More

    ಅರಣ್ಯ ಪ್ರವಾಸೋದ್ಯಮಕ್ಕೆ ಅವಕಾಶ ನೀಡದಿರಿ

    ಗೋಣಿಕೊಪ್ಪ: ವನ್ಯಜೀವಿಗಳ ಸ್ವಚ್ಛಂದ ಬದುಕಿಗೆ ತೊಡಕಾಗಬಲ್ಲ ಅರಣ್ಯ ಪ್ರವಾಸೋದ್ಯಮಕ್ಕೆ ಅವಕಾಶ ನೀಡಬಾರದೆಂದು ರೈತ ಸಂಘದ ಕೊಡಗು ಜಿಲ್ಲಾ ಘಟಕ ಒತ್ತಾಯಿಸಿದೆ.

    ತಿತಿಮತಿಯ ಅರಣ್ಯ ಇಲಾಖೆಯ ಅತಿಥಿಗೃಹದಲ್ಲಿ ಶನಿವಾರ ನಾಗರಹೊಳೆ ವನ್ಯಜೀವಿ ವಿಭಾಗ, ಕೊಡಗು ಮತ್ತು ಹುಣಸೂರು ವನ್ಯಜೀವಿ ವಿಭಾಗದ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಈ ಒತ್ತಾಯ ಕೇಳಿ ಬಂತು.

    ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಮಾತನಾಡಿ, ಮತ್ತಿಗೋಡು ಸಾಕಾನೆ ಶಿಬಿರದ ಪ್ರವಾಸೋದ್ಯಮ ಚಟುವಟಿಕೆಯನ್ನು ತಕ್ಷಣ ನಿಲ್ಲಿಸಬೇಕು. ತಿತಿಮತಿ- ಹುಣಸೂರು ಹೆದ್ದಾರಿಯಲ್ಲಿ ವಾಹನದಟ್ಟಣೆ ಹೆಚ್ಚಾಗಿ ತೊಂದರೆಯಾಗುತ್ತಿದೆ. ಅರಣ್ಯ ಪ್ರದೇಶದಲ್ಲಿ ಹೊಸ ಪ್ರವಾಸೋದ್ಯಮ ಚಟುವಟಿಕೆಗೆ ಅವಕಾಶ ನೀಡಬಾರದು. ಅರಣ್ಯ ಪ್ರವಾಸೋದ್ಯಮದಿಂದ ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟರು.

    ಆನೆಚೌಕೂರು ವಲಯದ ಮತ್ತಿಗೋಡುನಲ್ಲಿ ಸ್ಥಾಪಿಸಲಾಗಿರುವ ಸಾಕಾನೆ ಶಿಬಿರ ವೈಜ್ಞಾನಿಕವಾಗಿಲ್ಲ. ದುಬಾರೆ ಸಾಕಾನೆ ಶಿಬಿರದಂತೆ ಇಲ್ಲಿ ನೀರಿನ ಸೌಲಭ್ಯವಿಲ್ಲ. ಮತ್ತಿಗೋಡು ಅರಣ್ಯ ವ್ಯಾಪ್ತಿಯಲ್ಲಿ ಹಸಿರುಕಾಡನ್ನು ಕಾಣಲು ಸಾಧ್ಯವಿಲ್ಲ. ಇಲ್ಲಿ 34 ರಿಂದ 38 ಡಿಗ್ರಿ ತಾಪಮಾನವಿರುತ್ತದೆ. ಹೀಗಿರುವಾಗ ಶಿಬಿರದ ಆವರಣದಲ್ಲಿ ಸಾಕಾನೆ ವೀಕ್ಷಣಾ ಕೇಂದ್ರವನ್ನು ಸ್ಥಾಪಿಸುವುದು ಯಾವ ಪರಿಸರ ಪ್ರವಾಸೋದ್ಯಮಕ್ಕೆ ಪೂರಕ? ಎಂದು ಸ್ಥಳೀಯ ಪ್ರಮುಖರಾದ ಚೆಪ್ಪುಡೀರ ರಾಮಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.

    ಸಭೆಯ ಅಧ್ಯಕ್ಷತೆ ವಹಿಸಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಾಗರಹೊಳೆ ಹುಲಿ ಯೋಜನೆಯ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ಮಾತನಾಡಿ, ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಯಾವುದೇ ಹೊಸ ಯೋಜನೆಯನ್ನು ಜಾರಿಗೊಳಿಸುತ್ತಿಲ್ಲ. ರಾಜ್ಯಾದ್ಯಂತ ಇರುವ ಸಾಕಾನೆ ಶಿಬಿರಗಳನ್ನು ಉನ್ನತೀಕರಣಗೊಳಿಸಬೇಕೆಂಬ ರಾಜ್ಯ ಸರ್ಕಾರದ ನಿರ್ಧಾರದಂತೆ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಕೆಲವು ಅಭಿವೃದ್ಧಿ ಕಾರ್ಯಗಳನ್ನು ಮಾತ್ರ ಕೈಗೊಳ್ಳಲಾಗಿದೆ. ಸಾಕಾನೆಗಳಿಗೆ ಆಹಾರ ತಯಾರಿಸುವ ಕೊಠಡಿ, ಸ್ನಾನದ ಕೊಳ ಮೊದಲಾದವುಗಳ ಜತೆಗೆ ಸಾರ್ವಜನಿಕರಿಗೆ ಬೆಳಗ್ಗೆ ಮತ್ತು ಸಂಜೆ ಸಾಕಾನೆಗಳನ್ನು ಹತ್ತಿರದಿಂದ ನೋಡಲು ಗ್ಯಾಲರಿ ನಿರ್ಮಿಸಲಾಗಿದೆ ಎಂದರು.

    ಕಾಡಾನೆಗಳು ನಾಡಿಗೆ ಬರುವುದನ್ನು ತಡೆಗಟ್ಟಲು ಅರಣ್ಯದಂಚಿನಲ್ಲಿ ನಿರ್ಮಿಸಬೇಕಿರುವ ರೈಲ್ವೆ ಬ್ಯಾರಿಕೇಡ್ ಮತ್ತು ಅಗತ್ಯವಿರುವಲ್ಲಿ ಆನೆ ಕಂದಕಗಳನ್ನು ನಿರ್ಮಿಸುವ ಸಂಬಂಧ ಈಗಾಗಲೇ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಕಾಡಾನೆಗಳ ಚಲನವಲನಗಳ ಸೂಕ್ಷ್ಮವಾಗಿ ಪರಿಶೀಲಿಸಿ ಅವುಗಳು ಅರಣ್ಯದಂಚಿನಲ್ಲಿದ್ದರೆ ಸ್ಥಳೀಯ ಬೆಳಗಾರಿಗೆ ಎಸ್‌ಎಂಎಸ್ ಮೂಲಕ ಮಾಹಿತಿ ನೀಡುವ ಕೆಲಸವನ್ನು ಮತ್ತಷ್ಟು ತುರ್ತಾಗಿ ಮಾಡಲಾಗುವುದು ಎಂದು ತಿಳಿಸಿದರು.

    ಸಭೆಯಲ್ಲಿ ಹುಣಸೂರು ವನ್ಯಜೀವಿ ಉಪ ವಿಭಾಗದ ಎಸಿಎಫ್ ದಯಾನಂದ್, ನಾಗರಹೊಳೆ ವನ್ಯಜೀವಿ ಉಪ ವಿಭಾಗದ ಎಸಿಎಫ್ ಅನುಷಾ, ನಾಗರಹೊಳೆ ವನ್ಯಜೀವಿ ವಲಯ ಅರಣ್ಯಾಧಿಕಾರಿ ಜಿಷಾನ್, ಆನೆಚೌಕೂರು ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಸುಬ್ರಮಣಿ, ರೈತ ಸಂಘದ ಪ್ರಮುಖರಾದ ಸಿ.ಎಂ. ಸುಜಯ್ ಬೋಪಯ್ಯ, ಪುಚ್ಚಿಮಾಡ ಸುಭಾಷ್, ಹಿರಿಯ ವಕೀಲ ಹೇಮಚಂದ್ರ, ಚೆಪ್ಪುಡೀರ ಕಾರ್ಯಪ್ಪ ಸೇರಿದಂತೆ ರೈತ ಸಂಘದ ಪ್ರಮುಖರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts