More

    “ಕಾರು, ಬೈಕಿನಂತೆ ಹೆಂಡತಿಯನ್ನೂ ನಿಮ್ಮ ಆಸ್ತಿ ಎಂದು ತಿಳಿಯಬೇಡಿ” : ಗಂಡಸರಿಗೆ ಹೈಕೋರ್ಟ್ ಕಿವಿಮಾತು

    ಮುಂಬೈ: ಚಹಾ ಮಾಡಲು ನಿರಾಕರಿಸಿದ ಹೆಂಡತಿಯನ್ನು ಸುತ್ತಿಗೆಯಿಂದ ಹೊಡೆದು ಅವಳ ಸಾವಿಗೆ ಕಾರಣನಾದ ವ್ಯಕ್ತಿಗೆ ನೀಡಲಾಗಿದ್ದ ಶಿಕ್ಷೆಯನ್ನು ಎತ್ತಿಹಿಡಿದಿರುವ ಬಾಂಬೆ ಹೈಕೋರ್ಟ್, ಗಂಡಸರು ಹೆಂಡತಿಯನ್ನು ತಮ್ಮ ಚರಾಸ್ತಿಯಂತೆ ನೋಡಿಕೊಳ್ಳುವ ಮನೋಭಾವ ಬದಲಾಗಬೇಕು ಎಂದಿದೆ. ಈ ತೆರನ ಪ್ರಕರಣಗಳು, ಸಮಾಜದಲ್ಲಿರುವ ಲೈಂಗಿಕ ಅಸಮಾನತೆ ಮತ್ತು ಓರೆಯಾದ ಪುರುಷಪ್ರಧಾನತೆಗಳು ವಿವಾಹ ಸಂಬಂಧದಲ್ಲಿ ನುಸುಳಿ ಬರುವುದರ ಪರಿಣಾಮವಾಗಿದೆ ಎಂದು ನ್ಯಾಯಾಲಯ ತಾಕೀತು ಮಾಡಿದೆ.

    ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಪಂಢರಾಪುರ ನಿವಾಸಿ ಸಂತೋಷ್ ಅಟ್ಕರ್(35), ತನ್ನ ಹೆಂಡತಿಯು ಚಹಾ ಮಾಡದೆ ಆಚೆ ಹೋಗಬೇಕೆಂದು ಹಠ ಹಿಡಿದಿದ್ದಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ ಅಪರಾಧಿ. ಜಿಲ್ಲಾ ನ್ಯಾಯಾಲಯವು ಅಪರಾಧಿಕ ನರಹತ್ಯೆಯ ಆರೋಪದ ಮೇಲೆ ನೀಡಿದ್ದ 10 ವರ್ಷಗಳ ಜೈಲು ಶಿಕ್ಷೆಯ ವಿರುದ್ಧ ಆತ ಮೇಲ್ಮನವಿ ಸಲ್ಲಿಸಿದ್ದ. ದಂಪತಿಯ 6 ವರ್ಷದ ಮಗಳ ಸಾಕ್ಷ್ಯವನ್ನು ಮುಖ್ಯವಾಗಿ ಪರಿಗಣಿಸಿದ ಕೋರ್ಟ್, ಅಪರಾಧ ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿವೆ ಎಂದು ಹೇಳಿ ಮನವಿಯನ್ನು ತಳ್ಳಿಹಾಕಿದೆ.

    ಇದನ್ನೂ ಓದಿ: ಹದಿಹರೆಯದ ಮಗಳನ್ನೇ ರೇಪ್ ಮಾಡಿ ಗರ್ಭಿಣಿಯಾಗಿಸಿದ, ಗರ್ಭಪಾತವಾದ ಮೇಲೆ ಮತ್ತೆ ಮೇಲೆರಗಿದ… ಕೋರ್ಟ್ ಹೇಳಿದ್ದೇನು ?

    ಅಟ್ಕರ್ ಮತ್ತು ಆತನ ಪತ್ನಿ ಕೆಲವು ಸಮಯದಿಂದ ವಿವಾದಗಳನ್ನು ಹೊಂದಿದ್ದರು. 2013 ರ ಡಿಸೆಂಬರ್‌ನಲ್ಲಿ ಘಟನೆಯ ದಿನ, ಅವನ ಹೆಂಡತಿ ಅವನಿಗೆ ಒಂದು ಕಪ್ ಚಹಾ ಮಾಡದೆ ಹೊರಗೆ ಹೋಗಬೇಕೆಂದು ಒತ್ತಾಯಿಸಿದಳು. ಆಗ ಆರೋಪಿಯು ಅವಳನ್ನು ಸುತ್ತಿಗೆಯಿಂದ ಹೊಡೆದು ತೀವ್ರವಾಗಿ ಗಾಯಗೊಳಿಸಿದನು. ಆ ನಂತರ ಅಪರಾಧದ ಸ್ಥಳವನ್ನು ಸ್ವಚ್ಛಗೊಳಿಸಿದ ಅಟ್ಕರ್, ತನ್ನ ಹೆಂಡತಿಗೆ ಸ್ನಾನ ಮಾಡಿಸಿ ಆಸ್ಪತ್ರೆಗೆ ಕರೆದೊಯ್ದನು. ಒಂದು ವಾರ ಆಸ್ಪತ್ರೆಯಲ್ಲಿದ್ದ ನಂತರ ಆಕೆ ಸಾವನ್ನಪ್ಪಿದ್ದಳು.

    ಮೇಲ್ಮನವಿಯ ವಿಚಾರಣೆಯ ವೇಳೆ, ಆರೋಪಿ ಪರ ವಕೀಲರು ಅವನ ಹೆಂಡತಿ ಚಹಾ ಮಾಡಲು ನಿರಾಕರಿಸಿ, ಆತನನ್ನು ಅಪರಾಧ ಎಸಗಲು ಗಂಭೀರ ಮತ್ತು ಹಠಾತ್ ಪ್ರಚೋದನೆ ನೀಡಿದ್ದಳು ಎಂದು ವಾದ ಮಾಡಿದರು. ಈ ವಾದವನ್ನು ತಿರಸ್ಕರಿಸಿದ ನ್ಯಾಯಮೂರ್ತಿ ರೇವತಿ ಮೋಹಿತೆ ದೆರೆ, “ಮೃತಳು ಚಹಾ ಮಾಡಲು ನಿರಾಕರಿಸುವ ಮೂಲಕ, ಈ ರೀತಿಯ ಕ್ರೂರ ಹಲ್ಲೆಯನ್ನು ನಡೆಸಲು ಪ್ರಚೋದನೆ ನೀಡಿದ್ದಾಳೆಂದು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ವಕೀಲರ ಈ ವಾದವು ಹಾಸ್ಯಾಸ್ಪದವೂ, ಅಸಮರ್ಥನೀಯವೂ ಆಗಿದೆ” ಎಂದರು.

    ಇದನ್ನೂ ಓದಿ: VIDEO | “ವೆಲ್​ಕಮ್​ ಟು ದ ಕ್ಲಬ್, ಅಮೆರಿಕ…!”

    ಈ ಸಂದರ್ಭದಲ್ಲಿ, ದಾಂಪತ್ಯದಲ್ಲಿ, ನಿರೀಕ್ಷೆ ಮತ್ತು ಅಧೀನತೆಯ ಅಸಮತೋಲನವಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ದೆರೆ, “ಹೆಂಡತಿಯು ಗಂಡನ ಉಪಯೋಗಕ್ಕೆ ಇರುವ ಚರಾಸ್ತಿ ಅಥವಾ ವಸ್ತುವಲ್ಲ” ಎಂದರು. “ಮದುವೆ ಎಂಬುದು ಸಮಾನತೆಯ ಮೇಲೆ ಆಧರಿಸಿದ ಜೋಡಿದಾರಿಕೆ ಆಗಿರಬೇಕು. ಆದರೆ, ಪುರುಷಪ್ರಧಾನ ಮನೋಭಾವ ಮತ್ತು ಹೆಂಡತಿ ಪುರುಷನ ಸ್ವತ್ತು ಎಂಬ ‘ಮಧ್ಯಕಾಲೀನ ಕಲ್ಪನೆ’ ಇನ್ನೂ ಸಮಾಜದಲ್ಲಿ ಮುಂದುವರಿದಿದೆ. ಇದರಿಂದಾಗಿ ಗಂಡ ಏನು ಮಾಡಬೇಕೆಂದು ಬಯಸುತ್ತಾನೋ ಅದನ್ನೇ ಹೆಂಡತಿ ಮಾಡಬೇಕೆನ್ನುವ ನಿರೀಕ್ಷೆಯಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಬಹುತೇಕ ಮಹಿಳೆಯರ ಸಾಮಾಜಿಕ ಪರಿಸ್ಥಿತಿ ಅವರು ತಮ್ಮ ಸಂಗಾತಿಗಳಿಗೆ ತಮ್ಮನ್ನು ಹಸ್ತಾಂತರಿಸುವಂತೆ ಮಾಡುತ್ತದೆ. ಆದ್ದರಿಂದ, ಪುರುಷರು ತಾವೇ ಪ್ರಾಥಮಿಕ ಪಾಲುದಾರರು ಎಂದು ಭಾವಿಸಿ, ಹೆಂಡತಿಯರನ್ನು ತಮ್ಮ ಚರಾಸ್ತಿ ಎಂದು ಪರಿಗಣಿಸುತ್ತಾರೆ. ಹೀಗಾಗಿ ಹೆಂಡತಿಯೇ ಮನೆಯ ಎಲ್ಲಾ ಕೆಲಸಗಳನ್ನು ಮಾಡಬೇಕೆಂಬ ಲೈಂಗಿಕ ಅಸಮಾನತೆ ಸಮಾಜದಲ್ಲಿ ಇದೆ ಎಂದರು.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಮಾರ್ಚ್​ 1 ರಿಂದ 60 ವರ್ಷ ಮೇಲ್ಪಟ್ಟವರಿಗೆ, ಆಯ್ದ 45 ಮೇಲ್ಪಟ್ಟವರಿಗೆ ಕರೊನಾ ಲಸಿಕೆ ಲಭ್ಯ

    ಮಹಿಳೆಯನ್ನು ಕೊಂದು ಹೃದಯವನ್ನು ಆಲೂಗಡ್ಡೆಯೊಂದಿಗೆ ಬೇಯಿಸಿ ತಿಂದ- ಸಂಬಂಧಿಕರನ್ನೂ ಕೊಲೆ ಮಾಡಿದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts