ಜೀವಜಲ ತತ್ವಾರ ಭೀತಿ!

ಹಿಂಗಾರು ಹಂಗಾಮಲ್ಲೂ ಮಳೆ ಕೊರತೆ
ಬಂಟ್ವಾಡಿ ಮತ್ತು ಕಟ್ಟು ಎಂಬಲ್ಲಿ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ.
ಬಂಟ್ವಾಡಿ ಮತ್ತು ಕಟ್ಟು ಎಂಬಲ್ಲಿ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ.
Published on: 

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ

ಉಡುಪಿ ಜಿಲ್ಲೆಯ ನದಿ, ಹಳ್ಳ, ತೋಡುಗಳಲ್ಲಿ ನೀರಿನ ಹರಿವು ಕ್ಷೀಣಿಸಿದೆ. ಬರ ಈ ಸಲ ಜನರನ್ನು ಇನ್ನಿಲ್ಲದಂತೆ ಕಾಡುವ ಲಕ್ಷಣಗಳು ಈಗಲೇ ಗೋಚರಿಸುತ್ತಿವೆ. ಕಳೆದ ಸಾಲಿಗೆ ಹೋಲಿಸಿದರೆ ಪ್ರಮುಖ ನದಿಗಳ ಒಳಹರಿವು ಈಗಲೇ ಕಡಿಮೆಯಾಗಿದ್ದು, ಈ ಬಾರಿ ಬೇಸಿಗೆಗೂ ಮುನ್ನ ಕುಡಿಯುವ ನೀರಿಗೆ ತತ್ವಾರ ಎದುರಾಗುವ ಸಾಧ್ಯತೆ ಇದೆ.

ಮುಂಗಾರಿನಲ್ಲಿ ಮಳೆ ಕೊರತೆಯಾದರೆ ಹಿಂಗಾರಿನಲ್ಲಿಯೂ ಮಳೆ ದುರ್ಬಲಗೊಂಡಿದೆ. ನಿರೀಕ್ಷಿತ ಮಳೆ ಬೀಳದೆ ಇರುವುದು ರೈತಾಪಿ ವರ್ಗವನ್ನು ಕಂಗೆಡಿಸಿದೆ. ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಜಲ ವೃದ್ಧಿಗೆ ಪೂರಕವಾಗಿರುವ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. ಬಂಟ್ವಾಡಿ ಮತ್ತು ಕಟ್ಟು ಅಣೆಕಟ್ಟಿನಲ್ಲಿ ಹಲಗೆ ಹಾಕುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ.

ಈ ಬಾರಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಬಿಸಿಲಿನ ವಾತಾವರಣ ಇತ್ತು. ಆಗಸ್ಟ್ ತಿಂಗಳ ಮೊದಲೆರಡು ವಾರ ಮಳೆಯಾಗಿತ್ತು. ನಂತರ ಬಿಸಿಲಿನ ವಾತಾವರಣ ಮುಂದುವರಿದಿದೆ. ಕೆಲ ದಿನಗಳಿಂದ ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗುತ್ತಿದ್ದರೂ ನಿರೀಕ್ಷಿತ ಮಳೆ ಸುರಿದಿಲ್ಲ.

ತಾಪ ಉಲ್ಬಣ

ಸೆಪ್ಟೆಂಬರ್ ತಿಂಗಳಲ್ಲೇ ಬಿಸಿಲಿನ ತೀವ್ರತೆ ಹೆೆಚ್ಚಾಗಿತ್ತು. ಗರಿಷ್ಠ ತಾಪವಾನ 34ರಿಂದ 39 ಡಿಗ್ರಿ ಸೆಲ್ಶಿಯಸ್ ತಲುಪಿತ್ತು. ಇದರಿಂದ ಭತ್ತದ ಕೃಷಿಗೂ ಸಮಸ್ಯೆಯಾಗಿತ್ತು, ಭತ್ತ ಕಾಳು ಕಟ್ಟುವ ಸಮಯದಲ್ಲೇ ಬಿಸಿಲಿನ ತೀವ್ರತೆ ಕಾರಣ ಇಳುವರಿ ಕುಸಿಯುವ ಸಾಧ್ಯತೆ ಇದೆ ಎನ್ನುತ್ತಾರೆ ರೈತರು.

2026ರ ನವೆಂಬರ್‌ನಿಂದ 2027ರ ಮೇವರೆಗೆ ಉಡುಪಿ ಜಿಲ್ಲೆಯಲ್ಲಿ 123 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಜಿಪಂ ತಿಳಿಸಿದೆ. ಜೂನ್ ತಿಂಗಳಿನಿಂದ ಸೆಪ್ಟೆಂಬರ್ ಅಂತ್ಯದವರೆಗೆ ನಾಲ್ಕು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 400.8 ಸೆಂ.ಮೀ.ನಷ್ಟು ವಾಡಿಕೆ ಮಳೆ ಸುರಿಯಬೇಕಿತ್ತು. ಆದರೆ 273.6 ಸೆಂ.ಮೀ. ವಾತ್ರ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಒಟ್ಟು ಶೇ.32ರಷ್ಟು ಮಳೆ ಕೊರತೆಯಾಗಿದೆ. ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಅಧೀನದಲ್ಲಿ 691 ಕಿಂಡಿ ಅಣೆಕಟ್ಟುಗಳಿದ್ದು ಶೇ.50ರಷ್ಟು ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಕೆ ಕಾರ್ಯ ನಡೆದಿದೆ ಎಂದು ಸಣ್ಣ ನೀರಾವರಿ ಇಲಾಖೆ ವರದಿ ನೀಡಿದೆ.

ಕುಂದಾಪುರ ಮತ್ತು ಬೈಂದೂರು ತಾಲೂಕಿನಲ್ಲಿ ಮಳೆ ಕೊರತೆಯಿಂದ ಬರದ ಛಾಯೆ ಆವರಿಸಿದೆ. ಅನೇಕ ಗ್ರಾಮಗಳಲ್ಲಿ ಅಂತರ್ಜಲಮಟ್ಟ ತೀವ್ರವಾಗಿ ಕುಸಿದಿದ್ದು, ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸುವ ಕಾರ್ಯ ಬಹುತೇಕ ಕಡೆಗಳಲ್ಲಿ ಪೂರ್ಣಗೊಂಡಿದ್ದು, ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ. ಬರ ಎದುರಿಸಲು ಸಿದ್ಧರಾಗಿರುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ.
ಗುರುರಾಜ್ ಗಂಟಿಹೊಳೆ ಬೈಂದೂರು ಶಾಸಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net