More

    ಪ್ರತಿಷ್ಠೆಯ ಕದನಕ್ಕೆ ಗ್ರಾಮಗಳು ಸಜ್ಜು

    ನಾಗರಾಜ್ ಎನ್. ದೇವಾಡಿಗ ಕೊಪ್ಪ

    ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ಚುನಾವಣೆ ಕಾವು ದಿನೇದಿನೆ ಹೆಚ್ಚಾಗುತ್ತಿದೆ. ಪಕ್ಷಗಳ ಜತೆ ವ್ಯಕ್ತಿಗಳ ಪ್ರತಿಷ್ಠೆಯ ಕಾದಾಟಕ್ಕೆ ಸಜ್ಜಾಗಿವೆ.

    ಮಲೆನಾಡಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಹಿಡಿತ ಸಾಧಿಸಿವೆ. ಅಲ್ಲಲ್ಲಿ ಜೆಡಿಎಸ್ ಕೂಡ ತನ್ನ ಪ್ರಾಬಲ್ಯ ಮೆರೆದಿದೆ. ತಾಲೂಕಿನಲ್ಲಿ ಒಟ್ಟು 22 ಗ್ರಾಪಂಗಳಿದ್ದು, ಈ ಪೈಕಿ 21ಕ್ಕೆ ಚುನಾವಣೆ ನಡೆಯಲಿದೆ. ಹೇರೂರು ಗ್ರಾಪಂ ಅವಧಿ ಇನ್ನೂ ಪೂರ್ಣಗೊಂಡಿಲ್ಲ.

    ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು 15 ಗ್ರಾಪಂಗಳಲ್ಲಿ ಅಧಿಕಾರ ಹಿಡಿದಿದ್ದರು. ಕಾಂಗ್ರೆಸ್ 5 ಹಾಗೂ ಜೆಡಿಎಸ್ ಬೆಂಬಲಿತರು ಒಂದು ಗ್ರಾಪಂನಲ್ಲಿ ಅಧಿಕಾರಕ್ಕೆ ಬಂದಿದ್ದರು. ಕಳೆದ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇದ್ದುದು ಆ ಪಕ್ಷಕ್ಕೆ ವರವಾಗಿ ಪರಿಣಮಿಸಿತ್ತು. ಈ ಬಾರಿ ಕಾಂಗ್ರೆಸ್​ನ ಶಾಸಕರಿದ್ದಾರೆ.

    ಸ್ಥಳೀಯ ಸಮಸ್ಯೆಗಳ ಆಧಾರದ ಮೇಲೆ ಚುನಾವಣೆ ನಡೆಯಲಿದೆ. ಈ ಬಾರಿ ಕಸ್ತೂರಿ ರಂಗನ್ ವರದಿ, ಹಳದಿ ಎಲೆ ರೋಗ, ಅತಿವೃಷ್ಟಿ, ಸೊಪ್ಪಿನ ಬೆಟ್ಟ, ಮೀಸಲು ಅರಣ್ಯ, ಶಾಶ್ವತ ನೀರಾವರಿ ಯೋಜನೆಗಳ ಜತೆ ಸ್ಥಳೀಯ ನಾಯಕರ ವರ್ತನೆ, ಗ್ರಾಮದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಮೇಲೆ ನಡೆಯಲಿದೆ.

    ಹಳ್ಳಿಗಳತ್ತ ಮುಖಂಡರ ಮುಖ: ಮೂರೂ ಪಕ್ಷದ ಮುಖಂಡರು ಹಳ್ಳಿಗಳ ಕಡೆ ಮುಖ ಮಾಡಿದ್ದಾರೆ. ಮತದಾರರನ್ನು ಮುಖಂಡರೇ ನೇರವಾಗಿ ತಲುಪುವ ಯತ್ನ ಮಾಡುತ್ತಿದ್ದಾರೆ. ಹಳ್ಳಿಗಳಲ್ಲಿ ಸಭೆ ನಡೆಸುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯನ್ನು ಬಹುತೇಕ ಪೂರ್ಣಗೊಳಿಸಿವೆ. ಒಂದೇ ಕ್ಷೇತ್ರದಲ್ಲಿ ಹೆಚ್ಚು ಆಕಾಂಕ್ಷಿಗಳಿದ್ದಲ್ಲಿ ಅಭ್ಯರ್ಥಿಗಳ ಆಯ್ಕೆ ವಿಳಂಬವಾಗಿದೆ. ಸ್ಥಳೀಯ ಮುಖಂಡರಿಗೆ ಅಭ್ಯರ್ಥಿ ಆಯ್ಕೆಗೆ ಅವಕಾಶ ನೀಡಲಾಗಿದೆ.

    ಮುಂದಿನ ಚುನಾವಣೆಗೂ ಸಿದ್ಧತೆ: ಗ್ರಾಪಂ ಚುನಾವಣೆ ಆಕಾಂಕ್ಷಿಗಳ ಜತೆಗೆ ಮುಂದಿನ ನಾಲ್ಕೈದು ತಿಂಗಳಲ್ಲಿ ಎದುರಾಗಲಿರುವ ತಾಪಂ, ಜಿಪಂ ಚುನಾವಣೆಯ ಆಕಾಂಕ್ಷಿಗಳು ಕೂಡ ಸಕ್ರಿಯರಾಗಿದ್ದಾರೆ. ಮುಂಬರುವ ಚುನಾವಣೆಗಳಿಗೂ ಭದ್ರ ತಳಪಾಯ ಹಾಕುವ ಕೆಲಸ ಪಕ್ಷಗಳಿಂದ ಆಗುತ್ತಿದೆ.

    ಅಧಿಕಾರಿಗಳಿಗೆ ಸವಾಲು: ಕರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಹಗಲಿರುಳು ಕಾರ್ಯನಿರ್ವಹಿಸಿ, ನಂತರ ಎದುರಾದ ಮಹಾಮಳೆಯಲ್ಲೂ ಹೆಚ್ಚು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಕಂದಾಯ, ಪೊಲೀಸ್ ಹಾಗೂ ಇತರ ಇಲಾಖೆಗೆ ಚುನಾವಣೆ ಸವಾಲಾಗಿ ಪರಿಣಾಮಿಸಿದೆ. ಮಾರ್ಚ್​ನಿಂದ ಒಂದಲ್ಲಾ ಒಂದು ಕೆಲಸದ ಒತ್ತಡದ ನಡುವೆ ಕೆಲಸ ಮಾಡಿರುವ ಅಧಿಕಾರಿಗಳಿಗೆ ವರ್ಷಾಂತ್ಯದಲ್ಲೂ ಗ್ರಾಪಂ ಚುನಾವಣೆ ಎದುರಿಸಬೇಕಾದ ಒತ್ತಡದಲ್ಲಿದ್ದಾರೆ.

    ಕೈ-ಕಮಲ ನೇರ ಫೈಟ್: ಗ್ರಾಪಂ ಚುನಾವಣೆ ಪಕ್ಷದ ಚಿಹ್ನೆಯಡಿ ನಡೆಯದಿದ್ದರೂ ಪಕ್ಷಗಳ ಆಣತಿಯಂತೆಯೇ ನಡೆಯುತ್ತದೆ. ಕೇತ್ರದಲ್ಲಿ ಶಾಸಕ ಸ್ಥಾನ ಹೊಂದಿರುವ ಕಾಂಗ್ರೆಸ್​ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಅನಿರ್ವಾಯತೆಯೂ ಎದುರಾಗಿದೆ. ಪಪಂ, ಟಿಎಪಿಸಿಎಂಎಸ್, ಡಿಸಿಸಿ ಬ್ಯಾಂಕ್ ಚುನಾವಣೆಗಳಲ್ಲಿ ಮುಗ್ಗರಿಸಿರುವ ಕಾಂಗ್ರೆಸ್​ಗೆ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಬಿಜೆಪಿಗೆ ಹಾಲಿ ಗೆದ್ದಿರುವ ಗ್ರಾಪಂಗಳನ್ನು ಉಳಿಸಿಕೊಳ್ಳುವ ಹಾಗೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಒತ್ತಡ ಎದುರಾಗಿದೆ. ಕೊಪ್ಪ ತಾಲೂಕಿನಲ್ಲಿ ದಶಕಗಳಿಂದ ಬಿಜೆಪಿ ಅಧಿಕಾರ ಹಿಡಿಯುತ್ತ ಬಂದಿದೆ. ಇನ್ನು ಜೆಡಿಎಸ್​ನಲ್ಲಿ ಚುನಾವಣೆ ಸಂದರ್ಭ ಮಾತ್ರ ಚುರುಕಾಗುವುದು ಕಾರ್ಯಕರ್ತರಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ. ಡಿಸಿಸಿ ಬ್ಯಾಂಕ್ ಚುನಾವಣೆ ಸೇರಿ ಕೆಲವು ಪಿಎಸಿಎಸ್ ಚುನಾವಣೆಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಜತೆ ಮೈತ್ರಿಯಾಗಿತ್ತು. ಜೆಡಿಎಸ್ ಈ ಬಾರಿ ಕಾಂಗ್ರೆಸ್ ಕೈಹಿಡಿದರೂ ಅಚ್ಚರಿ ಇಲ್ಲ.

    ಜಿಪಂ ಅಧ್ಯಕ್ಷರ ನಡೆ ಕುತೂಹಲ: ಜಿಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರದಲ್ಲಿ ಬಿಜೆಪಿ ಮುಖಂಡರ ವಿರುದ್ಧ ಸಿಡಿದೆದ್ದಿರುವ ಸುಜಾತ ಕೃಷ್ಣಪ್ಪ ಅವರ ನಡೆ ಕುತೂಹಲ ಕೆರಳಿಸಿದೆ. ಕಳೆದ ಜಿಪಂ ಚುನಾವಣೆಯಲ್ಲಿ ಮೇಗುಂದ ಹೋಬಳಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು. ಈಗ ಗ್ರಾಪಂ ಚುನಾವಣೆಗೆ ಯಾರ ಪರ ಪ್ರಚಾರ ನಡೆಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಈ ಬಗ್ಗೆ ವಿಜಯವಾಣಿ ಜತೆ ಮಾತನಾಡಿದ ಅವರು, ಚುನಾವಣೆಯ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಈವರೆಗೆ ಯಾರೂ ನನ್ನ ಬೆಂಬಲ ಕೇಳಿಲ್ಲ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts