ನ.24ಕ್ಕೆ 'ಸೂಪರ್​ ಮೂನ್​' ದೀಪೋತ್ಸವ

ಸೂಪರ್​ ಮೂನ್​. (ಸಾದರ್ಭಿಕ ಚಿತ್ರ)
ಸೂಪರ್​ ಮೂನ್​. (ಸಾದರ್ಭಿಕ ಚಿತ್ರ)
Published on: 

* ಭೂಮಿಗೆ ಸಮೀಪವಾಗುವ ಚಂದಮಾಮ

* ಕಾರ್ತಿಕ ಮಾಸದ ಹುಣ್ಣಿಮೆ ಚಂದಿರನ ಸಂಭ್ರಮ

ಉಡುಪಿ: ಇದೀಗ ಕಾರ್ತಿಕ ಮಾಸದ ನಿಮಿತ್ತ ಎಲ್ಲ ದೇಗುಲ, ಮನೆಗಳಲ್ಲೂ ದೀಪೋತ್ಸವದ ಸಡಗರ ಕಂಡುಬರುತ್ತಿದ್ದು, ಬೆಳಕಿನ ಸಂಭ್ರಮಕ್ಕೆ ಸಾಥ್​ ನೀಡಲು ಚಂದಿರನೂ ಸಹ ಭೂಮಿಯ ಸಮೀಪಕ್ಕೆ ಬರಲಿದ್ದಾನೆ.

ಕಾತೀಕದ ದೀಪೋತ್ಸವಕ್ಕೆ ಹುಣ್ಣಿಮೆ ಚಂದಿರನೂ ಸಹ ತನ್ನದೂ ಒಂದು ಬೆಳಗು ದೀಪವಿರಲಿ ಎಂಬಂತೆ ನ.24 'ಸೂಪರ್​ ಮೂನ್​' ಆಗಿ ಬೆಳಗಲಿದ್ದಾನೆ. 28 ದಿನಗಳಲ್ಲಿ ಚಂದ್ರನು ಪ್ರತಿದಿನ ಒಂದೊಂದು ನಕ್ಷತ್ರಕ್ಕೆ ನೇರಬಂದು ಗೋಚರಿಸುವನು. ನ.24ರಂದು ಕೃತ್ತಿಕಾ ನಕ್ಷತ್ರವಿದ್ದು, ಈದಿನ ಕಾರ್ತಿಕ ಹುಣ್ಣಿಮೆಯ ದಿನವಾಗಿದೆ.

ಭೂಮಿಗೆ ಸಾಮೀಪ್ಯ

ಭೂಮಿ ಸುತ್ತುವ ಚಂದ್ರನ ಪಥವು ವರ್ತುಲವಲ್ಲ. ಅದು ದೀರ್ಘ ವೃತ್ತಾಕಾರ. ಈ ಪಥದಲ್ಲಿ ದಿನಗಣನೆಯಂತೆ 28 ದಿನಗಳಿಗೊಮ್ಮೆ ಭೂಮಿಗೆ ಚಂದ್ರನು ಸಮೀಪ (ಎಪೊಜಿ) ಹಾಗೂ ದೂರ (ಪೆರಿಜಿ) ಸಾಗುತ್ತಾನೆ. ಭೂಮಿ-ಚಂದ್ರರ ಸರಾಸರಿ ದೂರ 3.84 ಲಕ್ಷ ಕಿಮೀ ಇದೆ. ಪಥದ ಸಂಚಾರದಲ್ಲಿ ಸಮೀಪ ಬಂದಾಗ 3.60 ಲಕ್ಷ ಕಿಮೀಗೆ ಬರಲಿದ್ದಾನೆ. ಅಂದರೆ, ಸುಮಾರು 24 ಸಾವಿರ ಕಿಮೀ ಭೂಮಿಗೆ ಹತ್ತಿರವಾಗುತ್ತಾನೆ.

ದೊಡ್ಡದಾಗಿ ಗೋಚರ

ಭೂಮಿಗೆ ಹತ್ತಿರವಾಗುವುದರಿಂದ ಶೇ.14 ಅಂಶ ದೊಡ್ಡದ್ದಾಗಿ ಕಾಣುತ್ತಾನೆ. ಅಲ್ಲದೆ, ಹುಣ್ಣಿಮೆ ಬೆಳದಿಂಗಳ ಪ್ರಭೆಯೂ ಸಹ ಸುಮಾರು ಶೇ.30 ಅಂಶ ಹೆಚ್ಚಾಗಲಿದೆ. ಹೀಗಾಗಿ ಹುಣ್ಣಿಮೆಯ ದಿನ ಚಂದ್ರನು ದೀಪೋತ್ಸವಗಳ ಜತೆ 'ಸೂಪರ್​ ಮೂನ್​' ಆಗಿ ಆಕಾಶ ದೀಪವಾಗಿ ಕಾಣಲಿದ್ದಾನೆ ಎನ್ನುತ್ತಾರೆ ಉಡುಪಿಯ ಹಿರಿಯ ಭೌತಶಾಸ್ತ್ರಜ್ಞ ಡಾ. ಎ.ಪಿ. ಭಟ್​.