More

    ಕೋವಿಡ್ ಭಯ ಬೇಡ, ಎಚ್ಚರಿಕೆ ಇರಲಿ

    ಮಂಡ್ಯ: ಜಿಲ್ಲೆಯಲ್ಲಿ ಒಂದು ಕೋವಿಡ್ ಪ್ರಕರಣ ವರದಿಯಾಗಿದ್ದು, ಸಾರ್ವಜನಿಕರು ಭಯಪಡದೆ ಸರ್ಕಾರ ತಿಳಿಸಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು. ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಮಾರ್ಗಸೂಚಿಯಂತೆ 60 ವರ್ಷ ಮೇಲ್ಪಟ್ಟವರು ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಗರ್ಭಿಣಿಯರು ಹಾಗೂ ಮಕ್ಕಳಿಗೆ ಹಾಲುಣಿಸುವ ತಾಯಂದಿರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಬೇಕು. ಹೆಚ್ಚು ಜನಸಂದಣಿ ಇರುವ ಪ್ರದೇಶದಲ್ಲಿ ಅನವಶ್ಯಕವಾಗಿ ಓಡಾಡುವುದು ಸೇರುವುದು ಬೇಡ ಎಂದು ಸಲಹೆ ನೀಡಿದರು.

    ಆರೋಗ್ಯ ಇಲಾಖೆಯಿಂದ ಜಿಲ್ಲೆಯಲ್ಲಿ ಪ್ರತಿದಿನ 90 ಕೋವಿಡ್ ಪರೀಕ್ಷೆ ನಡೆಸಲು ಗುರಿ ನಿಗದಿಪಡಿಸಲಾಗಿದೆ. ತೀವ್ರತರ ಉಸಿರಾಟದ ಸೋಂಕು ಪ್ರಕರಣಗಳನ್ನು ಪರೀಕ್ಷೆಗೆ ಒಳಪಡಿಸಬೇಕು. ಕೋವಿಡ್ ಪರೀಕ್ಷೆಗೆ ಬೇಕಿರುವ ಸಲಕರಣೆಗಳು, ಸೋಂಕು ಪತ್ತೆಯಾದ ನಂತರ ಚಿಕಿತ್ಸೆಗೆ ಬೇಕಿರುವ ಬೆಡ್ ವ್ಯವಸ್ಥೆ, ಔಷಧಗಳು, ಕಾನ್ಟೆಕ್ಟ್ ಟ್ರೆಸಿಂಗ್‌ಗೆ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

    ತಾಲೂಕು ಮಟ್ಟದ ವೈದ್ಯಾಧಿಕಾರಿಗಳು ಸಭೆ ನಡೆಸಿ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಹೊರ ರಾಜ್ಯ ಹಾಗೂ ದೇಶಗಳಿಗೆ ಪ್ರಯಾಣ ನಡೆಸಿ ಹಿಂದಿರುಗಿದ ನಂತರ ಅವರಿಗೆ ಕೋವಿಡ್ ಲಕ್ಷಣಗಳಿದ್ದಲ್ಲಿ ಪರೀಕ್ಷೆಗೆ ಒಳಪಡಿಸಬೇಕು. ಸಾರ್ವಜನಿಕರು ಶೀತ, ಜ್ವರ, ಕೆಮ್ಮು ಲಕ್ಷಣಗಳು ಇದ್ದಲ್ಲಿ ಮಾಸ್ಕ್ ಧರಿಸಿ ಸಾರ್ವಜನಿಕ ಸ್ಥಳದಿಂದ ದೂರವಿರಬೇಕು ಎಂದು ಸಲಹೆ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ಆರೋಗ್ಯ ಇಲಾಖೆಯ ಕಾರ್ಯಕ್ರಮಾಧಿಕಾರಿಗಳಾದ ಡಾ.ಕುಮಾರ್, ಡಾ.ಅನಿಲ್ ಕುಮಾರ್, ಡಾ. ಸೋಮಶೇಖರ್, ಮಿಮ್ಸ್ ಅಧೀಕ್ಷಕ ಡಾ.ಶ್ರೀಧರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts