More

    ನಾಟಕ ಮಾಡುವವರನ್ನು ನಂಬಬೇಡಿ – ಶಾಸಕ ಎ.ಎಸ್. ಪಾಟೀಲ ನಡಹಳ್ಳಿ

    ಆಲಮಟ್ಟಿ: ಹವಾಯಿ ಚಪ್ಪಲಿ ಹಾಕಿಕೊಂಡು, ನಮ್ಮ ಮನೆಯ ಮಗನನ್ನು ಮುಂದಿಟ್ಟುಕೊಂಡು, ಅವನಿಂದ ಅವಾಚ್ಯ ಶಬ್ದ ಮಾತನಾಡಿಸಿ ಜನರೆದುರು ನಾಟಕ ಮಾಡುವವರನ್ನು ನಂಬಬೇಡಿ ಎಂದು ಬಿಜೆಪಿ ಅಭ್ಯರ್ಥಿ, ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮನವಿ ಮಾಡಿದರು.

    ಯಲಗೂರು ಗ್ರಾಮದ ಶ್ರೀ ಯಲಗೂರೇಶನ ಸನ್ನಿಧಿಯಲ್ಲಿ ಅಭಿಮಾನಿ, ಬೆಂಬಲಿಗರು ಮತ್ತು ಮುಖಂಡರೊಂದಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಬಹಿರಂಗ ಪ್ರಚಾರಕ್ಕೆ ಶನಿವಾರ ಚಾಲನೆ ನೀಡಿದ ನಂತರ ನಡೆದ ಬಹಿರಂಗ ಸಭೆಗಳಲ್ಲಿ ಅವರು ಮಾತನಾಡಿದರು.

    ಕಾಂಗ್ರೆಸ್‌ನವರು ನಮ್ಮ ಕುಟುಂಬದ ಮಗನನ್ನು ದಾರಿ ತಪ್ಪಿಸಿ, ಆ ದಾರಿ ತಪ್ಪಿದ ಮಗನಿಂದ ಏನೇನೋ ಮಾತನಾಡಿಸುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವಂಥದ್ದಲ್ಲ. ಅವಾಚ್ಯ ಭಾಷೆ ಬಳಸಿ ಮಾತನಾಡಿ ಇನ್ನೊಬ್ಬರ ಮನಸ್ಸು ನೋಯಿಸಬಹುದೇ ಹೊರತು ಅದರಿಂದ ಯಾವುದೇ ಸಾಧನೆ ಮಾಡಿದಂತಾಗುವುದಿಲ್ಲ ಎಂದು ವ್ಯಂಗ್ಯವಾಡಿದರು.

    ಆಲಮಟ್ಟಿ ಭಾಗದಲ್ಲಿ ಪ್ರವಾಸಿಗರನ್ನು ಸೆಳೆಯಲು ಸಾಕಷ್ಟು ಅವಕಾಶಗಳಿವೆ. ಆಲಮಟ್ಟಿ ಕೇಂದ್ರವಾಗಿಸಿಕೊಂಡು ಈಗಾಗಲೇ ಬಿಜೆಪಿ ಸರ್ಕಾರ ಹಲವು ಯೋಜನೆಗಳಿಗೆ ಅನುಮೋದನೆ ನೀಡಿದೆ. ಈ ಭಾಗದಲ್ಲಿ ಉದ್ಯೋಗ ಸೃಷ್ಟಿಸುವುದು ನಮ್ಮ ಗುರಿಯಾಗಿದೆ. ಆಲಮಟ್ಟಿ, ನಾರಾಯಣಪುರ ಜಲಾಶಯಗಳ ಹಿನ್ನೀರು ಪ್ರದೇಶದಲ್ಲಿ ಮೀನು ಸಾಕಾಣಿಕೆ, ಜಲಕ್ರೀಡೆ ಆಯೋಜನೆಗೆ ಹೆಚ್ಚಿನ ಅವಕಾಶಗಳಿವೆ. ಇದಕ್ಕೆಂದೇ ಸರ್ಕಾರ ಜಲ ಸಾರಿಗೆಗೆ ಅನುಮೋದನೆ ನೀಡಿದೆ ಎಂದರು.

    ಬಿಜೆಪಿ ಮಾಜಿ ರಾಜ್ಯ ಉಪಾಧ್ಯಕ್ಷೆ ಮಂಗಳಾದೇವಿ ಬಿರಾದಾರ ಮಾತನಾಡಿ, ಕಾಂಗ್ರೆಸ್‌ನವರು ಮನೆ ಒಡೆಯುವ, ಮನೆ ಮುರಿಯುವ ಕೆಲಸ ಮಾಡಬಾರದು. ಇನ್ನೊಂದು ಕುಟುಂಬದಲ್ಲಿ ಹಸ್ತಕ್ಷೇಪ ನಡೆಸುವ, ಕೈಯಾಡಿಸುವ ಪ್ರವೃತ್ತಿ ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ತರುವಂಥದ್ದಲ್ಲ ಎಂದರು.

    ಮುಖಂಡರಾದ ಮುನ್ನಾಧಣಿ ನಾಡಗೌಡ, ಮಲಕೇಂದ್ರಗೌಡ ಪಾಟೀಲ, ಕೆಂಚಪ್ಪ ಬಿರಾದಾರ, ಸೋಮನಗೌಡ ಬಿರಾದಾರ, ಶಾಂತಗೌಡ ಬಿರಾದಾರ, ಮುತ್ತಣ್ಣ ಹುಗ್ಗಿ, ಚನಬಸ್ಸು ಚೆನ್ನಿಗಾವಿ, ಅಶೋಕ ಡೆಂಗಿ, ಮಹಾಂತೇಶ ಡೆಂಗಿ, ಗೋಪಾಲ ಗದ್ದನಕೇರಿ, ಮಹಾಂತೇಶ ಪಟ್ಟಣದ, ಮಹಾಂತೇಶ ಅರಮನಿ, ಸೋಮನಗೌಡ ಬಿರಾದಾರ ಕಾಶಿನಕುಂಟಿ, ಬಸವರಾಜ ಗುಳಬಾಳ, ಅಪ್ಪುಗೌಡ ಮೈಲೇಶ್ವರ, ಬಸವರಾಜ ಸರೂರ, ಶರಣಗೌಡ ಗೌಡರ, ಸಂಗಪ್ಪ ಅರಮನಿ, ಶಿವನಗೌಡ ಕನ್ನೂರ, ಮಹಾದೇವಪ್ಪ ದಡ್ಡಿ, ಬಾದಶಹಾ ವಾಲಿಕಾರ, ಮಹಾಂತೇಶ ಗಂಜಿಹಾಳ, ಪ್ರಭುಗೌಡ ಪಾಟೀಲ, ನಿಂಗಪ್ಪ ಕಲಾದಗಿ ಸೇರಿ ಆಯಾ ಗ್ರಾಮದ ಮುಖಂಡರು ಇದ್ದರು.

    ಜೆಡಿಎಸ್‌ನ ಮುಖಂಡರಾಗಿದ್ದ ರಾಚೋಟಿ ಬಳಿಗಾರ, ಸಂದೀಪ ಬಿದರಕೋಟಿ, ಆನಂದ ಕಾಮಟೆ ಸೇರಿ ಆಯಾ ಗ್ರಾಮಗಳ ಹಲವರು ತಮ್ಮ ಪಕ್ಷಗಳನ್ನು ತೊರೆದು ಬಿಜೆಪಿ ಸೇರ್ಪಡೆಗೊಂಡರು. ಎಲ್ಲರನ್ನೂ ನಡಹಳ್ಳಿಯವರು ಪಕ್ಷದ ಶಾಲು ಹೊದಿಸಿ ಸ್ವಾಗತಿಸಿಕೊಂಡರು. ಯಲಗೂರ ನಂತರ ಯಲ್ಲಮ್ಮನ ಬೂದಿಹಾಳ, ಮಸೂತಿ, ಕಾಶಿನಕುಂಟಿ, ವಡವಡಗಿ, ಬಳಬಟ್ಟಿ, ಕಾಳಗಿ, ಹುಲ್ಲೂರು ಗ್ರಾಮಗಳಲ್ಲಿ ಅಬ್ಬರದ ಪ್ರಚಾರ ನಡೆಸಿದರು.

    ನಾನು 5 ವರ್ಷದಲ್ಲಿ ಏನು ಅಭಿವೃದ್ಧಿ ಮಾಡಿದ್ದೇನೆ ಅನ್ನೋದನ್ನು ದಾಖಲೆ ಸಮೇತ ಪ್ರಕಟಿಸಿ ಪುಸ್ತಕವನ್ನೇ ಹೊರತಂದಿದ್ದೇನೆ. ನೀವು ನಿಮ್ಮ 25 ವರ್ಷದ ಆಡಳಿತದಲ್ಲಿ ಮಾಡಿರುವ ಸಾಧನೆಗಳನ್ನು ದಾಖಲೆ ಸಮೇತ ಹೊರತನ್ನಿ. ನಾವಿಬ್ಬರೂ ಸಾಧನೆಯ ರಿಪೋರ್ಟ್ ಕಾರ್ಡ ಹಿಡಿದು ಜನರ ಬಳಿ ಹೋಗೋಣ.

    ಎ.ಎಸ್. ಪಾಟೀಲ ನಡಹಳ್ಳಿ, ಬಿಜೆಪಿ ಅಭ್ಯರ್ಥಿ, ಶಾಸಕರು.

    ಮರಳಿ ಪಕ್ಷಕ್ಕೆ ಬಂದ ಗದ್ದನಕೇರಿ: ಮೂಲ ಬಿಜೆಪಿ ಕಾರ್ಯಕರ್ತ ಯಲಗೂರಿನ ಗೋಪಾಲ ಗದ್ದನಕೇರಿ ಶಾಸಕ ನಡಹಳ್ಳಿ ಅವರ ಪರ ಪ್ರಚಾರ ಮಾಡುವುದಾಗಿ ಹೇಳಿ ಬೆಂಬಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts