More

    ಮಕ್ಕಳ ಭವಿಷ್ಯಕ್ಕೆ ತೊಂದರೆ ಕೊಡ್ಬೇಡಿ; ಸಮ್ಮೇಳನಾಧ್ಯಕ್ಷ ಡಾ.ತಿಮ್ಮನಹಳ್ಳಿ ವೇಣುಗೋಪಾಲ್ ಮನವಿ

    ಚಿಕ್ಕನಾಯಕನಹಳ್ಳಿ: ಸರ್ಕಾರಿ ಶಾಲೆಗಳನ್ನು ಮುಚ್ಚಬೇಡಿ. ವಿಲೀನಗೊಳಿಸಿ ಬಡಮಕ್ಕಳ ಭವಿಷ್ಯಕ್ಕೆ ತೊಂದರೆ ಕೊಡಬೇಡಿ, ಸರ್ಕಾರಿ ಶಾಲೆ ಉಳಿಸಿ ಎಂದು ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ತಿಮ್ಮನಹಳ್ಳಿ ವೇಣುಗೋಪಾಲ್ ಹೇಳಿದರು.

    ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ (ತಾತಯ್ಯ ಮಂಟಪದ ಸಾ.ಶಿ.ಮರುಳಯ್ಯ ಮಹಾವೇದಿಕೆ) ಶನಿವಾರ ಆಯೋಜಿಸಿದ್ದ 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.

    ಮಕ್ಕಳ ಭವಿಷ್ಯಕ್ಕೆ ತೊಂದರೆ ಕೊಡ್ಬೇಡಿ; ಸಮ್ಮೇಳನಾಧ್ಯಕ್ಷ ಡಾ.ತಿಮ್ಮನಹಳ್ಳಿ ವೇಣುಗೋಪಾಲ್ ಮನವಿ
    10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಗೆ ಜಾನಪದ ಕಲಾ ತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷರು, ಗಣ್ಯರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.

    ಹತ್ತು ವರ್ಷಗಳಿಂದೀಚೆಗೆ ಶೇ.10 ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ. ಗ್ರಾಮೀಣ ಶಾಲೆಗಳ ನಾಡಿ ಹಿಡಿದು, ರೋಗಪತ್ತೆ ಹಚ್ಚಿ ಗುಣಪಡಿಸುವ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಯೋಚಿಸಬೇಕಿದೆ ಎಂದರು. ಸರ್ಕಾರಿ ಶಾಲೆಗಳನ್ನು ದಾಖಲಾತಿ ಕೊರತೆ ನೆಪವೊಡ್ಡಿ, ಸಮೀಪದ ಶಾಲೆಯೊಂದಿಗೆ ವಿಲೀನಗೊಳಿಸಿ ಎಳ್ಳುನೀರು ಬಿಡಲಾಗುತ್ತಿದೆ.

    ಸರ್ಕಾರದ ಇಂತಹ ಮನಸ್ಥಿತಿಯ ಹಿಂದೆ ಗುಪ್ತ ಕಾರ್ಯಸೂಚಿಯಿದೆ. ಸರ್ಕಾರಿ ಶಾಲೆಗಳ ಅಕ್ಕ-ಪಕ್ಕದಲ್ಲಿ ಖಾಸಗಿ ಶಾಲೆಗಳನ್ನು ತೆರೆಯಲು ಅನುಮತಿ ಕೊಡುವುದರ ಹಿಂದೆ ರಾಜಕಾರಣಿಗಳು ಮತ್ತು ಮಠ-ಮಾನ್ಯಗಳು ಚುನಾವಣಾ ಋಣ ಸಂದಾಯ ಮಾಡುವ ವಾಗ್ದಾನವಿರಬಹುದು ಎಂದು ಶಂಕಿಸಿದರು.

    ಕನ್ನಡ ನುಡಿ, ಕನ್ನಡ ಶಾಲೆಗಳಿಗೆ ಕುತ್ತು ಎದುರಾದಾಗ ಬರಹಗಾರರು, ಸಮಾಜಮುಖಿ ಚಿಂತಕರು, ಕಲಾವಿದರು ಬರವಣಿಗೆ ಮತ್ತು ಚಿಂತನೆಯ ಮೂಲಕ ಜನಾಭಿಪ್ರಾಯ ರೂಪಿಸಿ, ಸರ್ಕಾರವನ್ನು ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ ಎಂದರು.

    ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಪ್ರತಿಕೂಲವನ್ನು ಅನುಕೂಲಕರವಾಗಿ ಮಾಡಿಕೊಳ್ಳುವ ಮೂಲಕ ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದರು. ತಾಲೂಕು ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಕಟ್ಟೆಮನೆ ಮಾತನಾಡಿ, ಸಮ್ಮೇಳನದ ಗೋಷ್ಠಿಗಳಿಂದ ಹಿಡಿದು ಎಲ್ಲ ಭಾಗಗಳಲ್ಲೂ ರೈತರನ್ನೇ ಮೂಲವಾಗಿಟ್ಟುಕೊಂಡಂತೆ ನಡೆಸುತ್ತಿದ್ದು, ರೈತ ಮಹಿಳೆಯರಿಗೆ ಬಾಗಿನ ಕೊಡುವ ಮೂಲಕ ಉದ್ಘಾಟನೆ ನೆರವೇರಿಸಲಾಗಿದೆ ಎಂದರು.

    ಫ್ಯಾಸಿಸ್ಟ್ ಪ್ರೇತಾತ್ಮ ಓಡಿಸಿ: ಭಾಷೆಯೊಳಗಿರುವ ಮಾತೃತ್ವಕ್ಕೆ ಎದುರಾಗಿರುವ ಬೆದರಿಕೆ ಹಿಮ್ಮೆಟ್ಟಿಸಲು ಚಿಕ್ಕನಾಯಕನಹಳ್ಳಿ ತಾಲೂಕಿನ ಕನ್ನಡ ವಿವೇಕ ಸಮರ್ಥವಾಗಿದೆ. ಫ್ಯಾಸಿಸ್ಟ್ ಪ್ರೇತಾತ್ಮಗಳು ಭಾಷೆ ಮೇಲೆ ಕೂತು ಕನ್ನಡ ಸಾಂಸ್ಕೃತಿಕ ವಿವೇಕವನ್ನು ವಿಸ್ಮೃತಿಗೆ ನೂಕಲು ಹೊಂಚುಹಾಕಿವೆ. ಇದನ್ನು ವಿಫಲಗೊಳಿಸದಿದ್ದರೆ ನಮಗೆ ಉಳಿಗಾಲವಿಲ್ಲ. ಈ ಕೂಗು ಮಾರಿಯನ್ನು ಹಿಮ್ಮೆಟಿಸದೆ ಅದಕ್ಕೆ ಕಿವಿಗೊಟ್ಟು ಅದರ ಕೈಯಾಳು, ಬಾಯಾಳುವಾದರೆ ವಿನಾಶ ಖಂಡಿತ. ಹಾಗಾಗಿ ತೇಲಿ ಬಿಟ್ಟಿರುವ ಗಂಜಲದ ತಂತ್ರಕ್ಕೆ ಬಲಿಯಾಗದೆ ಕನ್ನಡ ಪ್ರೀತಿಯನ್ನು ಅದರ ಅಸ್ಮಿತೆಯನ್ನು ಕಾಪಾಡಲು ನಾವೆಲ್ಲರೂ ಕಂಕಣ ಬದ್ಧರಾಗಬೇಕಿದೆ ಎಂದು ಡಾ.ತಿಮ್ಮನಹಳ್ಳಿ ವೇಣುಗೋಪಾಲ್ ಕರೆ ನೀಡಿದರು.

    ಸುತ್ತೋಲೆಗಳು ಸೋಗಲಾಡಿತನ: ನೆಪ ಹೇಳಿ ಕನ್ನಡ ಶಾಲೆಗಳನ್ನು ಮುಚ್ಚುವ ಶಾಲೆಗಳ ಪಟ್ಟಿ ಬೆಳೆಯುತ್ತಿದೆ. ಇಂತಹ ಬಿಕ್ಕಟ್ಟು ನಮ್ಮೆದುರು ಇರುವಾಗ, ಕೋಟಿಕಂಠ ಗಾಯನ, ಮನೆ ಮನೆಯ ಮೇಲೆ ಕನ್ನಡ ಧ್ವಜ ಹಾರಿಸಲು ನೀಡುವ ಕರೆಗಳನ್ನು ಹೊರಡಿಸುವ ಸುತ್ತೋಲೆಗಳು ಸೋಗಲಾಡಿತನವಾಗಿವೆ. ಗಂಭೀರ ಚರ್ಚೆಗೆ ಒಳಗಾಗಬೇಕಿದ್ದ ವಿಷಯವನ್ನು ನಿರ್ಲಕ್ಷಿಸಿರುವ ದುರಂತಕ್ಕೆ, ಇತ್ತೀಚಿನ ವರ್ಷಗಳಲ್ಲಿ ಇತರ ತಾಲೂಕುಗಳಂತೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಮುಚ್ಚಲ್ಪಟ್ಟ ಸರ್ಕಾರಿ ಶಾಲೆಗಳ ಸಂಖ್ಯೆ ಏರುಗತಿಯಲ್ಲಿದೆ ಎಂಬುದು ಆತಂಕಕಾರಿ ಸಂಗತಿ ಎಂದು ಡಾ.ತಿಮ್ಮನಹಳ್ಳಿ ವೇಣುಗೋಪಾಲ್ ಆತಂಕ ವ್ಯಕ್ತಪಡಿಸಿದರು.

    ಮೌಲ್ಯಬಿತ್ತುವ ಕಾರ್ಯವಾಗಲಿ: ಸಿರಿಧಾನ್ಯದ ರಾಶಿ ಪೂಜೆ ಮಾಡುವ ಮೂಲಕ 10ನೇ ತಾಲೂಕು ಕನ್ನಡ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಚಿಂತಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಅರಮನೆಯಲ್ಲಿದ್ದ ಸಾಹಿತ್ಯವನ್ನು ಜನ ಮನೆಗೆ ತರುವ ಪ್ರಯತ್ನವೇ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ ಹಿಂದಿದ್ದ ಉದ್ದೇಶವಾಗಿದ್ದು, ಜೀವನ ಮೌಲ್ಯಗಳು ಮತ್ತು ಪ್ರೀತಿ ಬಿತ್ತುವ ಕಾರ್ಯ ಸಾಹಿತ್ಯದ ಮೂಲಕವೂ ಆಗಬೇಕು ಎಂದರು. ಯಾವುದೇ ಪಕ್ಷ ರಾಜಕೀಯ ಸಿದ್ಧಾಂತ ಒಪ್ಪಿಕೊಂಡರೂ, ಜನಪ್ರತಿನಿಧಿಗಳು ಪರಿಷತ್ತಿಗೆ ಗೌರವ ನೀಡಬೇಕು. ಸಾಹಿತ್ಯ ಪರಿಷತ್ ಸಮಾವೇಶಗಳಿಗಷ್ಟೇ ಸೀಮಿತವಾಗದೆ ನಾಡು-ನುಡಿ-ಜನರನ್ನು ಒಳಗೊಂಡಂತೆ ಕೆಲಸ ಮಾಡುತ್ತಿದೆ ಎಂದರು.

    ಜೋಳಿಗೆಯಲ್ಲಿ ಧಾನ್ಯ ಸ್ವೀಕಾರ: ಪಟ್ಟಣದ ಹಳೆಯೂರು ಆಂಜನೇಯಸ್ವಾಮಿ ದೇವಾಲಯದಿಂದ ಕನ್ನಡ ಸಂಘದ ವೇದಿಕೆವರೆಗೆ ಪೂರ್ಣಕುಂಭದೊಂದಿಗೆ ಜಾನಪದ ಮತ್ತು ಶಾಲಾ ಕಲಾ ತಂಡದೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು. ಸಮ್ಮೇಳನದ ಮೆರವಣಿಗೆಯನ್ನು ಮಹಿಳಾ ಪೌರಕಾರ್ಮಿಕರು ಉದ್ಘಾಟನೆ ಮಾಡಿದ್ದು ವಿಶೇಷವಾಗಿತ್ತು. ಮಹಿಳೆಯರಿಗೆ ಬಾಗಿನ ನೀಡಲಾಯಿತು. ಸಮ್ಮೇಳನಾಧ್ಯಕ್ಷರು ಜೋಳಿಗೆ ಹಿಡಿದು ರೈತ ಮಹಿಳೆಯರಿಂದ ಧಾನ್ಯ ಸ್ವೀಕರಿಸಿದರು. ಲೇಖಕ ಸಿ.ಗುರುಮೂರ್ತಿ ಕೊಟಿಗೆಮನೆ ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಿಕೊಟ್ಟರು. ಮಂಜುನಾಥ್ ರಾಜ್ಅರಸ್, ಹುಳಿಯಾರ್ ಶಬ್ಬಿರ್ ನಿರೂಪಿಸಿದರು. ಗಂಗಾಧರ್ ಸ್ವಾಗತಿಸಿದರು.

    ತಾಲೂಕಿನಲ್ಲಿ 305 ಸರ್ಕಾರಿ ಪ್ರಾಥಮಿಕ ಶಾಲೆಗಳು, 19 ಪ್ರೌಢಶಾಲೆಗಳು ಹಾಗೂ ಒಟ್ಟು 125 ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ಮಕ್ಕಳನ್ನು ಕೂರಿಸುವ ಸ್ಥಿತಿಯಿಲ್ಲ. ತಾಲೂಕಿನ ಬೋರನಕಣಿವೆ ಸರ್ಕಾರಿ ಪ್ರೌಢಶಾಲೆಯಲ್ಲಿ ಕೊಠಡಿಗಳಿಲ್ಲದೆ ವಿದ್ಯಾರ್ಥಿಗಳು ಮರದ ಕೆಳಗೆ ಪಾಠ ಕೇಳುವಂತಾಗಿದೆ.
    |ಡಾ.ತಿಮ್ಮನಹಳ್ಳಿ, ವೇಣುಗೋಪಾಲ್, ಸಮ್ಮೇಳನಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts