

ಉಡುಪಿ: ಜಿಪಂ, ತಾಪಂ, ಮತ್ತು ಗ್ರಾಪಂ ಚುನಾವಣೆಗಳ ಮೀಸಲಾತಿ ಪ್ರಕಟಗೊಂಡಿದ್ದು, ಅಖಾಡ ಸಿದ್ಧಗೊಂಡಿದೆ. ಪಕ್ಷದ ಅಭ್ಯರ್ಥಿಗಳನ್ನು ಭರ್ಜರಿ ಬಹುಮತದಿಂದ ಗೆಲ್ಲಿಸುವ ಸವಾಲು ಸ್ವೀಕರಿಸಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕು. ಆ ನಿಟ್ಟಿನಲ್ಲಿ ಪಕ್ಷದ ಪ್ರಮುಖರು, ಎಲ್ಲ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಬದ್ಧತೆಯಿಂದ ಶ್ರಮಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ನವೀನ ಶೆಟ್ಟಿ ಕುತ್ಯಾರು ಕರೆ ನೀಡಿದರು.
ಉಡುಪಿ ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ (ಅ.13) ಆಯೋಜಿಸಿದ್ದ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಅ.26ರಂದು ಪ್ರತಿಭಟನೆ
ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ, ಜನವಿರೋಧಿ ನೀತಿ ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಅ.26ರಂದು ಜಿಲ್ಲಾ ಕೇಂದ್ರದಲ್ಲಿ 'ಅಹೋರಾತ್ರಿ ಬೃಹತ್ ಪ್ರತಿಭಟನೆ' ನಡೆಯಲಿದೆ. ಈ ಹೋರಾಟದಲ್ಲಿ ಪಕ್ಷದ ಎಲ್ಲರೂ ಪಾಲ್ಗೊಂಡು ಸಂಘಟನೆಯ ಶಕ್ತಿ ತೋರ್ಪಡಿಸಬೇಕು. ಸೆ.17ರಿಂದ ನಡೆಯುತ್ತಿರುವ ಪಕ್ಷದ 'ಸೇವಾ ಸಂಕಲ್ಪ ಅಭಿಯಾನ'ದ ಸಮಾರೋಪ ಸಮಾರಂಭ ಅ.17ರಂದು ಕೋಟದ ಕಾರಂತ ಕಲಾ ಭವನದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ನಾಯಕ ಪಕ್ಷದ ಸಂಘಟನಾತ್ಮಕ ವಿಚಾರ ಮತ್ತು ಚುನಾವಣಾ ಪೂರ್ವ ಸಿದ್ಧತೆಗಳ ಮಾಹಿತಿ ನೀಡಿದರು. ಮಂಡಲವಾರು ಕಾರ್ಯ ಚಟುವಟಿಕೆಗಳ ವರದಿ ಮಂಡಿಸಲಾಯಿತು.
ಜಿಲ್ಲಾ ಉಪಾಧ್ಯಕ್ಷೆ ನಳಿನಿ ಪ್ರದೀಪ ರಾವ್ ಗೀತೆ ಹಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ಕಾರ್ಯಕ್ರಮ ನಿರ್ವಹಿಸಿದರು.