

ಉಡುಪಿ: ತಾಲೂಕಿನ ಕುಕ್ಕಿಕಟ್ಟೆ ಎಂಬಲ್ಲಿ 2002ರಲ್ಲಿ ಮುಖ್ಯ ಶಿಕ್ಷಕ ಮನೋಹರ ಶೆಟ್ಟಿ ಎಂಬವರನ್ನು ವಿನೋದ ಶೆಟ್ಟಿಗಾರ ಮತ್ತು ಇತರರೊಡನೆ ಸೇರಿ ಕೊಲೆಗೈದ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಉಡುಪಿಯ ರಾಜೇಶ ಕೇಶವ ಆಚಾರ್ಯ (51)ನನ್ನು ಬಂಧಿಸಲಾಗಿದೆ.
ಕಲಿ ಯೋಗೀಶನ ಸಹಚರನಾಗಿರುವ ಈ ಆರೋಪಿಯನ್ನು ಉಡುಪಿ ಸೆಷನ್ಸ್ ನ್ಯಾಯಾಲಯಕ್ಕೆ ಉಡುಪಿ ಪೊಲೀಸರು ಹಾಜರು ಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಕೊಲೆ ಪ್ರಕರಣ ಸಂದರ್ಭದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿ ಬಿಡುಗಡೆಯಾಗಿದ್ದ ರಾಜೇಶ, ಮುಂದಿನ ನ್ಯಾಯಾಲಯದ ವಿಚಾರಣೆಗೆ 2004ರಿಂದ ಹಾಜರಾಗದೇ ತಲೆಮರೆಸಿಕೊಂಡಿದ್ದನು.
ದುಬೈನಲ್ಲಿ 22 ವರ್ಷದಿಂದ ಭೂಗತನಾಗಿದ್ದ ಆತನನ್ನು ಕಳೆದ ವಾರ ದುಬೈನಲ್ಲಿ ಇಂಟಪೋರ್ಲ್ ಸಹಕಾರದಿಂದ ಉಡುಪಿ ಜಿಲ್ಲಾ ಪೊಲೀಸ್, ಮಂಗಳೂರು ಪೊಲೀಸ್ ಮತ್ತು ಸಿಐಡಿ ಗುಪ್ತಚರ ಪೊಲೀಸರು ಬಂಧಿಸಿ ಭಾರತಕ್ಕೆ ಕರೆತಂದಿದ್ದರು. ಆತನನ್ನು ಭಾರತಕ್ಕೆ ಗಡಿಪಾರು ಮಾಡಲಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಮ ಶಂಕರ ತಿಳಿಸಿದ್ದಾರೆ.