

ಉಡುಪಿ: ನಮ್ಮ ಹಿಂದಿನ ತಲೆಮಾರಿನವರು ಸಾಂಪ್ರದಾಯಿಕ ಆಚರಣೆಯೊಂದಿಗೆ ನೆಮ್ಮದಿಯಿಂದ ಇದ್ದರು. ಆದರೆ, ಇಂದು ಪ್ಲೇ ಸ್ಕೂಲ್ ಮಕ್ಕಳಿಗೂ ಪರೀಕ್ಷೆ ಇನ್ನಿತರ ಒತ್ತಡ ಹೆಚ್ಚುತ್ತಿದೆ. ದೊಡ್ಡವರೂ ಹಲವು ಒತ್ತಡಗಳಿಗೆ ಸಿಲುಕಿದ್ದಾರೆ. ಬಾಲ್ಯದಿಂದ ವೃದ್ಧಾಪ್ಯದವರೆಗೂ ಜೀವನ ಒತ್ತಡಮಯವಾಗಿದೆ. ಅದನ್ನು ಕಡಿಮೆ ಮಾಡಲು ನಿತ್ಯ ಧ್ಯಾನ-ಯೋಗ ಮಾಡುವುದರೊಂದಿಗೆ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮ ಹೆಚ್ಚು ಹೆಚ್ಚು ನಡೆಯಬೇಕು ಎಂದು ಲಯನ್ಸ್ ಪ್ರಥಮ ಉಪ ಜಿಲ್ಲಾ ಗವರ್ನರ್ ಲಯನ್ ಹರಿಪ್ರಸಾದ್ ರೈ ಹೇಳಿದರು.
ಉಡುಪಿ ದೊಡ್ಡಣಗುಡ್ಡೆಯ ಕಮಲ್ ಎ. ಬಾಳಿಗಾ ಸಭಾಂಗಣದಲ್ಲಿ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ, ಲಯನ್ಸ್ ಕ್ಲಬ್ ಮಣಿಪಾಲ, ಲಯನ್ಸ್ ಕ್ಲಬ್ ಆಫ್ ಉಡುಪಿ ಲಕ್ಷ್ಯ, ಲಯನ್ಸ್ ಡಿಸ್ಟ್ರಿಕ್ಟ್ -317ಸಿ ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಉಡುಪಿ-ಕರಾವಳಿ ಆಶ್ರಯದಲ್ಲಿ 'ವಿಶ್ವ ಮಾನಸಿಕ ಆರೋಗ್ಯ ದಿನ' ನಿಮಿತ್ತ ಆಯೋಜಿಸಿದ್ದ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಾ. ಎ.ವಿ. ಬಾಳಿಗಾ ಸ್ಮಾರಕ ಅಸ್ಪತ್ರೆಯ ಖ್ಯಾತ ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ ಅಧ್ಯಕ್ಷತೆ ವಹಿಸಿದ್ದರು. ಪಿಎಂಜೆಎಫ್ ಲಯನ್ ರಮಾನಂದ ಕೆ., ಎಂಜೆಎಫ್ ಲಯನ್ ರವಿರಾಜ್ ನಾಯಕ್, ಎಂಜೆಎಫ್ ಲಯನ್ ಕೃಷ್ಣ ಮುಖ್ಯೋಪಾಧ್ಯಾಯ, ಲಯನ್ ಹೆರಾಲ್ಡ್ ಸೋನ್ಸ್, ಪಿಎಂಜೆಎಫ್ ಲಯನ್ ಡಾ. ಎಚ್. ಗಣೇಶ್ ಪೈ, ಐಎಂಎ ಉಡುಪಿ ಕರಾವಳಿ ಅಧ್ಯಕ್ಷ ಡಾ. ಕೃಷ್ಣಮೂರ್ತಿ ಉಪಾಧ್ಯಾಯ, ಡಾ ನಿಶಾಂತ್ ಪಿ. ಭಟ್, ಡಾ. ಮಾನಸ್ ಇ.ಆರ್. ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಬಂಧು ಹಗಲು ಆರೈಕೆ ಕೇಂದ್ರ ಹಾಗೂ ಅಭಯ ಪುನರ್ವಸತಿ ಕೇಂದ್ರ ಮತ್ತು ಹೊಂಬೆಳಕು ಸಂಸ್ಥೆಯ ನಿವಾಸಿಗರು ರಚಿಸಿದ ಕರಕುಶಲ ವಸ್ತುಗಳ ಪ್ರದರ್ಶನ ಉದ್ಘಾಟಿಸಲಾಯಿತು. ಸಂಸ್ಥೆಗಳ ನಿವಾಸಿಗಳಿಗೆ ಆಯೋಜಿಸಿದ್ದ ಒಳಾಂಗಣ ಹಾಗೂ ಹೊರಾಂಗಣ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ತರಿಸಲಾಯಿತು.
ಬಂಧು ಹಗಲು ಆರೈಕೆ ಕೇಂದ್ರದ ನಿವಾಸಿ ಶಶಿರೇಖಾ ಪ್ರಾರ್ಥಿಸಿದರು. ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯಾ ಶೆಟ್ಟಿ ಸ್ವಾಗತಿಸಿದರು. ಆಪ್ತ ಸಮಾಲೋಚಕಿ ಜಮೀಲಾ ರಹೀಮ್ ವಂದಿಸಿದರು. ಆಪ್ತ ಸಮಾಲೋಚಕಿ ಪದ್ಮಾ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.
ಸಭೆಯ ಬಳಿಕ ಬಂಧು ಹಗಲು ಆರೈಕೆ ಕೇಂದ್ರ ಹಾಗೂ ಅಭಯ ಪುನರ್ವಸತಿ ಕೇಂದ್ರ ಹೊಂಬೆಳಕು ಮತ್ತು ಪರಿವರ್ತನ ಸಂಸ್ಥೆಗಳ ನಿವಾಸಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.