More

    ಸಾಲಕ್ಕಾಗಿ ನಕಲಿ ದಾಖಲೆ ಸಲ್ಲಿಸಿದ ವೈದ್ಯೆ ಅರೆಸ್ಟ್

    ಉಡುಪಿ: ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕಿಗೆ ವಂಚಿಸಲು ಯತ್ನಿಸಿದ ಆರೋಪಕ್ಕೆ ಸಂಬಂಧಿಸಿ ವೈದ್ಯೆ ಸಹಿತ ಇಬ್ಬರನ್ನು ಕಾಪು ಪೊಲೀಸರು ಬಂಧಿಸಿದ್ದಾರೆ. ಉಪ್ಪೂರು ಸಾಲ್ಮರ ನಿವಾಸಿ ಡಾ.ರಿನೆಟ್ ಸೋನಿಯಾ ಡಿಸೋಜ(37) ಹಾಗೂ ಸಾಲಿಗ್ರಾಮ ಚಿತ್ರಪಾಡಿ ನಿವಾಸಿ ವಿಜಯ ಕೊಠಾರಿ(43)ಆರೋಪಿಗಳು.

    ಡಾ.ರಿನೆಟ್ ಸೋನಿಯ ಡಿಸೋಜ ಎಂಬಾಕೆ ತಾನು ಮಣಿಪಾಲ ಮಾಹೆಯಲ್ಲಿ ವೈದ್ಯೆ ಮತ್ತು ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದು, ಮಾಸಿಕ ವೇತನ 2.66 ಲಕ್ಷ ರೂ., ಎಂದು ಹೇಳಿ ಕಾರು ಪಡೆದುಕೊಳ್ಳಲು ಸಾಲ ಕೊಡುವ ಬಗ್ಗೆ ಕಾಪು, ಮೂಡಬೆಟ್ಟುವಿನ ಬ್ಯಾಂಕ್ ಆಫ್ ಬರೋಡಾ ಶಾಖೆಯ ಮ್ಯಾನೇಜರ್ ಅಲ್ವಿನಾ ಡಿಸೋಜ ಅವರಿಗೆ ಮನವಿ ಮಾಡಿದ್ದರು. ಸಾಲದ ಅರ್ಜಿಯೊಂದಿಗೆ ಸಲ್ಲಿಸಿದ ವಿವರಗಳು ಹಾಗೂ ಮಣಿಪಾಲ ಅಕಾಡೆಮಿ ಹೈಯರ್ ಎಜುಕೇಶನ್ ಸಂಸ್ಥೆಯ ವೇತನ ಸ್ಲಿಪ್‌ಗಳನ್ನು ಬ್ಯಾಂಕ್‌ನವರು ಪರಿಶೀಲಿಸಿದಾಗ ಡಾ.ರಿನೆಟ್ ಸೋನಿಯಾ ಡಿಸೋಜ ಮಾಹೆಯಲ್ಲಿ ಉದ್ಯೋಗದಲ್ಲಿ ಇರುವುದಿಲ್ಲ ಎಂಬ ಮಾಹಿತಿಯನ್ನು ಸಂಸ್ಥೆ ತಿಳಿಸಿದೆ. ಆರೋಪಿಯು ನಕಲಿ ದಾಖಲೆ ಸೃಷ್ಠಿಸಿ ಬ್ಯಾಂಕಿಗೆ ಮೋಸ ಮಾಡಿ ಸಾಲ ಪಡೆಯುವ ಉದ್ದೇಶ ಹೊಂದಿದ್ದ ಬಗ್ಗೆ ಕಾಪು ಠಾಣೆಯಲ್ಲಿ ಜುಲೈ24 ರಂದು ಬ್ಯಾಂಕ್ ವ್ಯವಸ್ಥಾಪಕರು ದೂರು ದಾಖಲಿಸಿದ್ದರು.
    ತನಿಖೆ ನಡೆಸಿದ ಕಾಪು ಪೊಲೀಸರು ಡಾ.ರಿನೆಟ್ ಡಿಸೋಜ ಅವರನ್ನು ಬಂಧಿಸಿದ್ದಾರೆ.ವಿಚಾರಣೆ ವೇಳೆ ವಿಜಯ ಕೊಠಾರಿ ಎಂಬಾತ ಸಾಲಕ್ಕೆ ಅರ್ಜಿ ಸಲ್ಲಿಸಲು ನಕಲಿ ದಾಖಲಾತಿ ಮಾಡಿಕೊಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದಳು. ಪೊಲೀಸರು ವಿಜಯ ಕೊಠಾರಿಯನ್ನು ಬಂಧಿಸಿ, ಆತ ನಕಲಿ ದಾಖಲೆ ತಯಾರಿಸುತ್ತಿದ್ದ ಲ್ಯಾಪ್‌ಟಾಪ್‌ನ್ನು ವಶಪಡಿಸಿಕೊಂಡಿದ್ದಾರೆ.

    ಕಾಪು ಎಸೈ ರಾಜಶೇಖರ್ ಬಿ.ಸಾಗನೂರ್, ಅಪರಾಧ ವಿಭಾಗದ ಎಸೈ ಐ.ಆರ್.ಗಡ್ಡೆಕರ್, ಪ್ರೊಬೆಷನರಿ ಎಸೈ ಅನಿಲ್ ಮಾದರ, ಸಿಬ್ಬಂದಿ ರವಿ ಕುಮಾರ್, ರಮೇಶ್, ಮಹಾಬಲ ಶೆಟ್ಟಿಗಾರ್, ಸುಲೋಚನಾ, ಶ್ರೀನಾಥ, ಪರಶುರಾಮ, ಅರುಣ್ ಕುಮಾರ್, ಆನಂದ ಕಾರ್ಯಾಚರಣೆ ನಡೆಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts