

ಉಡುಪಿ: 'ಕದಳೀ ವಿಶ್ವದರ್ಶನ' ಬಾಳೆ ಮೇಳವು ಕೃಷಿಕರಿಗೆ ಅತ್ಯಂತ ಮಹತ್ವದ ಹಾಗೂ ಸಮಾಜಕ್ಕೆ ಜಾಗೃತಿ ಮೂಡಿಸುವ ಅರ್ಥಪೂರ್ಣ ಕಾರ್ಯಕ್ರಮ. ಸೋದೆ ವಾದಿರಾಜ ಮಠದ ವಿದ್ಯಾವಲ್ಲಭ ಶ್ರೀಗಳು ನಮ್ಮೆಲ್ಲರ ಕಣ್ಣು ತೆರೆಸುವ ಕಾರ್ಯ ಮಾಡಿದ್ದಾರೆ. ಬಾಳೆಯ ಶಕ್ತಿ, ಬಾಳೆ ಕೃಷಿಯ ಮಹತ್ವವನ್ನು ವಿಶ್ವಕ್ಕೆ ಪ್ರಚುರಪಡಿಸುವ ಪವಿತ್ರ ಕೆಲಸ ಉಡುಪಿಯಿಂದ ಇಂದು ಆಗಿದೆ. ಸಮಾಜದ ಒಳಿತಿಗೆ ದೇಶದ ಸಂಸ್ಕೃತಿಯನ್ನು ಈಗಲೂ ಶೃದ್ಧೆ, ನಿಷ್ಠೆಯಿಂದ ಇಲ್ಲಿನ ಅಷ್ಟ ಮಠಗಳು ಉಳಿಸುವ ಮಹತ್ಕಾರ್ಯ ಮಾಡುತ್ತಿವೆ ಎಂದು ಕೇಂದ್ರ ಬೃಹತ್ ಕೈಗಾರಿಕಾ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.
ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥ ಶ್ರೀಪಾದರ ಮುಂದಿನ 2ನೇ ಪರ್ಯಾಯದ ನಿಮಿತ್ತ ಶ್ರೀಮಠದ ತೋಟದಲ್ಲಿ ಭಾನುವಾರ (ನ.29) ಆಯೋಜಿಸಿದ್ದ ಬಾಳೆ ಮುಹೂರ್ತದಲ್ಲಿ ಪಾಲ್ಗೊಂಡು ಹಾಗೂ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ನಡೆಯಲಿರುವ ಮೂರು ದಿನಗಳ 'ಕದಳೀ ವಿಶ್ವದರ್ಶನ' ರಾಷ್ಟ್ರಮಟ್ಟದ ಬಾಳೆ ಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಳೆಯ ಜ್ಞಾನ ವಿಸ್ತರಣೆ
ಸೋದೆ ವಿಶ್ವವಲ್ಲಭ ಶ್ರೀ ಮಾತನಾಡಿ, ಉಡುಪಿ ಪರ್ಯಾಯವೂ ಸಹ ನಾಡಹಬ್ಬವೆಂದೇ ಖ್ಯಾತಿಗಳಿಸಿದೆ. ಪರ್ಯಾಯದ ಪೂರ್ವದಲ್ಲಿ 4 ಮುಹೂರ್ತಗಳಿದ್ದು ಮೊದಲನೇಯದು ಬಾಳೆ ಮುಹೂರ್ತವಾಗಿದೆ. ಕಾರಣಾಂತರದಿಂದ ಇದನ್ನು ಇತ್ತೀಚೆಗೆ ಸಾಂಕೇತಿಕವಾಗಿ ಆಚರಿಸಲಾಗುತ್ತಿತ್ತು. ಆದರೆ, ಇದು ಶ್ರೀಕೃಷ್ಣನ ಭಕ್ತರಿಗೆ ಅನ್ನದಾನ ಮಾಡುವ ಮೂಲವಾಗಿದ್ದರಿಂದ ಇದನ್ನು ಅರ್ಥಪೂರ್ಣವಾಗಿ ಆಚರಿಸಲು ಬಾಳೆ ಮೇಳ ಆಯೋಜಿಸಲಾಗಿದೆ. 2 ತಿಂಗಳ ಕಾಲ ಇದ್ದ ಪರ್ಯಾಯ ವ್ಯವಸ್ಥೆಯನ್ನು 500 ವರ್ಷದ ಹಿಂದೆ ವಾದಿರಾಜರು 2 ವರ್ಷಕ್ಕೆ ವಿಸ್ತರಿಸಿದರು. ಅದರಂತೆಯೇ ಬಾಳೆ ಮುಹೂರ್ತವನ್ನೂ ಸಹ ಸಾರ್ವಜನಿಕರಿಗೆ ಬಾಳೆಯ ಮಹತ್ವ ತಿಳಿಸಲು 'ಕದಳೀ ವಿಶ್ವದರ್ಶನ'ದ ಮೂಲಕ ಜ್ಞಾನ ವಿಸ್ತರಣೆ ಕಾರ್ಯಕ್ಕಾಗಿ ಆಯೋಜಿಸಲಾಗಿದೆ ಎಂದರು.
ಕಾಯಿಲೆಗಳ ನಿಯಂತ್ರಣ
ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆ ಮಾತನಾಡಿ, ಉಡುಪಿ ಇಂದು ಸದ್ದಿಲ್ಲದೆ ಚರಿತ್ರೆ ನಿರ್ಮಿಸುತ್ತಿದೆ. ಹೋಟೆಲ್ ಉದ್ಯಮದ ಮೂಲಕ ಜಗತ್ತಿಗೆ ಪರಿಚಿತವಾಗಿರುವ ಉಡುಪಿಗೆ ಇದೀಗ ಬಾಳೆಯ ವೈವಿಧ್ಯದ ಚರಿತ್ರೆ ಅನಾವರಣಗೊಳಿಸಿದೆ. ಈ ಮೇಳವು 4 ರಾಜ್ಯಗಳ ಬಾಳೆ ಕೃಷಿಕರನ್ನು ಒಗ್ಗೂಡಿಸಿದೆ. ಹಲಸು ಮತ್ತು ಬಾಳೆಯನ್ನು ಬೆಳೆಯುವಲ್ಲಿ ಭಾರತವು ವಿಶ್ವದಲ್ಲಿಯೇ ಮುಂದಿದ್ದು, ಅದರ ಬಳಕೆಯಲ್ಲಿ ತೀವೃ ಹಿಂದಿದೆ. ಬೆಳೆಯಲ್ಲಿ ಶೇ.25ರಷ್ಟು ಬಳಕೆಯೇ ಇಲ್ಲದೆ ವ್ಯರ್ಥವಾಗುತ್ತಿದೆ. ಬಾ.ಕಾ.ಹು. (ಬಾಳೆಕಾಯಿ ಪೌಡರ್) ಕೇರಳದಲ್ಲಿ ಬೇಬಿ ಫುಡ್ ಆಗಿದ್ದರೆ ಮಹಾರಾಷ್ಟ್ರದಲ್ಲಿ ಉಪವಾಸದ ಸಂದರ್ಭದಲ್ಲಿ ಬಳಸುವ ಆಹಾರವಾಗಿದೆ. ಇದರಲ್ಲಿರುವ ಪಿಷ್ಟವು ವೃದ್ಧರಿಗೆ ಅದರಲ್ಲೂ ಮಧುಮೇಹಿಗಳಿಗೆ ಅತ್ಯಂತ ಪೂರಕ ಆಹಾರವಾಗಿದೆ. ಇದರ ನಿತ್ಯ ಬಳಕೆಯಿಂದ ಶೇ.90ರಷ್ಟು ಕಾಯಿಲೆ ನಿಯಂತ್ರಣಗೊಳ್ಳಲಿದೆ ಎಂದು ತಿಳಿಸಿದರು.
ಪಲಿಮಾರು ಮಠದ ಹಿರಿಯ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ, ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದ ಸಾನ್ನಿಧ್ಯ ವಹಿಸಿದ್ದರು.
ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ವಿಪ ಸದಸ್ಯ ಎಸ್.ಎಲ್. ಭೋಜೇಗೌಡ, ಸಾರಾ ಮಹೇಶ, ಉದ್ಯಮಿ ಪುರುಷೋತ್ತಮ ಶೆಟ್ಟಿ, ಡಾ. ಎಚ್.ಎಸ್. ರಾಘವೇಂದ್ರ ರಾವ್, ಶ್ರೀಮಠದ ದಿವಾನ ಪಾಡಿಗಾರು ಶ್ರೀನಿವಾಸ ತಂತ್ರಿ, ಇಸ್ರೇಲ್ ರಾಯಭಾರಿ ದಕ್ಷಿಣ ಭಾರತದ ಸಹಾಯಕ ಕೌನ್ಸಿಲ್ ಜನರಲ್ ಮ್ಯಾಕ್ಸಿಮ್ ಶ್ಮಗಿನ್ ಉಪಸ್ಥಿತರಿದ್ದರು.
ಸೋದೆ ಭಾವಿ ಸಮೀರದ ವಿದ್ಯಾರ್ಥಿಗಳಾದ ನವೀನ, ರೋಹಿತ, ವಿಷ್ಣುತೀರ್ಥ, ಪ್ರಣವ ವೇದ ಘೋಷ ಪಠಿಸಿದರು. ಪ್ರಾದೇಶ ಆಚಾರ್ಯ ಪ್ರಾರ್ಥಿಸಿದರು. ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಪಾಡಿಗಾರು ಮದ್ವೇಶ ತಂತ್ರಿ ವಂದಿಸಿದರು. ಮುರಳಿ ಕಡೇಕಾರು ಕಾರ್ಯಕ್ರಮ ನಿರ್ವಹಿಸಿದರು.
ಪೂರ್ವಜರು ಯಾಕಾಗಿ ಇಂತಹ ಆಚರಣೆ ಮಾಡಿಕೊಂಡು ಬಂದಿದ್ದರೆಂಬ ಸತ್ಯ ಇಂದಿನವರಿಗೆ ತಿಳಿದಿಲ್ಲ. ಆದರೆ, ಅವರ ದೂರದೃಷ್ಟಿತ್ವ ಎಷ್ಟು ಮಹತ್ವದ್ದಾಗಿತ್ತು ಎನ್ನುವುದು ಇಂದಿನ ಬದಲಾದ ಜೀವನ ಶೈಲಿಯಲ್ಲಿ ಅರ್ಥವಾಗತೊಡಗಿದೆ. ನಾನೂ ಓರ್ವ ರೈತನಾಗಿದ್ದು ಜಿ-7 ತಳಿ ಬೆಳೆಯುತ್ತಿದ್ದರೂ ಸಹ ಬಾಳೆಹಣ್ಣಿನಲ್ಲಿ 500ಕ್ಕೂ ಹೆಚ್ಚು ತಳಿಗಳಿವೆ ಎಂದು ತಿಳಿದಿರಲಿಲ್ಲ. ರೈತರ ಬದುಕು ಹಸನು ಮಾಡಿಸುವಲ್ಲಿ ಭಗವಂತ ನಮ್ಮಿಂದ ಸೇವೆ ಮಾಡುವಂತಹ ಅವಕಾಶ ನೀಡಲಿ. ಕೃಷಿಕರನ್ನು ಉದ್ಧರಿಸುವಲ್ಲಿ ಇರುವ ಸಣ್ಣಪುಟ್ಟ ಲೋಪ-ದೋಷಗಳನ್ನು ಸರಿಪಡಿಸಿಕೊಳ್ಳಲು ಈ ಬಾಳೆ ಮೇಳ ನನಗೂ ಮಾರ್ಗದರ್ಶನ ನೀಡಿದೆ ಎಂದು ಸಚಿವ ಎಚ್ಡಿಕೆ ಹೇಳಿದರು.
ಕದಳೀ ವಿಶ್ವ ದರ್ಶನ ಶೀರ್ಷಿಕೆ ಹಾಡಿನ ಬಿಡುಗಡೆ, 'ಕದಳೀ ವನಂ' ಪುಸ್ತಕ ಬಿಡುಗಡೆ, ಸೋದೆ ಬ್ರ್ಯಾಂಡ್ 'ಉಡುಪಿ ರಾಜ ಕದಳೀ' ಬಾಳೆಹಣ್ಣಿನ ಗೊನೆ ಸಮೇತ ಗಿಡವನ್ನು ಕುಮಾರಸ್ವಾಮಿ ಲೋಕಾರ್ಪಣೆಗೊಳಿಸಿದರು. ಕೋಟೇಶ್ವರ ಮಾಗಣೆಯ ಭಕ್ತರಿಗೆ ಮತ್ತು ಉಡುಪಿ ಕೃಷಿಕ ಸಂಘದ ಪ್ರತಿನಿಧಿಗಳಿಗೆ 'ಉಡುಪಿ ರಾಜ' ಬಾಳೆಗಿಡ ಹಸ್ತಾಂತರಿಸಲಾಯಿತು. ಮೇಳದ ನಿಮಿತ್ತ 25ಕ್ಕೂ ಅಧಿಕ ಮಳಿಗೆ ತೆರೆಯಲಾಗಿದ್ದು, ಬಾಳೆಹಣ್ಣಿನ ಮೌಲ್ಯವರ್ಧಿತ ಉತ್ಪನ್ನ ಹಾಗೂ 400ಕ್ಕೂ ಅಧಿಕ ಬಾಳೆ ತಳಿಗಳ ಪ್ರದರ್ಶನ, ಮಾರಾಟ ಆಯೋಜಿಸಲಾಗಿದೆ.