

ಉಡುಪಿ: ಹೊಸದಾಗಿ ಆರಂಭಗೊಂಡ ಬೆಂಗಳೂರು-ಮಂಗಳೂರು-ಕಾರವಾರ- ಹಾಗೂ ಮಡಗಾಂವ್ ಮಾರ್ಗದಲ್ಲಿ ಸಂಚರಿಸುವ ವಂದೇ ಭಾರತ್ ರೈಲ್ನ ವೇಗವನ್ನು ಸಾಧ್ಯವಿರುವ ಕಡೆಗಳಲ್ಲಿ ಹೆಚ್ಚಿಸಬೇಕು. ಅದರಿಂದ ಸುಮಾರು 2 ಗಂಟೆಗಳ ಕಾಲ ಪ್ರಯಾಣಿಕರಿಗೆ ಸಮಯ ಉಳಿಯಲಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿ ಪತ್ರ ಸಲ್ಲಿಸಿದರು.
ದೆಹಲಿಯಲ್ಲಿ ರೈಲ್ವೆ ಮಂಡಳಿಯ ಸದಸ್ಯ (ಕಾರ್ಯಾಚರಣೆ ಮತ್ತು ವ್ಯವಹಾರ ಅಭಿವೃದ್ಧಿ) ಡಾ. ಮನೋಜ ಸಿಂಗ್ ಅವರನ್ನು ಭೇಟಿಯಾಗಿ ಮಾತನಾಡಿದರು.
ಘಾಟಿ ಪ್ರದೇಶ ಹೊರತಾಗಿ ಇತರೆಡೆಯೂ ರೈಲು ಸಂಚಾರದಲ್ಲಿ ವಿಳಂಬವಾಗುತ್ತಿದೆ. ಹೀಗಾಗಿ ರೈಲ್ವೆ ಸಮಯವನ್ನು ನಿಯಮಾನುಸಾರ ವೇಗಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಪ್ರಸ್ತುತವಾಗಿ ವಂದೇ ಭಾರತ್ ಪ್ರಯಾಣದ ಸಮಯ 13 ಗಂಟೆ ಆಗುತ್ತಿದೆ. ಆಗುತ್ತಿರುವ ವ್ಯರ್ಥ ಸಮಯವನ್ನು ಸರಿದೂಗಿಸಿದರೆ ಬೆಂಗಳೂರಿನಿಂದ ಮಡಗಾಂವ್ಗೆ 11 ಗಂಟೆಯಲ್ಲಿ ತಲುಪಲು ಸಾಧ್ಯವಿದೆ ಎಂದು ಮನವರಿಕೆ ಮಾಡಿದರು.
ವಂದೇ ಭಾರತ್ ರೈಲು ಪ್ರಯಾಣಿಕರನ್ನು ಆಕರ್ಷಿಸುತ್ತಿದ್ದು ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಪ್ರಯಾಣದ ವೇಳೆ ಕಡಿಮೆಯಾದರೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.