

ಉಡುಪಿ: ಪ್ರತಿದಿನವೂ ಪವಿತ್ರ ಬಲಿಪೀಠದ ಬಳಿ ಧಾರ್ಮಿಕ ಸೇವೆಯಲ್ಲಿ ತೊಡಗಿಕೊಳ್ಳುತ್ತಿದ್ದ ಉಡುಪಿ ಧರ್ಮಪ್ರಾಂತ್ಯದ ಧರ್ಮಗುರುಗಳು ಕ್ರಿಕೆಟ್ ಬ್ಯಾಟ್ ಹಿಡಿದು ಮೈದಾನಕ್ಕಿಳಿದಿರುವುದು ವಿಶೇಷವಾಗಿತ್ತು.
ಕನ್ನರ್ಪಾಡಿ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಮೈದಾನದಲ್ಲಿ ಭಾನುವಾರ (ಸೆ.27) ನಡೆದ ವಿಯಾನ್ನಿ ಕಪ್ ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಧರ್ಮಗುರುಗಳು ಫೋರ್-ಸಿಕ್ಸರ್ ಸಿಡಿಸುವ ಮೂಲಕ ಗಮನ ಸೆಳೆದರು.
ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ಅಧ್ಯಕ್ಷ ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರ ಸಹಕಾರದೊಂದಿಗೆ ಒಟ್ಟು ಐದು ತಂಡ ಪಾಲ್ಗೊಂಡಿತ್ತು. ವಿಯಾನ್ನಿ ಟೈಟನ್ಸ್, ವಿಯಾನ್ನಿ ಚಾಲೆಂರ್ಜಸ್, ವಿಯಾನ್ನಿ ಕ್ಯಾಪಿಟಲ್ಸ್, ವಿಯಾನ್ನಿ ವಾರಿಯರ್ಸ್ ಹಾಗೂ ವಿಯಾನ್ನಿ ಸೂಪರ್ ಕಿಂಗ್ಸ್ ತಂಡಗಳು ನಾಕೌಟ್ ಮಾದರಿಯಲ್ಲಿ ಸೆಣೆಸಾಡಿದವು. ಸುಮಾರು 60 ಮಂದಿ ಧರ್ಮಗುರುಗಳು ಭಾಗವಹಿಸಿದ್ದರು.
ನಾಲ್ಕು ಓವರ್ಗಳ ಸೀಮಿತ ಪಂದ್ಯಾವಳಿಯಲ್ಲಿ ವಿಯಾನ್ನಿ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗಿದ್ದು, ವಿಯಾನ್ನಿ ಕ್ಯಾಪಿಟಲ್ಸ್ ತಂಡ ರನ್ನರ್ ಅಪ್ ಸ್ಥಾನ ಗಳಿಸಿತು.
ಪಾಂಬೂರು ಚರ್ಚ್ನ ಡೀಕನ್ ಸ್ಟೀಫನ್ ಡಿಸೋಜಾ ಪಂದ್ಯಶ್ರೇಷ್ಠ, ಕಟಪಾಡಿಯ ಹೋಲಿ ಕ್ರಾಸ್ ಸೆಮಿನರಿಯ ಫಾ. ಜೋಜೋ ಅವರು ಪಂದ್ಯಾವಳಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ಸ್ವೀಕರಿಸಿದರು.
ಉಡುಪಿ ಧರ್ಮಪ್ರಾಂತ್ಯದ ಫಾದರ್ಗಳೊಂದಿಗೆ ವಿವಿಧ ಧಾರ್ಮಿಕ ಸಭೆಗಳಾದ ಹೋಲಿ ಕ್ರಾಸ್, ಕಾರ್ಮೆಲೈಟ್ಸ್ ಪ್ರಿಸ್ಟ್, ಸಾಲೇಶಿಯನ್ ಡಾನ್ ಬಾಸ್ಕೊ, ಕಾಪು ಚಿನ್ ಸಭೆಯ ಧರ್ಮಗುರುಗಳೂ ಭಾಗವಹಿಸಿದ್ದರು.
ಪಂದ್ಯಾಟಕ್ಕೆ ಧರ್ಮಪ್ರಾಂತ್ಯದ ಶ್ರೇಷ್ಠ ಧರ್ಮಗುರು ಮೊನ್ಸಿಂಜ್ಞೊರ್ ಫ್ರಾನ್ಸಿಸ್ ಎಫ್. ಲೂವಿಸ್ ಚಾಲನೆ ನೀಡಿ ಶುಭ ಹಾರೈಸಿದರು.
ಧರ್ಮಪ್ರಾಂತ್ಯದ ಕುಲಪತಿ ಸ್ಟೀಫನ್ ಡಿಸೋಜಾ, ನಿವೃತ್ತ ಧರ್ಮಗುರು ಆಲ್ಫೋನ್ಸ್ ಡಿಲೀಮಾ, ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್ ಡೆಸಾ, ಶಿರ್ವ ವಲಯ ಪ್ರಧಾನ ಧರ್ಮಗುರು ಚಾರ್ಲ್ಸ್ ಮಿನೇಜಸ್ ಹಾಗೂ ಧರ್ಮಪ್ರಾಂತ್ಯದ ವಿವಿಧ ಚರ್ಚ್ಗಳ ಧರ್ಮಗುರುಗಳು ಉಪಸ್ಥಿತರಿದ್ದರು.