ಮೆಸ್ಕಾಂ ಸಬ್​ ಸ್ಟೇಷನ್​ ಮೇಲ್ದರ್ಜೆಗೇರಿಸಿ

ಬೆಂಗಳೂರಿನಲ್ಲಿ ಸಚಿವ ಕೆ.ಜೆ. ಜಾರ್ಜ್​ ಅವರೊಂದಿಗೆ ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಚರ್ಚೆ ನಡೆಸಿದರು.
ಬೆಂಗಳೂರಿನಲ್ಲಿ ಸಚಿವ ಕೆ.ಜೆ. ಜಾರ್ಜ್​ ಅವರೊಂದಿಗೆ ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಚರ್ಚೆ ನಡೆಸಿದರು.
Published on: 

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಆಗ್ರಹ

* ಇಂಧನ ಸಚಿವ ಕೆ.ಜೆ. ಜಾರ್ಜ್​ಗೆ ಮನವಿ

ಉಡುಪಿ: ತಾಲೂಕು ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್​ ಪೂರೈಕೆ ಹಾಗೂ ಲೋ ವೋಲ್ಟೇಜ್​ ಸಮಸ್ಯೆ ನಿವಾರಿಸಲು ಮೆಸ್ಕಾಂ ಸಬ್​ ಸ್ಟೇಷನ್​ಗಳನ್ನು ಮೇಲ್ದರ್ಜೆಗೆ ಏರಿಸುವಂತೆ ಇಂಧನ ಸಚಿವ ಕೆ.ಜೆ. ಜಾರ್ಜ್​ ಅವರಿಗೆ ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಮನವಿ ಸಲ್ಲಿಸಿದರು.

ಬೆಂಗಳೂರಿನಲ್ಲಿ ಗುರುವಾರ (ಅ.8) ಸಚಿವರನ್ನು ಭೇಟಿಯಾಗಿ ಚರ್ಚೆ ನಡೆಸಿದ ಯಶ್​ಪಾಲ್​, ಉಡುಪಿ ವಿಧಾನಸಭಾ ಕ್ಷೇತ್ರವು ಶಿಕ್ಷಣ, ವೈದ್ಯಕೀಯ, ಮೀನುಗಾರಿಕೆ, ಕೈಗಾರಿಕೆ, ಪ್ರವಾಸೋದ್ಯಮ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಹೀಗಾಗಿ ವಿದ್ಯುತ್​ ಬೇಡಿಕೆಯೂ ಹೆಚ್ಚುತ್ತಿದೆ ಎಂದರು.

ನಗರೀಕರಣ, ಹೊಸ ಹೊಸ ಬಡಾವಣೆ ಮತ್ತು ವಸತಿ ಸಮುಚ್ಚಯ ನಿರ್ಮಾಣ, ವಾಣಿಜ್ಯ ಮತ್ತು ಕೈಗಾರಿಕೆ ಚಟುವಟಿಕೆಗಳ ವಿಸ್ತರಣೆ ಆಗುತ್ತಿದೆ. ಉಡುಪಿ ನಗರ ಹಾಗೂ ಬ್ರಹ್ಮಾವರ ಭಾಗದ ಗ್ರಾಮಾಂತರ ಪ್ರದೇಶಗಳಲ್ಲಿ ಕಡಿಮೆ ವೋಲ್ಟೇಜ್​, ಟ್ರಾನ್ಸ್​ಫಾರ್ಮರ್​ಗಳ ಮೇಲೆ ಹೆಚ್ಚಿನ ಒತ್ತಡದಿಂದ ವಿದ್ಯುತ್​ ವ್ಯತ್ಯಯವಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ವಿದ್ಯುತ್​ ಮೂಲಸೌಕರ್ಯಗಳ ವರ್ಧನೆಗೆ ಹೊಸ ಟ್ರಾನ್ಸ್​ಫಾರ್ಮರ್​ ಅಳವಡಿಕೆ, ಸಬ್​ ಸ್ಟೇಷನ್​ ನಿರ್ಮಾಣ, ಇರುವ ಸಬ್​ ಸ್ಟೇಷನ್​ಗಳ ಮೇಲ್ದರ್ಜೆಗೇರಿಸುವ ಕಾರ್ಯ ತುರ್ತಾಗಿ ಆಗಬೇಕಿದೆ ಎಂದರು.

ಪ್ರಮುಖ ರಸ್ತೆ ಹಾಗೂ ಜಂಕ್ಷನ್​ಗಳಲ್ಲಿ ರಸ್ತೆ ದೀಪ ಮತ್ತು ಹೈಮಾಸ್ಟ್​ ದೀಪಗಳ ವ್ಯವಸ್ಥೆಯನ್ನೂ ಬಲಪಡಿಸಬೇಕಾಗಿದೆ. ಉಡುಪಿ ಕ್ಷೇತ್ರದ ಪ್ರಸ್ತುತ ಹಾಗೂ ಮುಂದಿನ ಹಲವು ವರ್ಷಗಳ ವಿದ್ಯುತ್​ ಬೇಡಿಕೆ ಗಮನದಲ್ಲಿಟ್ಟುಕೊಂಡು ಮೆಸ್ಕಾಂಗೆ ವಿಶೇಷ ಅನುದಾನ ಮಂಜೂರು ಮಾಡಬೇಕು ಎಂದು ಇಂಧನ ಸಚಿವರಿಗೆ ಯಶ್​ಪಾಲ್​ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net