ಆಶಾ ಕಾರ್ಯಕರ್ತೆಯರ ಬೇಡಿಕೆ ತಕ್ಷಣ ಈಡೇರಿಸಿ

ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ.
ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ.
Published on: 

* ಆಶಾ ಕಾರ್ಯಕರ್ತೆಯರ ಬೇಡಿಕೆ ತಕ್ಷಣ ಈಡೇರಿಸಿ

* ರಾಜ್ಯ ಸರ್ಕಾರಕ್ಕೆ ಶಾಸಕ ಯಶ್​ಪಾಲ್​ ಸುವರ್ಣ ಆಗ್ರಹ

ಉಡುಪಿ: ರಾಜ್ಯಾದ್ಯಂತ ಮನೆ ಮನೆಗೆ ತೆರಳಿ ಜನರ ಆರೋಗ್ಯದ ಕಾಳಜಿಗಾಗಿ ಹಗಲಿರುಳು ದುಡಿಯುವ ಆಶಾ ಕಾರ್ಯಕರ್ತೆಯರು ಕನಿಷ್ಠ ವೇತನ 15 ಸಾವಿರ ರೂ.ಗೆ ಏರಿಕೆ ಸಹಿತ ಹಲವು ಬೇಡಿಕೆ ಈಡೇರಿಸುವಂತೆ ಬೆಂಗಳೂರಿನಲ್ಲಿ 4-5 ದಿನದಿಂದ ಪ್ರತಿಭಟಿಸುತ್ತಿದ್ದಾರೆ. ಆದರೂ, ಅವರ ಹೋರಾಟಕ್ಕೆ ಕಿವಿಗೊಡದ ರಾಜ್ಯ ಸರ್ಕಾರ ಮೌನ ವಹಿಸಿದ್ದು, ತಕ್ಷಣ ಅವರ ಬೇಡಿಕೆ ಈಡೇರಿಸಲು ಮುಂದಾಗಬೇಕು ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಆಗ್ರಹಿಸಿದ್ದಾರೆ.

ಮಾತು ಮರೆತ ಸರ್ಕಾರ

2023ರ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್​ ತನ್ನ ಪ್ರಣಾಳಿಕೆಯಲ್ಲಿ ಆಶಾ ಕಾರ್ಯಕರ್ತೆಯರ ನಿಗದಿತ ಮಾಸಿಕ ಗೌರವಧನವನ್ನು 5 ಸಾವಿರ ರೂ.ನಿಂದ 8 ಸಾವಿರ ರೂ.ಗೆ ಹೆಚ್ಚಿಸುವ ಭರವಸೆ ನೀಡಿತ್ತು. ಅದನ್ನು ರಾಜ್ಯ ಸರ್ಕಾರ ಮರೆತಿದ್ದು, ಮಾತು ತಪ್ಪಿದ್ದಾರೆ. 2025ರ ಜನವರಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ 10 ಸಾವಿರ ರೂ. ಗೌರವಧನ ನೀಡುವುದಾಗಿ ಹಾಗೂ ಏಪ್ರಿಲ್​ನಿಂದ ಜಾರಿಗೆ ಬರುವಂತೆ ಘೋಷಿಸಿದ್ದರು. ಆದರೆ, ಅದಿನ್ನೂ ಜಾರಿಗೆ ಬಂದಿಲ್ಲ.

ತೀವ್ರ ಚಳಿಯಲ್ಲಿ ಹಾಗೂ ಅನೇಕ ಆಶಾ ಕಾರ್ಯಕರ್ತೆಯರು ತಮ್ಮ ಮಕ್ಕಳೊಂದಿಗೆ ರಾತ್ರಿಯಿಡೀ ಧರಣಿ ನಡೆಸುತ್ತಿದ್ದಾರೆ. ಯಾವುದೇ ಸೌಕರ್ಯ ಇಲ್ಲದೆ ತಾಯಂದಿರು ಹಾಗೂ ಸಹೋದರಿಯರು ಹೋರಾಟ ಮಾಡುತ್ತಿದರೂ ರಾಜ್ಯ ಸರ್ಕಾರ ಸ್ಪಂದಿಸದೆ ಅವರ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವುದು ಖಂಡನೀಯ.

ಗ್ಯಾರಂಟಿ ಭಾಗ್ಯ ಯೋಜನೆಗಳ ಅವೈಜ್ಞಾನಿಕ ಅನುಷ್ಠಾನದ ಮೂಲಕ ರಾಜ್ಯದ ಆರ್ಥಿಕ ಸ್ಥಿತಿ ಪಾತಾಳಕ್ಕೆ ಸಾಗಿದೆ. ಸರ್ಕಾರಿ ನೌಕರರಿಗೆ ನೀಡುವ ಸೇವಾ ಭದ್ರತೆ, ಆರೋಗ್ಯ ಸೇವಾ ಸೌಲಭ್ಯ, ಪಿಂಚಣಿ ಸಹಿತ ಎಲ್ಲ ಸೌಲಭ್ಯಗಳನ್ನೂ ಆಶಾ ಕಾರ್ಯಕರ್ತೆಯರಿಗೂ ಸರ್ಕಾರ ತಕ್ಷಣ ಒದಗಿಸಬೇಕು. ಅವರ ಪ್ರತಿಭಟನೆಯಿಂದ ಆರೋಗ್ಯ ವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾದರೆ ಅದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಯಶ್​ಪಾಲ್​ ಸುವರ್ಣ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.