ಸಂಸ್ಕೃತದ ಅಧ್ಯಯನ ಆದ್ಯ ಕರ್ತವ್ಯ

ಉಡುಪಿಯ ರಾಜಾಂಗಣದಲ್ಲಿ ನಡೆದ ಸಂಸ್ಕೃತೋತ್ಸವದಲ್ಲಿ ವೇದವರ್ಧನ ಶ್ರೀ ಆಶೀರ್ವಚನ ನೀಡಿದರು. ವಿದ್ಯಾಸಾಗರ ಶ್ರೀ, ಡಾ. ವಿನಯಚಂದ್ರ ಬನವತಿ, ಪ್ರೊ. ಡಿ.ಎಸ್​. ಅಮೃತೇಶ ಆಚಾರ್ಯ, ಗೋಪಾಲಕೃಷ್ಣ ಜೋಯಿಸ್​, ಚಂದ್ರಶೇಖರ್​ ಆಚಾರ್ಯ ಇದ್ದರು.
ಉಡುಪಿಯ ರಾಜಾಂಗಣದಲ್ಲಿ ನಡೆದ ಸಂಸ್ಕೃತೋತ್ಸವದಲ್ಲಿ ವೇದವರ್ಧನ ಶ್ರೀ ಆಶೀರ್ವಚನ ನೀಡಿದರು. ವಿದ್ಯಾಸಾಗರ ಶ್ರೀ, ಡಾ. ವಿನಯಚಂದ್ರ ಬನವತಿ, ಪ್ರೊ. ಡಿ.ಎಸ್​. ಅಮೃತೇಶ ಆಚಾರ್ಯ, ಗೋಪಾಲಕೃಷ್ಣ ಜೋಯಿಸ್​, ಚಂದ್ರಶೇಖರ್​ ಆಚಾರ್ಯ ಇದ್ದರು.
Published on

* ವೇದವರ್ಧನ ತೀರ್ಥ ಶ್ರೀಪಾದರ ಆಶೀರ್ವಚನ

* ಎಸ್​ಎಂಎಸ್​ಪಿ ಕಾಲೇಜ್​ನ ವರ್ಧಂತ್ಯುತ್ಸವ 

ಉಡುಪಿ: ಸಕಲ ಭಾಷೆಗಳಿಗೂ ಸಂಸ್ಕೃತವು ತಾಯಿಯಾಗಿದೆ. ಸಂಸ್ಕಾರಮಯವಾದ ಆ ಭಾಷೆಯನ್ನು ಪ್ರಮಾಣಪತ್ರ ಪಡೆಯುವ ದೃಷ್ಟಿಯಿಂದ ಮಾತ್ರ ಅಧ್ಯಯನ ಮಾಡಬಾರದು. ಸಂಸ್ಕೃತದ ಅಧ್ಯಯನವು ಆದ್ಯ ಕರ್ತವ್ಯವಾಗಬೇಕು. ಕಲಿತ ವಿದ್ಯೆಯನ್ನು ಇನ್ನಷ್ಟು ಜನರಿಗೆ ಹಂಚಬೇಕು. ಇದೂ ಸಹ ದೇವರಿಗೆ ಮಾಡುವ ಸೇವೆಯಾಗಿದೆ ಎಂದು ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ನುಡಿದರು.
ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀಮನ್​ ಮಧ್ವ ಸಿದ್ಧಾಂತ ಪ್ರಬೋಧಿನಿ ಸಂಸತ ಮಹಾ ಪಾಠಶಾಲಾ (ಎಸ್​ಎಂಎಸ್​ಪಿ ಕಾಲೇಜ್​) ಉಡುಪಿಯ 122ನೇ ವರ್ಧಂತ್ಯುತ್ಸವ ಮತ್ತು ಸಂಸ್ಕೃತೋತ್ಸವ ಉದ್ಘಾಟಿಸಿ ಮಾತನಾಡಿದರು.

ಕಲಿಕೆಯಲ್ಲಿರಲಿ ಜ್ಞಾನ ಪರಂಪರೆ

ಬೆಂಗಳೂರಿನ ಚಾಣಕ್ಯವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವಿನಯಚಂದ್ರ ಬನವತಿ ಮಾತನಾಡಿ, ಯಾವುದೇ ವಿದ್ಯೆಯ ಅಧ್ಯಯನ ಮಾಡುವುದಾದರೂ ಅದರಲ್ಲಿ ಶೇ.5ರಷ್ಟು ಭಾರತೀಯ ಜ್ಞಾನ ಪರಂಪರೆಗೆ ಸಂಬಂಧಿಸಿದ ವಿಚಾರ ಕಲಿಸುವ ಅವಕಾಶ ಇರಬೇಕು. ಅನಾರೋಗ್ಯ ಮೊದಲಾದ ಜಗತ್ತಿನ ಜ್ವಲಂತ ಸಮಸ್ಯೆಗಳಿಗೆ ಭಾರತೀಯ ಜ್ಞಾನ ಪರಂಪರೆಯಲ್ಲಿ ಏನು ಉತ್ತರ ಸಿಗಬಹುದೆಂದು ಕಂಡುಹಿಡಿಯಬೇಕು ಎಂದರು.

ಸಾಧಕರಿಗೆ ಸನ್ಮಾನ

ಸೇವೆಯಿಂದ ನಿವೃತ್ತರಾಗಲಿರುವ ಎಸ್​ಎಂಎಸ್​ಪಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಪುಷ್ಪಲತಾ ಎಂ., ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಪಿ.ಎಚ್​ಡಿ ಗಳಿಸಿದ ಕಾಲೇಜಿನ ಉಪನ್ಯಾಸಕ ಡಾ. ಅಜಿತ್​ ಆಚಾರ್ಯ ಪಿ. ಇವರನ್ನು ಸನ್ಮಾನಿಸಲಾಯಿತು. ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಆಚಾರ್ಯ ತರಗತಿಯ ಅಧ್ಯಯನ ಮುಗಿಸಿದ ವಿದ್ಯಾರ್ಥಿಗಳಿಗೆ ವಿದ್ವತ್​ ಶಾಲು ನೀಡಲಾಯಿತು.
ಎಸ್​ಎಂಎಸ್​ಪಿ ಸಭೆಯ ಕಾರ್ಯದರ್ಶಿ ವಿದ್ವಾನ್​ ಗೋಪಾಲಕೃಷ್ಣ ಜೋಯಿಸ್​, ಕೋಶಾಧಿಕಾರಿ ಚಂದ್ರಶೇಖರ್​ ಆಚಾರ್ಯ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಪ್ರಹ್ಲಾದ, ಸೀತಾರಾಮ ಬನ್ನಿಂತಾಯ, ನಿತಿನ್​, ಆದಿತ್ಯಕೃಷ್ಣ, ಪ್ರಹ್ಲಾದಮೂರ್ತಿ ವೇದಘೋಷ ಪಠಿಸಿದರು. ಪ್ರಾಚಾರ್ಯ ಪ್ರೊ. ಡಿ.ಎಸ್​. ಅಮೃತೇಶ ಆಚಾರ್ಯ ಸ್ವಾಗತಿಸಿದರು. ಪ್ರೊ. ಸತ್ಯನಾರಾಯಣ ವಿ. ರಾವ್​ ವಂದಿಸಿದರು. ಡಾ. ಮಹೇಶ ಭಟ್ಟ ಆರ್​. ಹಾರ್ಯಾಡಿ ಕಾರ್ಯಕ್ರಮ ನಿರೂಪಿಸಿದರು.

ಗೀತಲಹರೀ, ತಾಳಮದ್ದಳೆ

ಕಾಲೇಜಿನ ವಿದ್ಯಾರ್ಥಿಗಳು 'ಸಂಸ್ಕೃತ ಗೀತಲಹರೀ' ಕಾರ್ಯಕ್ರಮ ನಡೆಸಿಕೊಟ್ಟರು. ಬಳಿಕ ಪ್ರಸಿದ್ಧ ವಿದ್ವಾಂಸರು ಸಂಸ್ಕೃತ ಭಾಷೆಯಲ್ಲಿ 'ಸುಧನ್ವಾರ್ಜುನೀಯಮ್​' ತಾಳಮದ್ದಳೆ ನಡೆಸಿಕೊಟ್ಟರು. ಮುಮ್ಮೇಳದಲ್ಲಿ ಅರ್ಥಧಾರಿಗಳಾದ ವಿದ್ವಾನ್​ ಉಮಾಕಾಂತ್​ ಭಟ್​, ವಿದ್ವಾನ್​ ಸುಬ್ರಹ್ಮಣ್ಯ ಭಟ್​ ಗುಂಡಿಬೈಲು, ಪ್ರೊ. ರಾಮಕೃಷ್ಣ ಪೆಜತ್ತಾಯ ಬಾಳ ಇದ್ದರು. ಹಿಮ್ಮೇಳದಲ್ಲಿ ಭಾಗವತರಾಗಿ ವಿದ್ವಾನ್​ ಪ್ರಸನ್ನ ಭಟ್​ ಬಾಳ್ಕಲ್​, ಮದ್ದಳೆಯಲ್ಲಿ ಎನ್​.ಜಿ. ಹೆಗಡೆ ಯಲ್ಲಾಪುರ, ಚಂಡೆಯಲ್ಲಿ ಶಿವಾನಂದ ಕೋಟ ಸಹಕರಿಸಿದರು.
"

ಇಹಲೋಕ ಮತ್ತು ಪರಲೋಕ ಎರಡಕ್ಕೂ ಸಂಬಂಧಿಸಿದ ಪ್ರಯೋಜನ ಸಂಸ್ಕೃತ ಭಾಷೆಯಿಂದ ಲಭಿಸುತ್ತದೆ. ವೇದಾಂತ ವಿದ್ಯೆಯ ಅಧ್ಯಯನ ಹೆಚ್ಚು ಹೆಚ್ಚು ನಡೆಯಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net