ಅಪ್‌ಲೋಡ್ ಮಾಡಿದ ಫೈಲ್‌ಗಳೇ ನಾಪತ್ತೆ!

ಕುಂದಾಪುರ ತಾಲೂಕು ತ್ರೈಮಾಸಿಕ ಕೆಡಿಪಿ ಸಭೆ
ಕುಂದಾಪುರ ತಾಲೂಕು ತ್ರೈಮಾಸಿಕ ಕೆಡಿಪಿ ಸಭೆ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ನಡೆಯಿತು. ಕುಂದಾಪುರ ತಹಸೀಲ್ದಾರ್ ಪ್ರದೀಪ ಕುರುಡೇಕರ್, ಕುಂದಾಪುರ ತಾಪಂ ಆಡಳಿತಾಧಿಕಾರಿ ಡಾ.ಉದಯ ಶೆಟ್ಟಿ ಉಪಸ್ಥಿತರಿದ್ದರು.
ಕುಂದಾಪುರ ತಾಲೂಕು ತ್ರೈಮಾಸಿಕ ಕೆಡಿಪಿ ಸಭೆ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ನಡೆಯಿತು. ಕುಂದಾಪುರ ತಹಸೀಲ್ದಾರ್ ಪ್ರದೀಪ ಕುರುಡೇಕರ್, ಕುಂದಾಪುರ ತಾಪಂ ಆಡಳಿತಾಧಿಕಾರಿ ಡಾ.ಉದಯ ಶೆಟ್ಟಿ ಉಪಸ್ಥಿತರಿದ್ದರು.
Published on: 

ಕುಂದಾಪುರ: ಕಂದಾಯ ಇಲಾಖೆಯ ಕೆಲವೊಂದು ಕಾರ್ಯಕ್ರಮ ಉತ್ತಮವಾಗಿದ್ದರೂ ಜನರಿಗೆ ತೊಂದರೆ ನೀಡುತ್ತಿದ್ದಾರೆ. ಬಗರ್ ಹುಕುಂ ಮತ್ತು ಅಕ್ರಮ ಸಕ್ರಮ ಕಮಿಟಿ ಸಭೆಯಲ್ಲಿ ಮಂಜೂರು ಮಾಡಿ ಅಪ್‌ಲೋಡ್ ವಾಡಿದ ಫೈಲ್‌ಗಳೇ ನಾಪತ್ತೆಯಾಗುತ್ತಿವೆ. ಪೋಡಿ ಮುಕ್ತ ಗ್ರಾಮ ಎನ್ನುವುದು ಕೇವಲ ಕಾಗದದಲ್ಲಿ ಮಾತ್ರ ಇದೆ. ತಾಲೂಕು ಕಚೇರಿಯಲ್ಲಿ ಮಾಡಿದ ತಪ್ಪನ್ನು ನಾವು ಸರಿಪಡಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅಸಮಾಧಾನ ವ್ಯಕ್ತಪಡಿಸಿದರು.

ಕುಂದಾಪುರ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ನಡೆದ ಕುಂದಾಪುರ ತಾಲೂಕು ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದರು.

ಪಡಿತರ ಚೀಟಿ ಒಟಿಪಿ ಮೂಲಕ ಇಕೆವೈಸಿ ಮಾಡಲು ಪಡಿತರ ಅಂಗಡಿಗಳಿಗೆ ಅವಕಾಶ ಕೊಟ್ಟಿಲ್ಲ. ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳಿಗೆ ಒಟಿಪಿ ಮೂಲಕ ಇಕೆವೈಸಿ ಮಾಡಲು ಕೊಟ್ಟಿರುವುದರಿಂದ ಜನರಿಂದ ಅಧಿಕ ಹಣ ಸುಲಿಗೆ ಮಾಡುತ್ತಿದ್ದಾರೆ. ಪಡಿತರ ವಿತರಣಾ ಕೇಂದ್ರಗಳಿಗೆ ಒಟಿಪಿ ಮೂಲಕ ಇಕೆವೈಸಿ ಮಾಡಲು ಅವಕಾಶ ನೀಡುವಂತೆ ಸೂಚನೆ ನೀಡಿದರು.

ಕುಂದಾಪುರ ತಾಲೂಕು ಆಸ್ಪತ್ರೆ ಸಮಸ್ಯೆ ಬಗ್ಗೆ ವೈದ್ಯರೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕಿನ ಎಲ್ಲ ಮುಖ್ಯರಸ್ತೆಗಳ ಹೊಂಡ ಮುಚ್ಚಲು ಕ್ರಮಕೈಗೊಳ್ಳುವಂತೆ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ತಿಳಿಸಿದರು.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಎಲ್ಲ ಸರ್ಕಾರಿ ಸೇವೆಗಳು ಡೌನ್ ಆಗುತ್ತಿದೆ. ಕೆಡಿಪಿ ಸಭೆಯಲ್ಲಿ 22 ಇಲಾಖೆಗಳು ಅನುಪಾಲನಾ ವರದಿ ನೀಡಿಲ್ಲ. ಕಳೆದ ಮೂರು ಕೆಡಿಪಿ ಸಭೆಗಳಿಗೆ ಗೈರು ಹಾಜರಾದ ಅಧಿಕಾರಿಗಳ ಮತ್ತು ಕಳೆದ ಮೂರು ಕೆಡಿಪಿ ಸಭೆಗಳಿಂದ ಅನುಪಾಲನಾ ವರದಿ ನೀಡದ ಇಲಾಖೆಗಳ ವಿವರವನ್ನು ನೀಡುವಂತೆ ಸೂಚನೆ ನೀಡಿದರು.

ಕುಂದಾಪುರ ತಹಸೀಲ್ದಾರ್ ಪ್ರದೀಪ ಕುರುಡೇಕರ್, ಕುಂದಾಪುರ ತಾಪಂ ಆಡಳಿತಾಧಿಕಾರಿ ಡಾ.ಉದಯ ಶೆಟ್ಟಿ ಉಪಸ್ಥಿತರಿದ್ದರು. ಕುಂದಾಪುರ ತಾಪಂ ಇಒ ಮಹೇಶ ಕೆ.ಜಿ. ಸ್ವಾಗತಿಸಿದರು.

ಗುರುರಾಜ್ ಗಂಟಿಹೊಳೆ ಮನವಿ

ಮಳೆ ಕೊರತೆ ಹಿನ್ನೆಲೆಯಲ್ಲಿ ವೆಂಟೆಡ್ ಡ್ಯಾಮ್‌ಗಳಿಗೆ ಹಲಗೆ ಅಳವಡಿಸುವ ಕೆಲಸವನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಬೇಕು. ಬೇಸಿಗೆಯ ಅಪಾಯವನ್ನು ಅರಿತು ಪರಿಸ್ಥಿತಿ ಅರ್ಥ ಮಾಡಿಕೊಂಡು ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ರೈತರು ಬರಗಾಲದ ಗಂಭೀರತೆ ಅರ್ಥ ಮಾಡಿಕೊಂಡು ಕುಡಿಯುವ ನೀರಿಗೆ ಸಹಕಾರ ನೀಡಬೇಕು ಎಂದು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಮನವಿ ಮಾಡಿದರು.

ಶಾಸಕ ಕೊಡ್ಗಿ ಅಸಮಾಧಾನ

ಮಳೆ ವಾಪನ ಸರಿಯಾಗಿ ಆಗದಿರುವುದರಿಂದ ಕುಂದಾಪುರ ತಾಲೂಕು ಬರಪೀಡಿತ ಎಂದು ಘೋಷಣೆ ವಾಡಲು ಸಮಸ್ಯೆಯಾಗಿದೆ. ಸಮೀಪದ ಬೈಂದೂರು ತಾಲೂಕು ಬರಪೀಡಿತ ಎಂದು ಘೋಷಣೆಯಾದರೆ ಕುಂದಾಪುರವನ್ನು ಯಾಕೆ ಬರಪೀಡಿತ ಎಂದು ಪರಿಗಣಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net