ವರ್ಷಧಾರೆಯಲ್ಲೂ 'ಉಡುಪಿ' ಫಸ್ಟ್​ !

(ಸಾಂದರ್ಭಿಕ ಚಿತ್ರ.)
(ಸಾಂದರ್ಭಿಕ ಚಿತ್ರ.)
Published on: 

* ಚಿತ್ರದುರ್ಗ ಜಿಲ್ಲೆ ಈ ವರ್ಷವೂ ಲಾಸ್ಟ್​

* ಮೈಸೂರು ಶೇ.51, ದ.ಕ. ಶೇ. 30 ಮಳೆ ಕೊರತೆ

ಪ್ರಶಾಂತ ಭಾಗ್ವತ ಉಡುಪಿ

ಕರ್ನಾಟಕದಲ್ಲಿ ಕಳೆದ ವರ್ಷ 2025ರಲ್ಲಿ ಉತ್ತಮ ಮಳೆಯಾಗಿ ನಾಡು ಸಂತಸಗೊಂಡಿದ್ದರೆ, ಪ್ರಸ್ತುತ ವರ್ಷ ಅತ್ಯಂತ ಕನಿಷ್ಠ ಮಳೆಯಾಗಿ ನಾಡು ಕಣ್ಣೀರು ಸುರಿಸುತ್ತಿದೆ. ಕೊರತೆಯಲ್ಲೂ ಸಹ ವರ್ಷಧಾರೆಯಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ಚಿತ್ರದುರ್ಗ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.

55 ವರ್ಷದ ಹಿಂದೆ ಅತ್ಯಂತ ಕೆಟ್ಟ ನೈಋತ್ಯ ಮಾನ್ಸೂನ್​ ಮಳೆ ಕೊರತೆ ಕಂಡಿದ್ದ ರಾಜ್ಯವು ಈ ವರ್ಷ ಹೀನಾಯ ಪರಿಸ್ಥಿತಿ ಅನುಭವಿಸಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್​ಎನ್​ಡಿಎಂಸಿ) ಮತ್ತು ಭಾರತ ಹವಾಮಾನ ಇಲಾಖೆ (ಐಎಂಡಿ)ಯ ಮಾಹಿತಿಯ ಪ್ರಕಾರ ಜೂ.1ರಿಂದ ಸೆ.30ರ ವರೆಗೆ ಶೇ.35ರಷ್ಟು ಮಳೆ ಕೊರತೆ ಅನುಭವಿಸಿದೆ.

ಮಳೆ ಕೊರತೆ ಮಾಹಿತಿ

ನಾಲ್ಕು ತಿಂಗಳ ಮುಂಗಾರು ಹಂಗಾಮಿನಲ್ಲಿ ರಾಜ್ಯವು ಸಾಮಾನ್ಯ ಸರಾಸರಿ 852 ಮಿ.ಮೀ. ವಾಡಿಕೆ ಮಳೆಯಲ್ಲಿ 551 ಮಿ.ಮೀ. ಮಳೆಯಾಗಿದೆ. ಪ್ರದೇಶವಾರು ಕೊರತೆ ಅವಲೋಕಿಸಿದಾಗ ಉತ್ತರ ಒಳನಾಡಿನಲ್ಲಿ ಶೇ.42, ದಕ್ಷಿಣ ಒಳನಾಡಿನಲ್ಲಿ ಶೇ.41, ಮಲೆನಾಡು ಪ್ರದೇಶಗಳಾದ ಕೊಡಗು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಶೇ.38 ಹಾಗೂ ಕರಾವಳಿ ಭಾಗಗಳಲ್ಲಿ ಒಟ್ಟು ಶೇ.28 ಮಳೆ ಕೊರತೆಯಾಗಿದೆ.

ಜಿಲ್ಲೆಗಳ ಶೇಕಡಾವಾರು ಮಾಹಿತಿ

ರಾಜ್ಯದಲ್ಲಿ ಶೇಕಡಾವಾರು ಮಾಹಿತಿ ಪ್ರಕಾರ (ಅ.3ಕ್ಕೆ) ಮೈಸೂರು ಜಿಲ್ಲೆ ಅತಿ ಕನಿಷ್ಠ ಮಳೆಯಾದ ಜಿಲ್ಲೆಯಾಗಿದೆ. ವಾಡಿಕೆ 641 ಮಿ.ಮೀ.ಯಲ್ಲಿ 314 ಮಿ.ಮೀ. ಮಳೆಯಾಗಿದ್ದು ಶೇ.51 ಕೊರತೆಯಾಗಿದೆ. ವಿಜಯನಗರ ಜಿಲ್ಲೆಯಲ್ಲಿ ವಾಡಿಕೆ 508 ಮಿ.ಮೀ.ಯಲ್ಲಿ 278 ಮಿ.ಮೀ. ಮಳೆಯಾಗಿದ್ದು ಶೇ.45, ಬಳ್ಳಾರಿ ಜಿಲ್ಲೆಯಲ್ಲಿ ವಾಡಿಕೆ 465 ಮಿ.ಮೀ.ಯಲ್ಲಿ 259 ಮಿ.ಮೀ. ಮಳೆಯಾಗಿದ್ದು ಶೇ.44, ಬೀದರ್​ ಜಿಲ್ಲೆಯಲ್ಲಿ 740 ಮಿ.ಮೀ. ವಾಡಿಕೆಯಲ್ಲಿ 433 ಮಿ.ಮೀ. ಮಳೆಯಾಗಿದ್ದು ಶೇ.41, ಉಡುಪಿ ಜಿಲ್ಲೆಯಲ್ಲಿ ವಾಡಿಕೆ 4,262 ಮಿ.ಮೀ.ಯಲ್ಲಿ 2,906 ಮಿ.ಮೀ. (ರಾಜ್ಯದಲ್ಲೇ ಗರಿಷ್ಠ) ಮಳೆಯಾಗಿದ್ದು ಶೇ.32, ದ.ಕ. ಜಿಲ್ಲೆಯಲ್ಲಿ ವಾಡಿಕೆ 3,667 ಮಿ.ಮೀ.ಯಲ್ಲಿ 2,581 ಮಿ.ಮೀ. ಮಳೆಯಾಗಿದ್ದು ಶೇ.30, ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಡಿಕೆ 2,765 ಮಿ.ಮೀ.ಯಲ್ಲಿ 2,135 ಮಿ.ಮೀ. ಮಳೆಯಾಗಿದ್ದು ಶೇ.23, ಚಿತ್ರದುರ್ಗ ಜಿಲ್ಲೆಯಲ್ಲಿ ವಾಡಿಕೆ 401 ಮಿ.ಮೀ.ಯಲ್ಲಿ 251 ಮಿ.ಮೀ. (ರಾಜ್ಯದಲ್ಲಿ ಕೊನೆಯ ಸ್ಥಾನ) ಮಳೆಯಾಗಿದ್ದು ಶೇ.37 ಕೊರತೆಯಾಗಿದೆ. ಬೆಂಗಳೂರು ದಕ್ಷಿಣ ಒಳನಾಡಿನಲ್ಲಿ ತಕ್ಕಮಟ್ಟಿಗೆ ಮಳೆಯಾಗಿದ್ದು, ಶೇ.18 ಕೊರತೆ ದಾಖಲಾಗಿದೆ.

ರಾಜ್ಯದ ಮಾಸಿಕ ಮಳೆ ಕೊರತೆ ಮಾಹಿತಿ

ತಿಂಗಳು- ವಾಡಿಕೆ ಮಳೆ- ಸುರಿದ ಮಳೆ- ಕೊರತೆ

ಜೂನ್-​ 215 ಮಿ.ಮೀ.- 130 ಮಿ.ಮೀ.- 42%

ಜುಲೈ- 271 ಮಿ.ಮೀ.- 192 ಮಿ.ಮೀ.- 29%

ಆಗಸ್ಟ್​- 220 ಮಿ.ಮೀ.- 169 ಮಿ.ಮೀ.- 23%

ಸೆಪ್ಟೆಂಬರ್-​ 161 ಮಿ.ಮೀ.- 74 ಮಿ.ಮೀ.- 54%

ಜಾಗತಿಕವಾಗಿ ಈ ಬಾರಿ ಇಷ್ಟೊಂದು ಕಡಿಮೆ ಪ್ರಮಾಣದಲ್ಲಿ ಮಳೆಯಾಗಲು ಎಲ್​ನಿನೊ ಮಾರುತದ ಪ್ರಭಾವವೇ ಕಾರಣ. ಅರೇಬಿಯನ್​ ಸಮುದ್ರದ ದುರ್ಬಲ ತೇವಾಂಶದಿಂದ ಮಾನ್ಸೂನ್​ ಒಳಹರಿವು ಕಡಿಮೆಯಾಗಿ ಪಶ್ಚಿಮ ಟ್ಟಗಳಲ್ಲೂ ಮಳೆ ಕಡಿಮೆಯಾಯಿತು. ಅಕ್ಟೋಬರ್​, ನವೆಂಬರ್​ ತಿಂಗಳಲ್ಲಿ ಈಶಾನ್ಯ ಮಾರುತ ಬೀಸಲಿದ್ದು ಹಿಂಗಾರು ಮಳೆಯಾಗಲಿದೆ. ಡಿಸೆಂಬರ್​ವರೆಗೂ ಮಳೆ ಮುಂದುವರಿಯಲಿದೆ.
ಡಾ. ಬಾಲಕೃಷ್ಣ ಎಸ್​. ಮದ್ದೋಡಿ. ಭಾರತ ಸರ್ಕಾರದ ಪರಿಸರ ಮತ್ತು ಮೌಲ್ಯಮಾಪನ ಸಮಿತಿ ಸದಸ್ಯ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net