More

    ಅಮೆರಿಕ-ಚೀನಾ ನಡುವಿನ ವೈಮನಸ್ಯ ತಾರಕಕ್ಕೆ: ಜಿನ್​ಪಿಂಗ್ ಜತೆ ಮಾತನಾಡಲಾರೆ ಎಂದ ಡೊನಾಲ್ಡ್ ಟ್ರಂಪ್

    ವಾಷಿಂಗ್ಟನ್: ಕರೊನಾ ಸೋಂಕಿನ ಸಂಬಂಧ ಅಮೆರಿಕ ಮತ್ತು ಚೀನಾ ಮಧ್ಯೆ ನಡೆಯುತ್ತಿರುವ ತಿಕ್ಕಾಟ ತಾರಕಕ್ಕೆ ಏರಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಜತೆ ಮಾತುಕತೆ ನಡೆಸುವ ಅಗತ್ಯ ತಮಗಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಡಕ್ಕಾಗಿ ಹೇಳಿದ್ದಾರೆ. ಚೀನಾದ ಜತೆಗಿನ ಎಲ್ಲ ಸಂಬಂಧ ಕಡಿದುಕೊಳ್ಳುವ ಇಚ್ಛೆಯನ್ನೂ ವ್ಯಕ್ತಪಡಿಸಿದ್ದಾರೆ.

    ವಿಶ್ವಕ್ಕೆ ಕರೊನಾ ಹಬ್ಬಿಸಿದ ಚೀನಾದ ಬಗ್ಗೆ ಅತ್ಯಂತ ಅಸಮಾಧಾನವಿದೆ. ಇಂಥ ಸಂದರ್ಭದಲ್ಲಿ ಚೀನಾ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಲು ನನಗೆ ಆಸಕ್ತಿ ಇಲ್ಲ. ಕಳೆದ ಜನವರಿಯಲ್ಲಿ ವುಹಾನ್​ನಲ್ಲಿ ಸೋಂಕು ವ್ಯಾಪಕವಾಗುತ್ತಿದ್ದ ಸಂದರ್ಭದಲ್ಲೇ ಚೀನಾದ ಜತೆಗೆ ಮಹತ್ವ ವಾಣಿಜ್ಯ ಒಪ್ಪಂದ ಮಾಡಿಕೊಂಡ ಬಗ್ಗೆ ಖೇದವಿದೆ. ಚೀನಾದ ಜತೆಗಿನ ಸಂಬಂಧಗಳನ್ನು ಮುರಿದುಕೊಳ್ಳಬೇಕು ಎಂಬುದು ನಮ್ಮ ಅಪೇಕ್ಷೆ. ಈ ನಿಟ್ಟಿನಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಮಾಡುತ್ತೇವೆ ಎಂದು ಸಂದರ್ಶನವೊಂದರಲ್ಲಿ ಟ್ರಂಪ್ ತಿಳಿಸಿದ್ದಾರೆ.

    ಇದನ್ನೂ ಓದಿ     ಲಾಕ್‌ಡೌನ್ 4.0: ಕೇಂದ್ರದ ಮಾರ್ಗಸೂಚಿ ಶನಿವಾರ ಪ್ರಕಟ ನಿರೀಕ್ಷೆ- ಏನಿರುತ್ತೆ ಹೊಸ ನಿಯಮದಲ್ಲಿ?

    ಚೀನಾ ವಿರುದ್ಧ 18 ಸೂತ್ರ: ಕರೊನಾ ಸೋಂಕಿನ ಹೊಣೆಯನ್ನು ಚೀನಾ ಹೊತ್ತುಕೊಳ್ಳುವಂತೆ ಮಾಡಲು ಅಮೆರಿಕದ ಸಂಸದ ಥಾಮ್ ಟಿಲ್ಲಿಸ್ 18 ಸೂತ್ರಗಳನ್ನು ನೀಡಿದ್ದಾರೆ. ಸುಳ್ಳು ಹೇಳುವುದು, ಸತ್ಯ ಮರೆಮಾಚುವುದು, ವಂಚನೆ ಮಾಡುವುದು ಚೀನಾದ ಜಾಯಮಾನ. ಇದನ್ನೇ ಕರೊನಾ ವಿಷಯದಲ್ಲೂ ಮಾಡಿದೆ. ಸೋಂಕಿನ ಹೊಣೆಗಾರಿಕೆಯನ್ನು ಚೀನಾ ಹೊರಬೇಕಾದರೆ ಅದರ ವಿರುದ್ಧ ಕೆಲವು ಕ್ರಮಗಳನ್ನು ಕೈಗೊಳ್ಳಬೇಕು ಎಂದಿದ್ದಾರೆ. ಚೀನಾ ತಯಾರಿಕಾ ವಲಯದ ಸರಪಳಿ ತುಂಡರಿಸುವಂತಹ ವಾಣಿಜ್ಯಾತ್ಮಕ ಕ್ರಮ ಅಗತ್ಯ. ಭಾರತ, ವಿಯೆಟ್ನಾಂ ಮತ್ತು ತೈವಾನ್ ಜತೆ ಅಮೆರಿಕದ ಸೇನಾ ಸಂಬಂಧ ವೃದ್ಧಿಯಾಗಬೇಕು. ಅಮೆರಿಕದ ತಂತ್ರಜ್ಞಾನ ಮತ್ತು ಉದ್ಯೋಗವನ್ನು ಕಿತ್ತುಕೊಳ್ಳುತ್ತಿರುವ ಚೀನಾದ ಪ್ರಯತ್ನವನ್ನು ತಡೆಯಲು ನಿರ್ಬಂಧಗಳನ್ನು ಹೇರಬೇಕು. ಚೀನಾಗೆ ಪೂರೈಕೆಯನ್ನು ಹಂತ ಹಂತವಾಗಿ ತಗ್ಗಿಸಬೇಕು. ಚೀನಾದಲ್ಲಿರುವ ಅಮೆರಿಕದ ಉದ್ಯಮಗಳನ್ನು ವಾಪಸು ಕರೆಯಿಸಿಕೊಳ್ಳಬೇಕು. ಚೀನಾದವರ ಹ್ಯಾಕಿಂಗ್ ತಡೆಯಲು ಸೈಬರ್ ಜಾಲವನ್ನು ಭದ್ರಪಡಿಸಬೇಕು. ಇದೇ ವೇಳೆಗೆ ಅಮೆರಿಕದ ಆರ್ಥಿಕತೆ, ಸಾರ್ವಜನಿಕ ಆರೋಗ್ಯ, ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಬೇಕು ಎಂದಿದ್ದಾರೆ.

    ನಮ್ಮ ಮಿತ್ರ ರಾಷ್ಟ್ರಗಳ ಸಾರ್ವಭೌಮತ್ವಕ್ಕೆ ಸವಾಲು ಹಾಕುತ್ತಿರುವ ಚೀನಾವನ್ನು ಬಗ್ಗು ಬಡಿಯಲು ಜಪಾನ್ ಸೇನೆಯ ಮರುವಿನ್ಯಾಸಕ್ಕೆ ಉತ್ತೇಜನ, ದಕ್ಷಿಣ ಕೊರಿಯಾಗೆ ಘಾತುಕ ಶಕ್ತಿಯ ಸೇನಾ ಉಪಕರಣಗಳ ಸರಬರಾಜು ಮಾಡುವುದು ಒಳ್ಳೆಯ ಕಾರ್ಯತಂತ್ರ ಎಂದು ಟಿಲ್ಲಿಸ್ ಹೇಳಿದ್ದಾರೆ. ಅಮೆರಿಕದ ತೆರಿಗೆದಾರರ ಹಣ ಚೀನಾದ ಪಾಲಾಗುವುದನ್ನು ತಡೆಯಬೇಕು, ಚೀನಾದ ಕಂಪನಿಗಳನ್ನು ಅಮೆರಿಕದಲ್ಲಿ ನಿಷೇಧಿಸಬೇಕು ಎಂದು ಸಲಹೆ ನೀಡಿದ್ದಾರೆ.

    ಚೀನಾದ ಜತೆಗೆ ದೊಡ್ಡ ಒಪ್ಪಂದವಾಗಿದ್ದು ಬಹಳ ಖುಷಿ ಕೊಟ್ಟಿತ್ತು. ಆದರೀಗ ಆ ಖುಷಿ ಉಳಿದಿಲ್ಲ. ಒಪ್ಪಂದಕ್ಕೆ ಹಾಕಿದ ಸಹಿ ಮಾಸಿದೆ, ಒಪ್ಪಂದ ಶಾಪವಾಗಿ ಪರಿಣಮಿಸಿದೆ.

    | ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ

    ಕೋವಿಡ್-19 ವಿರುದ್ಧ ಹೋರಾಟದ ವೇಳೆ ಕ್ಸಿ ಜಿನ್​ಪಿಂಗ್ ಜತೆ ಸಂವಹನ ನಿಲ್ಲಿಸುವುದು ಪರಿಣಾಮಕಾರಿಯಾದ ತಂತ್ರಗಾರಿಕೆಯಲ್ಲ. ಏಕೆಂದರೆ ಸೋಂಕನ್ನು ಬಗ್ಗುಬಡಿಯಲು ಇಡೀ ವಿಶ್ವದ ಸಹಕಾರ ಅಗತ್ಯ. ಚೀನಾದ ಜತೆಗೆ ಎಲ್ಲ ವಾಣಿಜ್ಯ ಸಂಬಂಧ ಕಡಿದುಕೊಂಡರೆ ಅಮೆರಿಕ ಆರ್ಥಿಕತೆ ಮೇಲೆ ದೊಡ್ಡ ಹೊಡೆತ ಬೀಳುತ್ತದೆ.

    | ಸ್ಕಾಟ್ ಕೆನಡಿ ವಾಷಿಂಗ್ಟನ್ ಸೆಂಟರ್​ನ ತಜ್ಞ

    ಪ್ರೀತಿ ಕುರುಡು ಎಂದು ಈ ಬೆಂಗಳೂರು ಯುವಕ ಪತ್ನಿ ಜತೆ ಕರೊನಾನೂ ತರೋದಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts