ಒಂಟಿ ಮಹಿಳೆಯ ಚಿನ್ನದ ಸರ ಸುಲಿಗೆ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

ಆರೋಪಿಗಳಿಂದ ವಶಪಡಿಸಿಕೊಂಡ ಚಿನ್ನದ ಸರ ಹಾಗೂ ಮಹಿಳೆಯ ಸರ ಸುಲಿಗೆ ಮಾಡಿ ಬೈಕ್​ನಲ್ಲಿ ಪರಾರಿಯಾಗಿದ್ದ ಆರೋಪಿಗಳು.
ಆರೋಪಿಗಳಿಂದ ವಶಪಡಿಸಿಕೊಂಡ ಚಿನ್ನದ ಸರ ಹಾಗೂ ಮಹಿಳೆಯ ಸರ ಸುಲಿಗೆ ಮಾಡಿ ಬೈಕ್​ನಲ್ಲಿ ಪರಾರಿಯಾಗಿದ್ದ ಆರೋಪಿಗಳು.
Published on: 

* ಎಸ್​ಐಆರ್​ ಮಾಹಿತಿ ನೆಪದಲ್ಲಿ ಮನೆಗೆ ನುಗ್ಗಿ ಕಳ್ಳತನ

* 5.53 ಲಕ್ಷ ರೂ. ಮೌಲ್ಯದ ಸೊತ್ತು ವಶಕ್ಕೆ

ಉಡುಪಿ: ಒಂಟಿ ಮಹಿಳೆ ಇರುವುದನ್ನೇ ಗುರಿಯಾಗಿಸಿ, ಎಸ್​ಐಆರ್​ ಸಮೀಕ್ಷೆ ನೆಪದಲ್ಲಿ ಮನೆಗೆ ನುಗ್ಗಿ ಚಿನ್ನದ ಸರ ಸುಲಿಗೆ ಮಾಡಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಡುಪಿ ತಾಲೂಕು ನಿಟ್ಟೂರು ಪುತ್ತೂರು ಗ್ರಾಮದ ವಾದಿರಾಜ್​ ಶ್ರೀನಿವಾಸ ಗಾಣಿಗ (44), ಕಾಪು ತಾಲೂಕು ಪಡು ಗ್ರಾಮದ ಬೀಡುಬದಿ ನಿವಾಸಿ ಸಚಿನ್​ ಶೇಖರ್​ ಪೂಜಾರಿ (30) ಬಂಧಿತರು.

ಆರೋಪಿಗಳಿಂದ ಮಹಿಳೆಯ ಚಿನ್ನದ ಸರ, ಕೃತ್ಯಕ್ಕೆ ಬಳಸಿದ್ದ ಬೈಕ್​, ಎರಡು ಮೊಬೈಲ್​ ​ ಸೇರಿ ಒಟ್ಟು 5.53 ಲಕ್ಷ ರೂ. ಮೌಲ್ಯದ ಸೊತ್ತು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಇಬ್ಬರಿಗೂ 14 ದಿನದ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪ್ರಕರಣದ ವಿವರ

ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ಲಕ್ಷ್ಮೀನಾರಾಯಣ ಕೃಪಾ ಎಂಬ ಮನೆಯಲ್ಲಿ ಶಾಂತಾ ರಮಾನಂದ್​ ಕಾರಂತ್​ (74) ಎಂಬ ಒಂಟಿ ಮಹಿಳೆ ವಾಸವಾಗಿದ್ದರು. ಅ.7ರಂದು ಸಂಜೆ 4 ಗಂಟೆಯ ವೇಳೆಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಮನೆಗೆ ಆಗಮಿಸಿ, ಎಸ್​ಐಆರ್​ ಪರಿಶೀಲನೆಗೆ ಬಂದಿದ್ದಾಗಿ ತಿಳಿಸಿದರು. ಅಲ್ಲದೆ, ತಾವು ತಂದ ಈ ಕಾಗದಪತ್ರಕ್ಕೆ ಸಹಿ ಹಾಕುವಂತೆ ತಿಳಿಸಿದರು. ಹೀಗಾಗಿ ಮಹಿಳೆ ತನ್ನ ಮಗನಲ್ಲಿ ಕೇಳಿ ವಿಚಾರಿಸಿದ ಬಳಿಕ ಸಹಿ ಹಾಕುವುದಾಗಿ ಹೇಳಿ ಮನೆಯೊಳಗೆ ತೆರಳುತ್ತಿದ್ದಂತೆ ಅವರಿಬ್ಬರೂ ಮನೆಯೊಳಗೆ ನುಗ್ಗಿ ಮಹಿಳೆಯನ್ನು ತಳ್ಳಿ ಕೆಳಗೆ ಬೀಳಿಸಿದರು. ಅಲ್ಲದೆ, ಅವರ ಕುತ್ತಿಗೆಯಲ್ಲಿದ್ದ ಸುಮಾರು 4.50 ಲಕ್ಷ ರೂ. ಬೆಲೆಯ 34 ಗ್ರಾಂ ತೂಕದ ಚಿನ್ನದ ಸರ ಸುಲಿಗೆ ಮಾಡಿ, ಬೈಕ್​ ಹತ್ತಿ ಪರಾರಿಯಾಗಿದ್ದರು.

ಈ ಕುರಿತು ಪುತ್ರ ಶ್ರೀನಿವಾಸ ಕಾರಂತ್​ (49) ಅವರು ಉಡುಪಿ ನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಉಡುಪಿ ನಗರ ಠಾಣೆಯ ಪೊಲೀಸ್​ ನಿರೀಕ್ಷಕ ಮಹೇಶ ಪ್ರಸಾದ್​ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿತ್ತು. ಅ.10ರಂದು ಮಣಿಪಾಲದ ಮಣ್ಣಪಳ್ಳ ಎಂಬಲ್ಲಿ ಆರೋಪಿಗಳಿಬ್ಬರನ್ನೂ ಬಂಧಿಸಲಾಗಿದೆ.

ಆರೋಪಿಗಳು ವಿಚಾರಣೆ ಸಂದರ್ಭದಲ್ಲಿ ತಮ್ಮ ತಪ್ಪು ಒಪ್ಪಿಕೊಂಡಿದ್ದು, ಮಹಿಳೆಯ ಸರವನ್ನು ಮಣಿಪಾಲದ ಇಂಡಸ್ಟ್ರಿಯಲ್​ ಕ್ರೆಡಿಟ್​ ಕೋ-ಆಪರೇಟಿವ್​ ಸೊಸೈಟಿಯಲ್ಲಿ ಅಡವಿಟ್ಟಿರುವುದಾಗಿ ಮಾಹಿತಿ ನೀಡಿದ್ದಾರೆ ಎಂದು ಎಸ್ಪಿ ಹರಿರಾಮ್​ ಶಂಕರ್​ ತಿಳಿಸಿದ್ದಾರೆ.

ತನಿಖಾ ತಂಡದಲ್ಲಿ ಉಡುಪಿ ನಗರ ಪೊಲೀಸ್​ ಠಾಣೆಯ ಪಿಎಸ್​ಐಗಳಾದ ಭರತೇಶ ಕಂಕಣವಾಡಿ, ರತ್ನಾಕರ್​ ಕೆ. ಹಾಗೂ ಸಿಬ್ಬಂದಿ ಪ್ರಸನ್ನ ಸಿ., ಜೀವನ್​ಕುಮಾರ್​, ಅಬ್ದುಲ್​ಬಶೀರ್​, ಆನಂದ್​ ಎಸ್​., ಮಣಿಪಾಲ ಠಾಣೆಯ ಮಲ್ಲಯ್ಯ ಹಿರೇಮಠ್​, ಹೇಮಂತ್​, ಸಹಾಯಕರಾಗಿ ನೇತ್ರಾವತಿ, ಸುರೇಂದ್ರ ಡಿ. ಸಹಕರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net