More

    ಅಕ್ರಮ ಚಟುವಟಿಕೆ ತಾಣ ಶಿಶುವಿಹಾರ

    ಬೀರೂರು (ಕಡೂರು ತಾ.): ಪಟ್ಟಣದಲ್ಲಿ ದಾನಿಯೋರ್ವ ನಿರ್ವಿುಸಿದ ಭಾರತೀ ಶಿಶುವಿಹಾರ ಕಟ್ಟಡವನ್ನು ಯಾರೂ ಬಳಸಿಕೊಳ್ಳದಿದ್ದರಿಂದ ಹಾಳುಬಿದ್ದಿದೆ. ಸುಸಜ್ಜಿತ ಕಟ್ಟಡವಿದ್ದರೂ ಬಳಸಿಕೊಳ್ಳಲು ಪುರಸಭೆ ನಿರಾಸಕ್ತಿಯಿಂದಾಗಿ ಅಕ್ರಮ ಚಟುವಟಿಕೆ ತಾಣವಾಗಿದೆ.

    1956ರಲ್ಲಿ ದಾನಿ ಮೆಹತಾ ಸಿಂಗಾರಿಬಾಯಿ ಪೂರ್ವಚಂದ್ ಜೈನ್ ಹೆಸರಿನಲ್ಲಿ ಕುಟುಂಬ ವರ್ಗದವರು ನಿರ್ವಿುಸಿದ ಭಾರತಿ ಶಿಶುವಿಹಾರ ಕಟ್ಟಡದಲ್ಲಿ 50 ವರ್ಷಗಳಿಗೂ ಹೆಚ್ಚು ಕಾಲ ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡಿ ತನ್ನದೇ ಆದ ಹೆಸರು ಗಳಿಸಿತ್ತು. ಅಂದಿನ ಪಟ್ಟಣದ ರಾಜಕೀಯ ಮುಖಂಡ ಮಾರ್ಗದ ಮಲ್ಲಪ್ಪ ಅವರು ಈ ಕಟ್ಟಡ ನಿರ್ವಣಕ್ಕೆ ಸರ್ಕಾರದಿಂದ ಸಹ ಸಹಕಾರ ನೀಡಿ ನೆರವಾಗಿದ್ದರು. ಆದರೆ ಮಕ್ಕಳ ಪಾಲಕರಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ವ್ಯಾಮೋಹದಿಂದಾಗಿ ಮಕ್ಕಳು ಬಾರದಿದ್ದರಿಂದ ಕಟ್ಟಡಕ್ಕೆ ಬೀಗ ಹಾಕಲಾಯಿತು.

    ಕಟ್ಟಡವನ್ನು ಹಾಳು ಬಿಡಬಾರದು ಎಂಬ ಉದ್ದೇಶದಿಂದ ಕೆಲ ಸಮಯ ಪಿಜೆಎನ್​ಎಂ ಕಾಲೇಜಿನ ಹಳೇ ವಿದ್ಯಾರ್ಥಿಗಳು ಸೇರಿ ಬಾಲಮಂದಿರ ಸ್ಥಾಪಿಸಿ ಮಕ್ಕಳಿಗೆ ಕಲಿಕೆಗೆ ನೆರವು ನೀಡಿದ್ದರು. ಕಾಲ ಕಳೆದಂತೆ ಇದು ಕೂಡ ಸ್ಥಗಿತಗೊಂಡು ಕೆಲ ಪ್ರತಿಭಾವಂತ ಯುವಕರು ಮಕ್ಕಳಿಗೆ ಶಿಕ್ಷಣ ನೀಡಲು ಉಪಯೋಗಿಸಿಕೊಂಡಿದ್ದರು. ಅದಕ್ಕೂ ರಾಜಕೀಯ ಬೆರೆತು ವಿವಾದವಾಗಿದ್ದರಿಂದ ಬೋಧನೆಯನ್ನೂ ಸ್ಥಗಿತಗೊಳಿಸಲಾಯಿತು. ನಂತರ ಕಟ್ಟಡ ಹಾಳುಬಿದ್ದಿತು. ಕಟ್ಟಡದ ಕಾಂಪೌಂಡ್ ಗೇಟಿಗೆ ಬೀಗ ಹಾಕದ ಪರಿಣಾಮ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಪುರಸಭೆ ಈ ಜಾಗದ ಮುಂಭಾಗವನ್ನು ವಾಣಿಜ್ಯ ಮಳಿಗೆಗಳಿಗೆ ಉಪಯೋಗಿಸಿಕೊಂಡು ಆದಾಯ ಬರುವಂತೆ ಮಾಡಿಕೊಂಡಿದೆಯೆ ವಿನಃ ದಾನಿಗಳು ನೀಡಿರುವ ಜಾಗದಲ್ಲಿರುವ ಶಿಶುವಿಹಾರ ಕಟ್ಟಡ ರಕ್ಷಿಸುವ ಕಾರ್ಯ ಮಾಡಿಲ್ಲ. ಹೀಗಾಗಿ ಈ ಪ್ರದೇಶ ಹಾಳು ಕೊಂಪೆಯಾಗಿದೆ. ಕಟ್ಟಡದಲ್ಲಿದ್ದ ಶಿಕ್ಷಣ ಚಟುವಟಿಕೆ ಪರಿಕರಗಳನ್ನು ಕಳವು ಮಾಡಲಾಗಿದೆ.

    ದಾನದ ಉದ್ದೇಶಗಳಿಗೆ ತಿಲಾಂಜಲಿ ಇಡುವುದನ್ನು ಸ್ಥಳೀಯ ಆಡಳಿತ ಸಂಸ್ಥೆ ಕೈಬಿಟ್ಟು ಕಟ್ಟಡ ಬಳಸಿಕೊಂಡರೆ ದಾನಿಗಳಿಗೆ ಗೌರವ ಸಲ್ಲಿಸಿದಂತೆ, ಅವರ ಉದ್ದೇಶ ಈಡೇರಿದಂತಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts