

ಉಡುಪಿ: ಮಂಗಳೂರಿನಲ್ಲಿ ಹಲವಾರು ಮುಖ್ಯ ನಿಲ್ದಾಣಗಳಿದ್ದೂ ಸಹ ಪ್ರತಿಷ್ಠಿತ 'ವಂದೇ ಭಾರತ್' ರೈಲೂ ಸಹ ಮಂಗಳೂರು ಸೆಂಟ್ರಲ್ ಒಳಗೆ ಬರಬೇಕು ಎಂದು ಒತ್ತಾಯಿಸುವುದು ವಿರೋಧಿ ನಡೆಯಾಗಿದೆ. ಇದರಿಂದ ಮಂಗಳೂರು, ಉಡುಪಿ, ಕಾರವಾರದ ಎಲ್ಲ ಪ್ರಯಾಣಿಕರ ಸಮಯ ಅನಗತ್ಯವಾಗಿ ವ್ಯರ್ಥವಾಗುತ್ತದೆ ಎಂದು ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಧೀರಜ ಎನ್. ಶಾಂತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳ ಮೂನ್ನೂರು ಕಿಮೀ ದೂರದ ಪ್ರಯಾಣಿಕರ ಹಿತ ಪರಿಗಣಿಸಬೇಕಿದೆ. ಸಾವಿರಾರು ರೂ. ಹೆಚ್ಚುವರಿ ಟಿಕೆಟ್ ದರ ಕೊಟ್ಟೂ ವಂದೇ ಭಾರತ್ ರೈಲು ಉಡುಪಿಗೆ ಬರಲು ಸುಮಾರು 9 ಗಂಟೆ ಸಮಯ ತೆಗೆದುಕೊಳ್ಳುತ್ತಿದೆ. ಈ ರೈಲು ಇನ್ನೂ 2 ತಾಸು ಬೇಗನೆ ಉಡುಪಿ ನಿಲ್ದಾಣಕ್ಕೆ ಬರುವಂತೆ ನಾವು ಆಗ್ರಹಿಸುತ್ತಿದ್ದೇವೆ. ಹೀಗಿರುವಾಗ ಮಂಗಳೂರು ಸೆಂಟ್ರಲ್ ಒಳಗೆ ಈ ರೈಲು ತೆರಳಿದರೆ ಇನ್ನಷ್ಟು ತಾಸು ವಿಳಂಬವಾಗಲಿದೆ.
ಬಂಟ್ವಾಳ, ಅಭಿವೃದ್ಧಿ ಪಡಿಸಬಹುದಾದ ಜೋಕಟ್ಟೆ, ಪಡೀಲ್, ಸುರತ್ಕಲ್ ನಿಲ್ದಾಣಗಳ ಮೂಲಕ ರೈಲು ಬಂದಿದ್ದರೆ ಬಹಳಷ್ಟು ಸಮಯ ಉಳಿತಾಯವಾಗುತ್ತಿತ್ತು. ಆದರೆ, ಸಂಸದರ ಮನವಿಯಂತೆ ವಂದೇ ಭಾರತ್ ಎರಡೂ ಕಡೆ ಇಂಜಿನ್ ಹೊಂದಿರುವುದರಿಂದ ಸಮಯ ಹಾಳಾಗಲಾರದು ಎಂದು ಮಂಗಳೂರು ಜಂಕ್ಷನ್ ಮೂಲಕ ಬಂದರೂ ವಿರೋಧಿಸದೆ ಸ್ವಾಗತಿಸಿದ್ದೇವೆ. ಇದೀಗ ಮತ್ತೆ ಮಂಗಳೂರು ಸೆಂಟ್ರಲ್ ರೀತಿಯ ಒಳ ಭಾಗದ ನಿಲ್ದಾಣಕ್ಕೆ ಬರುವಂತೆ ಕೇಳುತ್ತಿರುವುದನ್ನು ಉಡುಪಿ ಯಾತ್ರಿ ಸಂಘ ವಿರೋಧಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.