

ಗೋಕರ್ಣ: ಆಧುನಿಕ ಪ್ರವಾಸೋದ್ಯಮದಲ್ಲಿ ಪ್ರವಾಸಿ ತಾಣಗಳ ಮೂಲಭೂತ ಅಗತ್ಯಗಳಲ್ಲಿ ವಿದ್ಯುತ್ ವ್ಯವಸ್ಥೆ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ.
ಪ್ರವಾಸಿ ತಾಣಗಳಲ್ಲಿ ನೀರು, ಬೆಳಕು, ವಾತಾಯನ, ಹೋಟೆಲ್, ರೆಸ್ಟೋರೆಂಟ್ ಇತ್ಯಾದಿ ಎಲ್ಲ ಮೂಲ ಸೌಕರ್ಯಗಳ ಬಲಾಬಲ ಮತ್ತು ಕಾರ್ಯನಿರ್ವಹಣೆಗಳಿಗೆ ಸಂಪೂರ್ಣವಾಗಿ ವಿದ್ಯುತ್ ವ್ಯವಸ್ಥೆಯೇ ಏಕಮೇವ ಆಧಾರ ಸ್ತಂಭವಾಗಿದೆ.
ವಿದ್ಯುತ್ ನಿರ್ವಹಣೆ ವ್ಯವಸ್ಥೆ ಅವ್ಯವಸ್ಥಿತವಾದರೆ ಇಡೀ ಪ್ರವಾಸೋದ್ಯಮ ವಹಿವಾಟು ಸ್ತಬ್ಧವಾಗುವ ಅಪಾಯವಿದೆ.
ಈ ಹಿನ್ನೆಲೆಯಲ್ಲಿ ವರ್ಷವೊಂದಕ್ಕೆ ಲಕ್ಷಾಂತರ ದೇಶ-ವಿದೇಶಗಳ ಪ್ರವಾಸಿಗರು ಭೇಟಿ ಕೊಡುವ ಗೋಕರ್ಣದಂತಹ ಟೂರಿಸ್ಟ್ ಹಬ್‌ನಲ್ಲಿ ವ್ಯತ್ಯಯವಿಲ್ಲದ ನಿರಂತರ ಸುಸ್ಥಿರ ವಿದ್ಯುತ್ ಪೂರೈಕೆ ಹೆಸ್ಕಾಂನ ಗುರುತರ ಹೊಣೆಯಾಗಿ ಪರಿಣಮಿಸಿದೆ.
ಆದರೆ ವರ್ತಮಾನದಲ್ಲಿ ಗೋಕರ್ಣದಲ್ಲಿರುವ ವಿದ್ಯುತ್ ಸರಬರಾಜು ವ್ಯವಸ್ಥೆ 6-7 ದಶಕಗಳ ಹಿಂದಿನದು. ಇದೇ ಕಾರಣಕ್ಕಾಗಿ ಹೆಸ್ಕಾಂ ಸಿಬ್ಬಂದಿ ಅಡೆತಡೆ ಇಲ್ಲದಂತೆ ದಿನದ 24 ತಾಸು ಕರೆಂಟ್ ಒದಗಿಸಲು ಜೀವವನ್ನು ಪಣಕ್ಕೊಡ್ಡಿ ಕೆಲಸ ಮಾಡಬೇಕಾದ ಅನಿವಾರ್ಯತೆಯಿದೆ.
ಗೋಕರ್ಣಕ್ಕೆ 35 ಕಿಮೀ ದೂರದ ಕುಮಟಾದ 33 ಕೆವಿ ಗ್ರಿಡ್‌ನಿಂದ ವಿದ್ಯುತ್ ಸರಬರಾಜಾಗುತ್ತದೆ. ಗೋಕರ್ಣಕ್ಕೆ ಬರುವ ಈ ಹೈಟೆನ್ಷನ್ ಲೈನ್ ಮಿರ್ಜಾನ್‌ನಿಂದ ಬರ್ಗಿ ಮೂಲಕ ಹಿರೇಗುತ್ತಿಯ ತನಕ 15 ಕಿಮಿ ಗುಡ್ಡ ಪ್ರದೇಶದ ದಟ್ಟವಾದ ಕಗ್ಗತ್ತಲ ಕಾಡನ್ನು ಹಾದು ಬರುತ್ತದೆ. ಈ ಭಾಗದ ಕಾಡಿನಲ್ಲಿ ಸರಿಯಾದ ರಸ್ತೆಯೂ ಇಲ್ಲ. ದ್ವಿಚಕ್ರವಾಹನಗಳೂ ಸಂಚರಿಸಲು ಸಾಧ್ಯವಿಲ್ಲ. ಈ ಕಾಡಿನಲ್ಲಿ ವಿದ್ಯುತ್ ತಂತಿ ಮತ್ತು ಕಂಭಗಳು ಹಾನಿಗೊಳಗಾಗಿ ವಿದ್ಯುತ್ ಕೈಕೊಟ್ಟರೆ ಕಾಲ್ನೆಡಿಗೆಯೇ ಏಕಮೇವ ಆಧಾರ. ಅದರಲ್ಲಿಯೂ ರಾತ್ರಿ ವೇಳೆಯಲ್ಲಿ ಕೆಲಸ ಮಾಡ ಬೇಕೆಂದರೆ ಕೈಯ್ಯಲ್ಲಿನ ಬ್ಯಾಟರಿ ಬೆಳಕೇ ಗತಿ. ವಿಶೇಷವಾಗಿ ಮಳೆಗಾಲದ ನಾಲ್ಕು ತಿಂಗಳು ಇಂತಹ ಕಡೆಗಳಲ್ಲಿ ಸಿಬ್ಬಂದಿ ಜೀವವನ್ನು ಪಣಕ್ಕೊಡ್ಡಿ ಕೆಲಸ ಮಾಡುತ್ತ ಬಂದಿದ್ದಾರೆ.
ಸಿಬ್ಬಂದಿ ಎದುರಿಸುತ್ತಿರುವ ಈ ಅಪಾಯವನ್ನು ತಪ್ಪಿಸಲು ಜಿಲ್ಲಾ ಹೆಸ್ಕಾಂ ವಿಭಾಗ ಕಳೆದ ಅನೇಕ ವರ್ಷಗಳಿಂದ ಈ 15 ಕಿ.ಮೀ, ದಟ್ಟಾರಣ್ಯದಲ್ಲಿನ ಲೈನ್ ಸ್ಥಳ ಬದಲಿಸಿ ಪ್ರತ್ಯೇಕ ಕಾರಿಡಾರ್ ನಿರ್ಮಿಸಲು ಸತತ ಪ್ರಯತ್ನ ನಡೆಸಿದೆ. ಆದರೆ ಸರ್ಕಾರಿ ಜಾಗದ ಅಭಾವದಿಂದಾಗಿ 1963ರಿಂದ ಜಾರಿಯಲ್ಲಿರುವ ಈ ಹೈಟೆನ್ಷನ್ ಮಾರ್ಗವನ್ನು ಬದಲಾಯಿಸಲಾಗದೆ ಯಥಾಸ್ಥಿತಿಗೆ ಶರಣಾಗಬೇಕಾಗಿದೆ.
ಈ ನಡುವೆ ಪ್ರಸ್ತುತ ಇರುವ ಹಳೆಯ ಹೈಟೆನ್ಷನ್ ಮಾರ್ಗಕ್ಕೆ ಪರ್ಯಾಯವಾಗಿ ಗೋಕರ್ಣವನ್ನು ಕೇಂದ್ರವಾಗಿಸಿ ಪ್ರತ್ಯೇಕವಾದ 110 ಕೆ.ವಿ. ಗ್ರಿಡ್ ಸ್ಥಾಪಿಸುವ ಬಗ್ಗೆ ಇಲಾಖೆ ಪ್ರಯತ್ನ ನಡೆಸಿ 2011ರಲ್ಲಿ ಸರ್ವೆ ಕೂಡ ನಡೆಸಲಾಯಿತು. ಆ ದಿನಗಳಲ್ಲಿ ಸ್ಥಳೀಯವಾಗಿ ಕೇವಲ ಎರಡೂವರೆ ಮೆ.ವ್ಯಾ.ನಿಂದ 3 ಮೆ.ವ್ಯಾ ವಿದ್ಯುತ್ ಬಳಸಲಾಗುತ್ತಿತ್ತು. ಇದರ ಜತೆಗೆ ಹೊಸ ಗ್ರಿಡ್ ಸ್ಥಾಪನೆಗೆ ಅಗತ್ಯವಿರುವ ವಿದ್ಯುತ್ ಸಂಪರ್ಕವನ್ನು ಪಡೆದಿರದ ಗೋಕರ್ಣದ ಒಟ್ಟಾರೆ ಆದಾಯವೂ ಹೊಸ ಗ್ರಿಡ್ ಪ್ರಾರಂಭಕ್ಕೆ ಅಗತ್ಯವಾದ ಪ್ರಮಾಣದಲ್ಲಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ತಾಂತ್ರಿಕ ಕಾರಣವನ್ನು ಮುಂದಿಟ್ಟು ಆ ಯೋಜನೆ ಅಲ್ಲಿಗೆ ನಿಂತಿತು.
ಆ ನಂತರವೂ ಇಲಾಖೆ ಗ್ರಿಡ್‌ಗಾಗಿ ಬೇರೆ ಬೇರೆ ಕಡೆಗಳಲ್ಲಿ ಸ್ಥಳ ಪರಿಶೀಲನೆ ಮುಂದುವರಿಸಿತ್ತು. ಈ ನಡುವೆ ಏರು ಗತಿಯ ಪ್ರವಾಸೋದ್ಯಮದಿಂದಾಗಿ ಗೋಕರ್ಣದಿಂದ ಮಿರ್ಜಾನ್ ತನಕ 22 ಕಿಮಿ ವ್ಯಾಪ್ತಿ ಹೊಂದಿರುವ ಗೋಕರ್ಣ ವಿದ್ಯುತ್ ವಿಭಾಗದ ದಿನದ ವಿದ್ಯುತ್ ಬಳಕೆ ಏಳು ಮೆ.ವ್ಯಾಗೆ ಮುಟ್ಟಿತು. ಏಳು ಸಾವಿರಕ್ಕೂ ಹೆಚ್ಚಿನ ವಾಣಿಜ್ಯ ವಿದ್ಯುತ್ ಸಂಪರ್ಕ ಸಹಿತ ಒಟ್ಟೂ ವಿದ್ಯುತ್ ಸಂಪರ್ಕ 18 ಸಾವಿರ ದಾಟಿ ಮಾಸಿಕ ಆದಾಯ ಒಂದೂವರೆ ಕೋಟಿಯಿಂದ ಎರಡು ಕೋಟಿಗೆ ಏರಿಕೆ ಕಂಡು ಆರ್ಥಿಕವಾಗಿ ತಾಲೂಕಿನಲ್ಲಿ ಗೋಕರ್ಣ ಸೆಕ್ಷನ್ ಎರಡನೆ ಸ್ಥಾನಕ್ಕೆ ಮುಟ್ಟುವಂತಾಯಿತು. ಈ ಎಲ್ಲ ಕಾರಣಗಳಿಂದ ನಿರಂತರ ಪ್ರಯತ್ನದಲ್ಲಿದ್ದ ಜಿಲ್ಲಾ ಹೆಸ್ಕಾಂ ವಿಭಾಗ ಈಗಿರುವ 33 ಕೆವಿ ಗ್ರಿಡ್ ಜತೆಗೆ ಹೊಸದಾದ 110 ಕೆವಿ ಹೊಸ ಗ್ರಿಡ್‌ಗೆ ಸರ್ಕಾರದಿಂದ 2022ರಲ್ಲಿ ಮಂಜೂರಾತಿ ಪಡೆಯಲು ಯಶಸ್ವಿಯಾಯಿತು.
ದೇವಿಗದ್ದೆಯಲ್ಲಿ ಗೋಕರ್ಣವನ್ನು ಕೇಂದ್ರವಾಗಿಸಿ ಹೊಸದಾದ 110 ಕೆವಿ ವಿದ್ಯುತ್ ಗ್ರಿಡ್ ಸ್ಥಾಪಿಸಲು ಈಗಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಮಂಜೂರಿ ಪಡೆಯಲಾಗಿದೆ. ಈ ಭೂಮಿ ಅರಣ್ಯ ಇಲಾಖೆಗೆ ಸೇರಿರುವ ಹಿನ್ನೆಲೆಯಲ್ಲಿ ಕಾರವಾರ ಅರಣ್ಯ ವಿಭಾಗದಿಂದ ಈಗಾಗಲೇ ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಜಾಗ ಮಂಜೂರಾತಿಗೆ ಮನವಿ ಸಲ್ಲಿಸಲಾಗಿದೆ. ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಆದಷ್ಟು ಬೇಗ ಗ್ರಿಡ್ ಕಾಮಗಾರಿಗೆ ಇಲಾಖೆ ಮುಂದಾಗುವ ಸಾಧ್ಯತೆಯಿದೆ.
ಪ್ರಮೋದ ಗೌಡ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಯೋಜನಾ ವಿಭಾಗ, ಕೆಪಿಟಿಸಿಎಲ್ ಕಾರವಾರ. ಕೋಟ್
ಹೊಸ 110 ಗ್ರಿಡ್ ಸ್ಥಾಪನೆಗೆ ಗೋಕರ್ಣ ಮತ್ತು ಅಂಕೋಲಾ ತಾಲೂಕಿಗೆ ಅನುಕೂಲಕರವಾದ ಮಾದನಗೇರಿ ಬಳಿಯ ಅಂಕೋಲಾ ತಾಲೂಕಿನ ದೇವಿಗದ್ದೆಯನ್ನು ಜಿಲ್ಲಾ ಕೆಪಿಟಿಸಿಎಲ್ ಯೋಜನಾ ವಿಭಾಗ ಆಯ್ಕೆ ಮಾಡಿತು. ಅರಣ್ಯ ಇಲಾಖೆಗೆ ಸೇರಿದ ದೇವಿಗದ್ದೆಯ 83.79 ಗುಂಟೆ ಸ್ಥಳಕ್ಕಾಗಿ ಅರಣ್ಯ ಇಲಾಖೆಯ ಮಂಜೂರಾತಿಗೆ ಪ್ರಯತ್ನಿಸಿದ ಕೆಪಿಟಿಸಿಎಲ್ ಜಿಲ್ಲೆಯಿಂದ ಇಲಾಖಾ ಅನುಮತಿ ಪಡೆಯುವಲ್ಲಿ ಕೂಡ ಸಫಲವಾಗಿ ಈ ಸಂಬಂಧದ ಹೊಸ ಗ್ರಿಡ್ ಯೋಜನಾ ವರದಿಯನ್ನು ಕೂಡ ಸಿದ್ಧಪಡಿಸಿದೆ.
ಈಗ ಗೋಕರ್ಣ ಸೆಕ್ಷನ್ ಹೊಂದಿರುವ ದಟ್ಟಾರಣ್ಯ ಪ್ರದೇಶ ಸೇರಿದಂತೆ 35 ಕಿಮೀ ಉದ್ದದ ವಿದ್ಯುತ್ ಲೈನ್ ನಿರ್ವಹಣೆ ಬದಲಿಗೆ ವ್ಯಾಪ್ತಿ 10 ಕಿಮಿಗೆ ಸೀಮಿತವಾಗುವುದು. ಇದರಿಂದ ಸಿಬ್ಬಂದಿ ಜೀವಾಪಾಯದಲ್ಲಿ ಕೆಲಸ ಮಾಡುವುದು ತಪ್ಪಲಿದೆ.
ಗೋಕರ್ಣ ಬೃಹತ್ ಕುಡಿಯುವ ನೀರಿನ ಘಟಕಕ್ಕೆ ವ್ಯತ್ಯಯ ಇಲ್ಲದೆ ವಿದ್ಯುತ್ ಲಭಿಸುವ ಜತೆಗೆ ಅಂಕೋಲಾ ತಾಲೂಕಿನ ಗ್ರಾಮಗಳಾದ ಆಂದ್ಲೆಯಿಂದ, ಮರಾಕಲ್, ಹಿಲ್ಲೂರು ಮತ್ತಿತರ ಭಾಗಗಳಿಗೆ ಹೊಸ ಗ್ರಿಡ್ ಸಮೀಪವರ್ತಿಯಾಗಲಿದೆ.
ಗೋಕರ್ಣ ಬಳಿಯ ಅಗ್ರಗೋಣ, ಅಡಿಗೋಣ ಇತ್ಯಾದಿ ಗ್ರಾಮಗಳಿಗೆ ಗಂಗಾವಳಿ ನದಿ ದಾಟಿ ಹೈಟೆನ್ಷನ್ ಲೈನ್ ತರಲಾಗಿದ್ದು ಇದರ ಅವಲಂಬನೆ ನಿಲ್ಲಲಿದೆ.
ಅನಿವಾರ್ಯ ವಿದ್ಯುತ್ ವ್ಯತ್ಯದ ಸಂದರ್ಭಗಳಲ್ಲಿ ಕುಮಟಾ ಮತ್ತು ಅಂಕೋಲಾ ಎರಡೂ ಕಡೆಗಳಿಂದ ಅಗತ್ಯಕ್ಕೆ ಅನುಗುಣವಾಗಿ ತ್ವರಿತ ಸರಬರಾಜು ಪಡೆಯಲು ಹೊಸ ಗ್ರಿಡ್ ಸಹಕಾರಿಯಾಗಲಿದೆ.