಬ್ಯಾಲೆನ್ಸ್ ಮಾಡುವುದು ಕಲಿ’ ಎಂದು ಹೇಳಿಕಳುಹಿಸಿದ.

    ಈ ಕಥೆಯನ್ನು ಹಿರಿಯರೊಬ್ಬರು ನನಗೆ ಬಹಳ ವರ್ಷಗಳ ಹಿಂದೆ ಹೇಳಿದ್ದರು ಮತ್ತು ನಾನು ಆಗಾಗ ಈ ವಿಷಯವನ್ನು ವೇದಿಕೆಗಳಲ್ಲಿ ಹೇಳುತ್ತಿರುತ್ತೇನೆ. ಎಷ್ಟು ನಿಜವಾದ ಮಾತಿದು. ಪ್ರತಿಯೊಬ್ಬರೂ ಇದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕು. ಬಹಳಷ್ಟು ಜನರಿಗೆ ತಮ್ಮ ಜೀವನವನ್ನು ಬ್ಯಾಲೆನ್ಸ್ ಮಾಡುವುದಕ್ಕೆ ಬರುವುದಿಲ್ಲ. ಖುಷಿಯಾದರೆ ಅತಿಯಾಗಿ ಹಿಗ್ಗುತ್ತೇವೆ, ದುಃಖವಾದರೆ ಅತಿಯಾಗಿ ಕುಗ್ಗುತ್ತೇವೆ. ಸುಖ-ದುಃಖ ಎರಡೂ ಜೀವನದ ಅಂಗ ಎಂಬುದನ್ನು ಯೋಚಿಸುವುದಿಲ್ಲ ಅಥವಾ ಎರಡನ್ನೂ ಸಮನಾಗಿ ಬ್ಯಾಲೆನ್ಸ್ ಮಾಡುವುದಿಲ್ಲ. ನಾವು ಎಷ್ಟೋ ಬಾರಿ, ಸಣ್ಣಸಣ್ಣ ವಿಷಯಗಳಿಗೆ ಬೇಸರಗೊಳ್ಳುತ್ತೇವೆ. ಅಂದುಕೊಂಡಿದ್ದು ಆಗಲಿಲ್ಲ ಎಂದಾಗ ಹತಾಶರಾಗುತ್ತೇವೆ. ನಾವು ಮಾಡಿದ ಕೆಲಸವನ್ನು ಯಾರೋ ಮೆಚ್ಚಿಕೊಳ್ಳಲಿಲ್ಲ, ಸಹಕಾರ ನೀಡಲಿಲ್ಲ, ಪ್ರೋತ್ಸಾಹಿಸಲಿಲ್ಲ, ಒಳ್ಳೆಯ ಮಾತುಗಳನ್ನು ಆಡಲಿಲ್ಲ ಅಂತ ಬೇಸರಿಸಿಕೊಂಡು ಕುಳಿತುಬಿಡುತ್ತೇವೆ. ಕ್ಷುಲ್ಲಕ ಕಾರಣಗಳಿಗೆ ಕೆಟ್ಟ ನಿರ್ಧಾರ ತೆಗೆದುಕೊಂಡು ತಮ್ಮ ಜೀವನವನ್ನು ಅಂತ್ಯಗೊಳಿಸಿಕೊಂಡವರ ಬಗ್ಗೆ ಓದಿದ್ದೇವೆ ಮತ್ತು ಕೇಳಿದ್ದೇವೆ. ನಮ್ಮ ಜೀವನದ ಮೌಲ್ಯವನ್ನು ಅರ್ಥ ಮಾಡಿಕೊಳ್ಳದೆ, ನಾವೇಕೆ ಇಲ್ಲಿ ಬಂದಿದ್ದೇವೆ ಎಂದು ತಿಳಿದುಕೊಳ್ಳದೆಯೇ ಒಂದು ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತೇವೆ. ಯಾವುದೇ ಸಂದರ್ಭದಲ್ಲಾದರೂ, ನಮಗೆ ತಿಳಿ ಹೇಳುವುದಕ್ಕೆ, ಸ್ಪೂರ್ತಿ ತುಂಬುವುದಕ್ಕೆ ಯಾರೆಂದರೆ ಯಾರೂ ಬರುವುದಿಲ್ಲ. ನಮಗೆ ನಾವೇ ಸ್ಪೂರ್ತಿ ತುಂಬಿಕೊಳ್ಳಬೇಕು. ನಮಗೆ ನಾವೇ ಧೈರ್ಯ ಹೇಳಿಕೊಂಡು ಮುನ್ನಡೆಯುವ ಅಭ್ಯಾಸ ಮಾಡಿಕೊಳ್ಳಬೇಕು.

    ಈ ವಿಷಯದಲ್ಲಿ ನನ್ನದೇ ಉದಾಹರಣೆ ಹೇಳುವುದಕ್ಕೆ ಬಯಸುತ್ತೇನೆ. ನಾನು ಅನುಕೂಲಸ್ಥ ಕುಟುಂಬದಿಂದ ಬಂದವಳು. ಚಿತ್ರರಂಗದ ಹಿನ್ನೆಲೆಯೇನಿರಲಿಲ್ಲ. ಆದರೆ, ನನಗೆ ಮುಂಚಿನಿಂದಲೂ ಕಲಾವಿದೆಯಾಗಬೇಕೆಂಬ ಆಸೆ. ಅದಕ್ಕೆ ಸರಿಯಾಗಿ ಚಿತ್ರದಲ್ಲಿ ನಟಿಸುವ ಅವಕಾಶವೂ ಸಿಕ್ಕಿತು. ನನ್ನ ದೊಡ್ಡಮ್ಮ ಒಬ್ಬರು ಪ್ರೋತ್ಸಾಹಿಸಿದ್ದು ಬಿಟ್ಟರೆ, ಮಿಕ್ಕಂತೆ ಯಾರಿಗೂ ನಾನು ಚಿತ್ರರಂಗಕ್ಕೆ ಬರುವುದು ಇಷ್ಟ ಇರಲಿಲ್ಲ. ಕೊನೆಗೆ ಒಂದು ಚಿತ್ರ ಮಾಡಲಿ ಎಂದು ಕಳಿಸಿಕೊಟ್ಟರು. ಮೊದಲ ಚಿತ್ರ ಯಶಸ್ವಿಯಾಗಿ, ಕ್ರಮೇಣ ಅವಕಾಶಗಳು ಸಿಕ್ಕವು. ಆದರೆ, ಮನೆಯಲ್ಲಿ ಅಷ್ಟೇನೂ ಪ್ರೋತ್ಸಾಹ ಸಿಗಲಿಲ್ಲ. ಇನ್ನು ಸಾಕು, ಒಪ್ಪಬೇಡ ಎನ್ನುತ್ತಿದ್ದರು. ಇದು ಮನೆಯ ಕಥೆಯಾದರೆ, ಚಿತ್ರರಂಗದಲ್ಲೂ ತಾರತಮ್ಯ ಇದ್ದೇ ಇತ್ತು. ಇದೆಲ್ಲವನ್ನೂ ಎದುರಿಸಿ ನಟಿಸುತ್ತಾ ಹೋದೆ. ಕ್ರಮೇಣ ಇದೆಲ್ಲವನ್ನು ಮೀರಿ ಬೆಳೆದೆ. ನಾನು ರಾಜಕೀಯಕ್ಕೆ ಬಂದಾಗಲೂ, ಮತ್ತದೇ ಮಾತುಗಳು ಬಂದವು, ಇವೆಲ್ಲ ಬೇಕಾ? ನಟನೆ ಮಾಡಿಕೊಂಡಿರಬಾರದಾ? ಎಂಬ ಪ್ರಶ್ನೆಗಳು ಬಂದವು. ಹೀಗೆ ಏನು ಮಾಡುವುದಕ್ಕೆ ಹೋದರೂ ಸಹಕಾರ, ಪ್ರೋತ್ಸಾಹ, ಪ್ರೇರೇಪಣೆ ಅಷ್ಟು ಸುಲಭವಾಗಿ ಸಿಗಲಿಲ್ಲ.

    ಹಾಗಂತ, ಸುಮ್ಮನಿದ್ದುಬಿಟ್ಟಿದ್ದರೆ ಜೀವನದಲ್ಲಿ ಏನೂ ಮಾಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಮೊದಲೇ ಹೇಳಿದಂತೆ, ನಮಗೆ ಯಾರೋ ಸಹಕಾರ ಕೊಡುತ್ತಾರೆ, ಪ್ರೇರೇಪಿಸುತ್ತಾರೆ ಎನ್ನುವುದೆಲ್ಲ ಸುಳ್ಳು. ಮೊದಲಿಗೆ ನಮಗೆ ನಾವು ಪ್ರೇರೇಪಣೆ ಆಗಬೇಕು. ಏನೋ ಸಾಧಿಸುತ್ತೀನಿ ಎಂಬ ಛಲ ಬೆಳೆಸಿಕೊಳ್ಳಬೇಕು. ಅದಕ್ಕೆ ನಾವೇನಾಗಬೇಕು ಎಂಬ ಸ್ಪಷ್ಟತೆ ಇರಬೇಕು. ಆಗ ಎಂತಹ ಅಡೆತಡೆಗಳು ಬಂದರೂ, ಅದನ್ನು ದಾಟಿ ಸಾಧಿಸುವ ಛಲ ಬರುತ್ತದೆ. ಆ ನಿಟ್ಟಿನಲ್ಲಿ ಕಷ್ಟಪಟ್ಟು ಕೆಲಸ ಮಾಡಿದರೆ ಖಂಡಿತಾ ಅಂದುಕೊಂಡಿದ್ದು ಒಂದಲ್ಲ ಒಂದು ದಿನ ಸಾಧಿಸುತ್ತೇವೆ. ಹಾಗಾಗಿ, ಬೇರೆ ಯಾರೋ ಬಂದು ನಮ್ಮನ್ನು ಉದ್ಧರಿಸುತ್ತಾರೆ, ಸ್ಪೂರ್ತಿ ತುಂಬುತ್ತಾರೆ ಅಥವಾ ಪ್ರೇರೇಪಿಸುತ್ತಾರೆ ಎಂದು ಕಾಯುತ್ತಾ ಕುಳಿತುಕೊಳ್ಳುವುದಕ್ಕಿಂತ, ನಮಗೆ ನಾವೇ ಸ್ಪೂರ್ತಿಯಾಗಬೇಕು, ನಮಗೆ ನಾವೇ ಪ್ರೇರಣೆಯಾಗಬೇಕು, ನಮ್ಮನ್ನು ನಾವೇ ಕಟ್ಟಿಕೊಳ್ಳಬೇಕು ಎಂಬುದು ನನ್ನ ಬಲವಾದ ನಂಬಿಕೆ.

    ನನ್ನ ಪ್ರಕಾರ ಒಬ್ಬ ವ್ಯಕ್ತಿ ಬೆಳೆಯಬೇಕೆಂದರೆ, ಸನ್ಮಾನದ ಜತೆಗೆ ಅವಮಾನವೂ ಆಗಬೇಕು. ಅವಮಾನವಿಲ್ಲದಿದ್ದರೆ ಬೆಳೆಯಲು ಸಾಧ್ಯವಿಲ್ಲ. ಏನೋ ಸಾಧಿಸಬೇಕೆಂಬ ಛಲ ಬರುವುದಿಲ್ಲ. ಆ ಅವಮಾನವನ್ನು ನಾವು ಪಾಸಿಟಿವ್ ಆಗಿ ತೆಗೆದುಕೊಳ್ಳಬೇಕೇ ಹೊರತು, ನೆಗೆಟಿವ್ ಆಗಿ ತೆಗೆದುಕೊಂಡರೆ, ಬೆಳೆಯುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎನ್ನುವುದು ಬಹಳ ಮುಖ್ಯ. ಏನೇ ಆದರೂ ಈ ಅವಮಾನವನ್ನು ಮೆಟ್ಟಿ ನಿಲ್ಲುತ್ತೀನಿ, ನಾಲ್ಕು ಜನರ ಎದುರು ತಲೆ ಎತ್ತಿ ಬದುಕುತ್ತೀನಿ ಎಂದು ಸಂಕಲ್ಪ ಮಾಡಿದರೆ ಖಂಡಿತಾ ಹಾಗೆ ಬದುಕುವುದಕ್ಕೆ ಸಾಧ್ಯ. ಅದರ ಬದಲು, ಆ ಅವಮಾನವನ್ನು ಮನಸ್ಸಿಗೆ ತೆಗೆದುಕೊಂಡರೆ ಮೇಲೇಳುವುದು ಬಹಳ ಕಷ್ಟ.

    ಹಾಗಾಗಿ, ನಾವು ಯಾವ ರೀತಿ ಬದುಕಬೇಕು, ಏನು ಮಾಡಬೇಕು ಎಂಬುದು ನಮ್ಮ ಕೈಯಲ್ಲೇ ಇರುತ್ತದೆ. ಆ ತೀರ್ವನವನ್ನು ತೆಗೆದುಕೊಳ್ಳುವ ಜಾಣ್ಮೆ ನಮ್ಮಲ್ಲಿ ಇರಬೇಕು ಅಷ್ಟೇ. ಮುಂದೆ ಯಾವಾಗಲೋ ನೀವು ಸೋತರೆ, ಯಾರಾದರೂ ಕಾಲೆಳೆದರೆ, ಮುಂದೇನು ಎಂಬ ಗೊಂದಲದಲ್ಲಿ ನೀವಿದ್ದರೆ… ಯಾರೋ ಬಂದು ನಿಮ್ಮನ್ನು ಮೇಲೆತ್ತುತ್ತಾರೆ, ಮುನ್ನಡೆಯುವುದಕ್ಕೆ ಪ್ರೇರೇಪಿಸುತ್ತಾರೆ ಎಂದು ಕಾಯಬೇಡಿ. ನಿಮಗೆ ನೀವೇ ಸ್ಪೂರ್ತಿಯಾಗಿ ಎದ್ದು ನಿಲ್ಲಿ.

    (ಲೇಖಕಿ ಹಿರಿಯ ನಟಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts