ಆಗೇ ಆಯೇತೋ ಸಬ್​ಕೋ ಮಾರ್​ಡಾಲೂಂಗಾ!

ಪಿಎಸ್​ಐ ತೇಜಸ್ವಿ ಅವರ ಗುಂಡೇಟಿನಿಂದ ಗಾಯಗೊಂಡ ಸುಪಾರಿ ಕಿಲ್ಲರ್​ ರಾಜು.
ಪಿಎಸ್​ಐ ತೇಜಸ್ವಿ ಅವರ ಗುಂಡೇಟಿನಿಂದ ಗಾಯಗೊಂಡ ಸುಪಾರಿ ಕಿಲ್ಲರ್​ ರಾಜು.
Published on

* ಪೊಲೀಸರಿಗೇ ಪಿಸ್ತೂಲ್​ ತೋರಿಸಿ ಬೆದರಿಸಿದ ಹಂತಕ

* ಆರೋಪಿಗಳ ಬಂಧನ ಕಾರ್ಯಾಚರಣೆ ರೋಚಕ

ಉಡುಪಿ: ಕಾಪು ತಾಲೂಕಿನ ಮುದರಂಗಡಿಯಲ್ಲಿ ಉದ್ಯಮಿ ಡೇವಿಡ್​ ಡಿಸೋಜ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಮೂವರು ಆರೋಪಿಗಳನ್ನು ಕೆಲವೇ ಗಂಟೆಯೊಳಗೆ ಬಂಧಿಸಿದ ಜಿಲ್ಲಾ ಪೊಲೀಸ್​ ಇಲಾಖೆ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಅನ್ಯ ರಾಜ್ಯಗಳಿಂದ ಬಂದು ಹಾಡುಹಗಲೇ ವ್ಯಕ್ತಿಯನ್ನು ಕೊಲೆ ಮಾಡಿ ಪರಾರಿಯಾಗುತ್ತಿದ್ದ ಸುಪಾರಿ ಕಿಲ್ಲರ್ಸ್​ಗಳ ಪತ್ತೆ, ಅವರನ್ನು ವಶಕ್ಕೆ ಪಡೆದ ರೀತಿಯೂ ರೋಚಕವಾಗಿದೆ. ಸಿನಿಮಾಗಳಲ್ಲಿ ಹೀರೋ-ವಿಲನ್​ಗಳ ಮಧ್ಯೆ ನಡೆಯುವ ಫೈಟಿಂಗ್​ನಂತೆಯೇ ಇತ್ತು ಉಡುಪಿ ಖಾಕಿ ಕಾರ್ಯಾಚರಣೆ.

ಆರೋಪಿಗಳ ಚಹರೆ ಪತ್ತೆ ಹೇಗೆ?

ಶಿರ್ವಾ ಪೊಲೀಸ್​ ಠಾಣಾ ವ್ಯಾಪ್ತಿಯ ಮುದರಂಗಡಿಯಲ್ಲಿ ಆ.7ರಂದು ಮಧ್ಯಾಹ್ಮ 3:45ರ ವೇಳೆಯಲ್ಲಿ ಡೇವಿಡ್​ ಡಿಸೋಜ ಎಂಬವರನ್ನು ಅಪರಿಚಿತರಿಬ್ಬರಲ್ಲಿ ಓರ್ವ ಗುಂಡಿಕ್ಕಿ ಕೊಲೆ ಮಾಡಿ, ಬೈಕ್​ನಲ್ಲಿ ಪರಾರಿಯಾಗಿದ್ದರು. ಈ ವಿಚಾರ ತಿಳಿದು ಕಾಪು ಠಾಣೆಯ ಪಿಎಸ್​ಐ ತೇಜಸ್ವಿ, ಕಾರ್ಕಳ ಗ್ರಾಮಾಂತರ ಠಾಣೆ ಪಿಎಸ್​ಐ ಪ್ರಸನ್ನ ಅವರೊಂದಿಗೆ ಕೂಡಲೇ ಸ್ಥಳಕ್ಕಾಗಮಿಸಿದರು. ಸುತ್ತಲಿನ ಪರಿಸರದಲ್ಲಿದ್ದ ಸಿಸಿಟಿವಿ ಪರಿಶೀಲಿಸಿ, ಹಂತಕನ ಚಹರೆ ಪತ್ತೆಹಚ್ಚಿ, ಅದನ್ನು ಸಾರ್ವಜನಿಕರಿಗೆ ತೋರಿಸಿ ಕೆಲ ಮಾಹಿತಿ ಸಂಗ್ರಹಿಸಿದರು. ಇನ್ನೊಬ್ಬ ವ್ಯಕ್ತಿ ಬೈಂದೂರು-ಭಟ್ಕಳ ಕಡೆ ಸಾಗುವ ಖಾಸಗಿ ಬಸ್​ನಲ್ಲಿ ತೆರಳಿರುವ ಬಗ್ಗೆ ತಿಳಿದುಕೊಂಡರು.

ಚೆಕ್​ಪೋಸ್ಟ್​ಗಳಲ್ಲಿ ವಾಹನ ತಪಾಸಣೆ

ಪಿಎಸ್​ಐ ಪ್ರಸನ್ನ ಮತ್ತು ಸಿಬ್ಬಂದಿಯೊಂದಿಗೆ ಬೈಂದೂರಿಗೆ ಬಂದ ತೇಜಸ್ವಿ, ಬೈಂದೂರು ಪಿಎಸ್​ಐ ಮಹೇಶ್​ ಮತ್ತು ಸಿಬ್ಬಂದಿಯೊಂದಿಗೆ ಚೆಕ್​ಪೋಸ್ಟ್​ನಲ್ಲಿ ವಾಹನಗಳ ತಪಾಸಣೆ ಆರಂಭಿಸಿದರು. ಈ ವೇಳೆ ಸ್ಥಳೀಯರು, ಮೂರು ಮಂದಿ ಸಂಶಯಾಸ್ವದ ವ್ಯಕ್ತಿಗಳು ಬೈಂದೂರಿನಿಂದ ಶಿರೂರು ಕಡೆಗೆ ಅಪರಿಚಿತ ವಾಹನದಲ್ಲಿ ತೆರಳಿದ್ದಾರೆ. ಅದರಲ್ಲಿ ಓರ್ವನಿಗೆ ದೊಡ್ಡದಾದ ಗಡ್ಡ ಇತ್ತು ಎಂದು ತಿಳಿಸಿದರು. ಪೊಲೀಸರ ಬಳಿಯಿದ್ದ ಆರೋಪಿಯ ಚಹರೆಯಲ್ಲೂ ದೊಡ್ಡದಾಗಿ ಗಡ್ಡವಿದ್ದ ವ್ಯಕ್ತಿಯೂ ಇದ್ದ. ಆರೋಪಿಗಳು ಇಲ್ಲೇ ಸಮೀಪದಲ್ಲೇ ಇದ್ದಾರೆನ್ನುವುದು ಖಚಿತವಾಯಿತು.
ಮಧ್ಯರಾತ್ರಿ ಬೈಂದೂರಿನಿಂದ ಓಡಿ ತಪ್ಪಿಸಿಕೊಂಡಿದ್ದ ಜಿಯಾಹುಲ್​ ಶೇಖ್​ ಮತ್ತು ಅಜಯ್​ ರಸ್ತೋಗಿ ಎಂಬವರನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾ ಹಾಗೂ ಭಟ್ಕಳದಲ್ಲಿ ಅಲ್ಲಿನ ಪೊಲೀಸರ ಸಹಕಾರದಲ್ಲಿ ಬಂಧಿಸಲಾಗಿದೆ.

ಮಧ್ಯರಾತ್ರಿ ಪೊದೆಯಲ್ಲಿ ಅಡಗಿದ್ದ ಕಿಲ್ಲರ್ಸ್​

ಮಧ್ಯರಾತ್ರಿ 1:30ರ ಸಮಯ. ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಬೈಂದೂರು ಪಿಎಸ್​ಐ ಬೈಂದೂರು ಮಾರ್ಗದಲ್ಲಿ ಬರುತ್ತಿರುವಾಗ, ಒತ್ತಿನೆಣೆ ರಾಘವೇಂದ್ರ ಮಠ ಸಮೀಪದ ಬಸ್​ ನಿಲ್ದಾಣದಲ್ಲಿ ಮೂವರು ಕುಳಿತುಕೊಂಡಿದ್ದ ಬಗ್ಗೆ ತಿಳಿದುಬಂತು. ಕೂಡಲೇ ಪಿಎಸ್​ಐ ತೇಜಸ್ವಿ, ಪಿಎಸ್​ಐ ಪ್ರಸನ್ನ ಅಲ್ಲಿಗೆ ಆಗಮಿಸಿ ಪಿಎಸ್​ಐ ಮಹೇಶ್​ ಹಾಗೂ ಸಿಬ್ಬಂದಿಯೊಂದಿಗೆ ಒತ್ತಿನೆಣೆ ಪರಿಸರದಲ್ಲಿ ಹುಡುಕಾಟ ನಡೆಸಿದರು. ಪೊಲೀಸರು ಕಂಡ ಸುಪಾರಿ ಹಂತಕರು, ರಸ್ತೆ ಬದಿಯಲ್ಲಿ ದಟ್ಟವಾಗಿ ಬೆಳೆದಿದ್ದ ಗಿಡಗಂಟಿಗಳ ಪೊದೆಯೊಳಗೆ ಅವಿತುಕೊಂಡರು. ಪೊದೆಯತ್ತಲೇ ಪೊಲೀಸರು ಬರುವುದನ್ನು ಕಂಡು ಮೂವರೂ ಹೊರಬಂದು ಓಡತೊಡಗಿದರು. ಪಿಎಸ್​ಐ ಮಹೇಶ್​ ಮತ್ತು ಸಿಬ್ಬಂದಿ ಇಬ್ಬರನ್ನು ಹಿಡಿಯಲು ಓಡಿದ್ದು, ಪಿಎಸ್​ಐಗಳಾದ ತೇಜಸ್ವಿ, ಪ್ರಸನ್ನ ಮತ್ತು ಸಿಬ್ಬಂದಿ ಇನ್ನೊಂದು ಕವಲು ರಸ್ತೆಯಲ್ಲಿ ಓಡುತ್ತಿದ್ದ ಗಡ್ಡಬಿಟ್ಟಿದ್ದ ವ್ಯಕ್ತಿ (ರಾಜು)ಯನ್ನು ಬೆನ್ನಟ್ಟಿದರು.

ಆರೋಪಿಯ ಕಾಲಿಗೆ ಗುಂಡೇಟು

ತನ್ನನ್ನು ಹಿಡಿಯಲು ಬರುತ್ತಿದ್ದ ಪೊಲೀಸರತ್ತ ಹಂತಕ ರಾಜು ತನ್ನ ಸೊಂಟದಲ್ಲಿದ್ದ ಪಿಸ್ತೂಲು ತೆಗೆದು ಗುರಿಯಿಟ್ಟನು. 'ಆಗೇ ಆಯೇತೋ ಸಬ್​ಕೋ ಮಾರ್​ಡಾಲೂಂಗಾ' ಎಂದು ಕೂಗುತ್ತ ಗುಂಡು ಹಾರಿಸಿದನು. ಪಿಎಸ್​ಐ ತೇಜಸ್ವಿ ಕೂಡಲೇ ನೆಲಕ್ಕುರುಳಿ ತಪ್ಪಿಸಿಕೊಂಡರು. ಮತ್ತೆ ಪಿಎಸ್​ಐ ಕಡೆಗೆ ಗುರಿ ಹಿಡಿದು ಶೂಟ್​ ಮಾಡಲು ಯತ್ನಿಸುತ್ತಿರುವಾಗ ತೇಜಸ್ವಿ ಅವರು ಇಲಾಖಾ ಪಿಸ್ತೂಲ್​ನಿಂದ ಗಾಳಿಯಲ್ಲಿ 2 ಸುತ್ತು ಗುಂಡು ಹಾರಿಸಿ ಆತನಿಗೆ ಶರಣಾಗುವಂತೆ ಸೂಚಿಸಿದರು. ಆದರೂ ಆತ ಪಿಎಸ್​ಐ ಹಾಗೂ ಸಿಬ್ಬಂದಿಯತ್ತ ಪಿಸ್ತೂಲು ಹಿಡಿದು ಮುಂದೆ ಬರುತ್ತಿದ್ದನು. ಈ ವೇಳೆ ಪಿಎಸ್​ಐ ತೇಜಸ್ವಿ, ತನ್ನ ಹಾಗೂ ಇನ್ನಿತರ ಸಿಬ್ಬಂದಿಯ ಜೀವರಕ್ಷಣೆಗಾಗಿ ಹಂತಕನ ಬಲಗಾಲಿಗೆ ಎರಡು ಸುತ್ತು ಗುಂಡು ಹಾರಿಸಿದರು. ನೆಲಕ್ಕೆ ಕುಸಿದ ಆರೋಪಿಯನ್ನು ಬಂಧಿಸಲು ತೆರಳಿದಾಗ ಆತ ಮತ್ತೆ ಉರುಳಾಡಿ ಎದ್ದು ತೇಜಸ್ವಿ ಅವರ ಎದೆಯ ಭಾಗಕ್ಕೆ ಗುದ್ದಿ ಗಂಭೀರ ನೋವುಂಟು ಮಾಡಿದ್ದನು. ಪಿಎಸ್​ಐ ಮಹೇಶ್​ ಮತ್ತು ಸಿಬ್ಬಂದಿ ಬೆನ್ನಟ್ಟಿಕೊಂಡು ಹೋಗಿದ್ದ ಆರೋಪಿಗಳಿಬ್ಬರೂ ಕತ್ತಲಲ್ಲಿ ಓಡಿ ತಪ್ಪಿಸಿಕೊಂಡಿದ್ದರು.
"

ಬಂಧಿಸಲ್ಪಟ್ಟ ಮೂವರು ಆರೋಪಿಗಳು ಸುಪಾರಿ ಕಿಲ್ಲರ್ಸ್​ ಆಗಿದ್ದು ಉ.ಪ್ರದೇಶ, ಬಿಹಾರ, ಉತ್ತರಾಖಂಡ ರಾಜ್ಯದವರು. ಡೇವಿಡ್​ ಹತ್ಯೆಯಾದ ಕೆಲವೇ ಗಂಟೆಯಲ್ಲಿ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ಯಾವುದಾದರೂ ಪ್ರಕರಣದ ತನಿಖೆ ಅಥವಾ ಕಾರ್ಯಾಚರಣೆ ವೇಳೆ ಪೊಲೀಸರ ಜೀವಕ್ಕೆ ಅಪಾಯವಾಗುವ ಸಂದರ್ಭದಲ್ಲಿ ಇಲಾಖಾ ಪಿಸ್ತೂಲ್​ ಬಳಕೆಗೆ ಸ್ವಾತಂತ್ರ್ಯ ನೀಡಲಾಗಿದೆ. ಟೀಮ್​ ವರ್ಕ್​ ಕಾರ್ಯಾಚರಣೆ ಮೂಲಕ ಆರೋಪಿಗಳನ್ನು ಬಂಧಿಸಿದ್ದು ಜಿಲ್ಲೆಯ ಎಲ್ಲ ಪಿಎಸ್​ಐ, ಸಿಪಿಐ ಹಾಗೂ ಸಿಬ್ಬಂದಿ ಸೇರಿ 500ಕ್ಕೂ ಹೆಚ್ಚು ಪೊಲೀಸರು ತೊಡಗಿದ್ದರು. ಮುಂದಿನ ತನಿಖೆಗಾಗಿ ಬಂಧಿತರನ್ನು ಆ.10ರಂದು ಪೊಲೀಸ್​ ಕಸ್ಟಡಿಗೆ ಪಡೆಯಲಿದ್ದೇವೆ.

— ಹರಿರಾಮ್​ ಶಂಕರ್​. ಉಡುಪಿ ಎಸ್ಪಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net