More

    ತಪ್ಪಿತಸ್ಥರನ್ನು ರಕ್ಷಣೆ ಮಾಡಬೇಡಿ

    ಸಿಂದಗಿ: ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಎದುರು ಆಲಮೇಲ ತಾಲೂಕಿನ ಬಗಲೂರು ಹಾಗೂ ಸಿಂದಗಿ ತಾಲೂಕಿನ ಗುಬ್ಬೆವಾಡ ಗ್ರಾಮದ ಕೂಲಿಕಾರ್ಮಿಕರು, ಸಮರ್ಪಕವಾಗಿ ಕೂಲಿ ಕೊಡದ, ಮಾಡದ ಕಾಮಗಾರಿಗಳ ಹೆಸರಲ್ಲಿ ಬಿಲ್ ಎತ್ತುವಳಿ ಮಾಡಿದ ಪಿಡಿಒ, ಜೆಇ ಮತ್ತು ಕಂಪ್ಯೂಟರ್ ಆಪರೇಟರ್‌ನನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು.

    ಬಗಲೂರು ಗ್ರಾಪಂನಲ್ಲಿನ ಕಂಪ್ಯೂಟರ್ ಆಪರೇಟರ್ ಕಮ್ ಕ್ಲಾರ್ಕ್ ಪರಮೇಶಿ ಹಿಪ್ಪರಗಿ, ಎಲ್ಲದಕ್ಕೂ ಇವನೇ ಅಧಿಕಾರಿ ಎಂಬಂತೆ ತನ್ನಿಚ್ಚೆಯಂತೆ ಕೆಲಸ ಮಾಡುತ್ತಿದ್ದಾನೆ. ತನಗೆ ಬೇಕಾದವರಿಗೆ ಹೆಚ್ಚಿನ ಕೂಲಿ ದಿನಗಳನ್ನು ಕೊಡುವುದು, ನಮ್ಮ ಜಾಬ್‌ಕಾರ್ಡ್ ಬೇಡಿದರೂ ಕೊಡದಿರುವುದು, ವಿನಾಕಾರಣ ಅವುಗಳನ್ನು ರದ್ದು ಪಡಿಸುವುದು, ಗುರುತಿಸಿದ ಸ್ಥಳದಲ್ಲಿ ಕಾಮಗಾರಿ ನಡೆಸದೇ ಬೇರೆಡೆ ಕೆಲಸ ಮಾಡಿಸುವುದು, ಕೆಲಸ ಬೇಕಾದವರು ಜಾಬ್‌ಕಾರ್ಡ್ ಮಾಡಿಸಲು ಗ್ರಾಪಂಗೆ ಬಂದರೆ, ನೆಪಹೇಳಿ, ತಾಪಂಗೆ ಹೋಗಲು ದಬಾಯಿಸುವುದು, ಗಂಡ-ಹೆಂಡತಿ ಜಾಬ್‌ಕಾರ್ಡ ಇದ್ದರೂ ಗಂಡನ ಅಡ್ಡ ಹೆಸರು ಬದಲಾಯಿಸಿ ಅವನಿಗೆ ಮಾತ್ರ ಕೆಲಸದ ದಿನಗಳನ್ನು ನೀಡುವುದು, ಅಲ್ಲದೇ ನಿಗದಿಗೊಂಡ ಸ್ಥಳದಲ್ಲಿ ಕೆಲಸ ಮಾಡಿಸದೇ, ಬಯಲು ಶೌಚದ ಸ್ಥಳಗಳಲ್ಲಿ ಕೆಲಸ ಮಾಡಿಸುವುದು ಮಾಡುತ್ತಿದ್ದು, ಅವರನ್ನು ಅಮಾನತುಗೊಳಿಸುವಂತೆ ಕೂಲಿಕಾರ್ಮಿಕ ಮಹಿಳೆಯರು ಒತ್ತಾಯಿಸಿದರು.

    ಪ್ರಾಂತ ರೈತ ಸಂಘದ ಮುಖಂಡರು ಮಾತನಾಡಿ, ಪಿಡಿಒ ಸಂತೋಷ ಅಲಹಳ್ಳಿ, ಜೆಇ ಪ್ರಕಾಶ ಕಾಟಗಾಂವ ಹಾಗೂ ಡಾಟಾ ಆಪರೇಟರ್ ಸೇರಿ ಉದ್ಯೋಗ ಖಾತರಿ ಯೋಜನೆಯಡಿ ಹಮ್ಮಿಕೊಂಡಿರುವ ಕಾಮಗಾರಿಗಳನ್ನು ಮಾಡದೇ, ಬಿಲ್ ಎತ್ತಿ ನುಂಗಿ ಹಾಕಿದ್ದಾರೆ. ವಾರದ ಹಿಂದೆ ಇಒ ರಾಮು ಅಗ್ನಿ ಅವರು ಕಾಮಗಾರಿ ನಡೆದ ಸ್ಥಳಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಮೇಲ್ನೋಟಕ್ಕೆ ಯಾವುದೇ ಕಾಮಗಾರಿ ನಡೆಸಿಲ್ಲ ಎಂದು ಖಾತ್ರಿ ಪಡೆಸಿಕೊಂಡು ಹೋದರೂ ಇದುವರೆಗೂ ಯಾರ ಮೇಲೂ ಕ್ರಮ ಜರುಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಆರೋಪಕ್ಕೆ ಪ್ರತಿಕ್ರಿಯಿಸಿದ ಇಒ ರಾಮು ಅಗ್ನಿ, ಕೆಲಸದಲ್ಲಿ ನನ್ನ ನಿರ್ಲಕ್ಷೃವಿಲ್ಲ. ನಾನು ಯಾರನ್ನೂ ರಕ್ಷಿಸಿಲ್ಲ. ಮೇಲ್ನೋಟದಲ್ಲಿ ನಿಗದಿಪಡಿಸಲಾದ ಕಾಮಗಾರಿಗಳನ್ನು ಮಾಡದೇ ಇರುವುದು ಕಂಡುಬಂದಿದೆ. ಅಲ್ಲದೇ ಒತ್ತಡದ ಕೆಲಸದ ಮಧ್ಯೆ ಅಕ್ರಮದ ಕುರಿತು ಕ್ರಮಕ್ಕೆ ಮುಂದಾಗಿಲ್ಲ. ಈಗ ನರೇಗಾ ಎಡಿ, ತಾಂತ್ರಿಕ ಸಹಾಯಕರಿಬ್ಬರ ಸಮಿತಿ ಮೂಲಕ ಬಗಲೂರು ಗ್ರಾಮದಲ್ಲಿ ನಡೆದ ಅವ್ಯವಹಾರ ಮತ್ತು ಕಳಪೆ ಕಾಮಗಾರಿಗಳನ್ನು ಇಲಾಖಾ ನಿಯಮದಡಿ ಪರಿಶೀಲನೆ ನಡೆಸಿ, ವರದಿ ನೀಡಲು ಸೂಚಿಸುವೆ. ಅವರ ವರದಿ ಬಂದ ನಂತರ ತಪ್ಪಿತಸ್ಥರ ಮೇಲೆ ಕ್ರಮ ವಹಿಸಲು ಮೇಲಧಿಕಾರಿಗಳಿಗೆ ಶಿಫಾರಸ್ಸು ಮಾಡುವೆ. ಅವರನ್ನು ಅಮಾನತುಗೊಳಿಸಲು ನನಗೆ ಅಧಿಕಾರವಿಲ್ಲ. ಅಲ್ಲದೇ ಯಾವ ಕೂಲಿಕಾರ್ಮಿಕರಿಗೆ ಜಾಬ್‌ಕಾರ್ಡ್ ಸಿಕ್ಕಿಲ್ಲವೋ, ಅವರಿಗೆ ಉದ್ಯೋಗ ಖಾತ್ರಿ ಅಭಿಯಾನದಡಿ ಜಾಬ್‌ಕಾರ್ಡ್ ನೀಡಲಾಗುವುದು ಎಂದರು.

    ಶಾರದಾಬಾಯಿ ಮಠ, ಮಲ್ಲಮ್ಮ ಹಿಪ್ಪರಗಿ, ಭಾಗಮ್ಮ ವಾಲಿಕಾರ, ಸಂಗಮ್ಮ ತೇಲಿ, ಮಲ್ಲಮ್ಮ ಹಿಪ್ಪರಗಿ, ನೀಲಮ್ಮ ಹಂಡಿ, ಭಾಗಮ್ಮ ಮೂರಚಾವರ, ರುಕುಮಾಬಾಯಿ ರಮಗಾ, ಅಂಬವ್ವ ಮಯೂರ, ಚಂದ್ರಭಾಗವ್ವ ಯಾತನೂರ, ಶಾಂಭವಿ ಕೊಟಾರಗಸ್ತಿ, ಸಾವಿತ್ರಿ ಬಡಿಗೇರ, ಸೀತಮ್ಮ ಕಲಕೇರಿ, ಸುಮಂಗಲಾ ಚಾವರ, ಬೌರಮ್ಮ ಕೊಟಾರಗಸ್ತಿ, ಧರ್ಮರಾಜ ಯಂಟಮಾನ, ಚಂದ್ರಕಾಂತ ಸಿಂಗೆ, ದೇವಿಂದ್ರ ಕುರಿಮನಿ, ಶ್ರೀನಿವಾಸ ಓಲೇಕಾರ, ರಮೇಶ ತಳವಾರ, ಪರಶುರಾಮ ಕಾರಗೊಂಡ, ಶಾಂತು ಹೊಸಮನಿ ಇತರರು ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts