ಮೇಕ್​ ಇನ್​ ಇಂಡಿಯಾ ನಿಲ್ಲಿಸಿ; 'ಮೇಕ್​ ಫಾರ್ ​ ಇಂಡಿಯಾ' ಘೋಷಿಸಿ

ಉಡುಪಿಯಲ್ಲಿ ಆಯೋಜಿಸಿದ್ದ  'ನಾಳಿನ ಉದ್ಯಮಿಗಳ ನಿರ್ಮಾಣ; ಇಂದಿನ ಸ್ಥಳೀಯ ವ್ಯಾಪಾರಗಳ ಸಂರಕ್ಷಣೆ' ಸಂವಾದ ಕಾರ್ಯಕ್ರಮದಲ್ಲಿ ಕೆ.ಅಣ್ಣಾಮಲೈ ಮಾತನಾಡಿದರು.
ಉಡುಪಿಯಲ್ಲಿ ಆಯೋಜಿಸಿದ್ದ 'ನಾಳಿನ ಉದ್ಯಮಿಗಳ ನಿರ್ಮಾಣ; ಇಂದಿನ ಸ್ಥಳೀಯ ವ್ಯಾಪಾರಗಳ ಸಂರಕ್ಷಣೆ' ಸಂವಾದ ಕಾರ್ಯಕ್ರಮದಲ್ಲಿ ಕೆ.ಅಣ್ಣಾಮಲೈ ಮಾತನಾಡಿದರು.
Published on: 

* ಪ್ರಧಾನಿ ನರೇಂದ್ರ ಮೋದಿಗೆ ಕೆ.ಅಣ್ಣಾಮಲೈ ಸಲಹೆ

* ದೇಶದ ಔದ್ಯಮಿಕ ಕ್ಷೇತ್ರದ ಕುರಿತು ಉಡುಪಿಯಲ್ಲಿ ಸಂವಾದ

ಉಡುಪಿ: ಭಾರತವು ಅತ್ಯದ್ಭುತ ದೇಶ. ಇಂತಹ ದೇಶದಲ್ಲಿ ನಾವೆಲ್ಲ ಇರುವುದು ಪುಣ್ಯ. ಕಳೆದ 10 ವರ್ಷದಲ್ಲಿ ದೇಶವು ವಿಶ್ವದ ಗಮನ ಸೆಳೆಯುವ ನಿಟ್ಟಿನಲ್ಲಿ ಸಾಧನೆಯ ಪರ್ವ ಕಂಡಿದೆ. 2.12 ಟ್ರಿಲಿಯನ್​ ಆರ್ಥಿಕ ಸಾಧನೆಯೊಂದಿಗೆ ಜಗತ್ತಿನಲ್ಲಿ 5ನೇ ಸ್ಥಾನದಲ್ಲಿದೆ. ಜಿಡಿಪಿ ಶೇ.7ರಷ್ಟು ಬೆಳವಣಿಗೆ ಹೊಂದಿದೆ. ದೇಶದ ಮುಂದಿನ 20-25 ವರ್ಷದ ಔದ್ಯಮಿಕ ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ 'ಮೇಕ್​ ಇನ್​ ಇಂಡಿಯಾ' ನಿಲ್ಲಿಸಿ. ಪ್ರಧಾನಿ ನರೇಂದ್ರ ಮೋದಿ ಅವರು 'ಮೇಕ್​ ಫಾರ್ ​ ಇಂಡಿಯಾ' ಘೋಷಿಸಲಿ ಎಂದು ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ 'ವೀ ದ ಲೀಡರ್ಸ್​' ಸಂಸ್ಥಾಪಕ ಕೆ.ಅಣ್ಣಾಮಲೈ ಸಲಹೆ ನೀಡಿದರು.

ಉಡುಪಿಯ ಪುರಭವನದಲ್ಲಿ ಉಡುಪಿ ಮೊಬೈಲ್​ ರಿಟೇಲರ್ಸ್​ ಅಸೋಸಿಯೇಷನ್​ ವತಿಯಿಂದ ಶನಿವಾರ (ಅ.24) ಆಯೋಜಿಸಿದ್ದ ಆಲ್​ ಇಂಡಿಯಾ ಮೊಬೈಲ್​ ರಿಟೇಲರ್ಸ್​ ಅಸೋಸಿಯೇಷನ್​ನ ರಾಜ್ಯ ಮಟ್ಟದ ಸಮಾವೇಶದಲ್ಲಿ 'ನಾಳಿನ ಉದ್ಯಮಿಗಳ ನಿರ್ಮಾಣ; ಇಂದಿನ ಸ್ಥಳೀಯ ವ್ಯಾಪಾರಗಳ ಸಂರಕ್ಷಣೆ' ವಿಷಯ ಕುರಿತ ಸಂವಾದದಲ್ಲಿ ಮಾತನಾಡಿದರು.

ಉದ್ಯೋಗಕ್ಕೆ ಕತ್ತರಿ

ಮೇಕ್​ ಇನ್​ ಇಂಡಿಯಾ ಈಗ ಉತ್ತಮ ಎನಿಸಬಹುದು. ಆದರೆ, ಭವಿಷ್ಯದಲ್ಲಿ ದೇಶದ ಜನರಿಗೆ ಉದ್ಯೋಗದ ಕೊರತೆ ಉಂಟಾಗಬಹುದು. ಈಗಾಗಲೇ ಎಲ್ಲವೂ ಆನ್​ಲೈನ್​ ವ್ಯವಸ್ಥೆಗೆ ಜನರು ಹೊಂದಿಕೊಳ್ಳುತ್ತಿದ್ದು ಅಮೆಜಾನ್​, ಫ್ಲಿಪ್​ಕಾರ್ಟ್​ನಂತಹ ವಿದೇಶಿ ಕಂಪನಿಗಳ ಮೂಲಕ ಉತ್ಪನ್ನ ಖರೀದಿಸುತ್ತಿದ್ದು ಲಾಭಾಂಶವೆಲ್ಲವೂ ಅವರಿಗೇ ಹೋಗುತ್ತಿದೆ. ಸ್ಥಳೀಯ ಕಿರಾಣಾ ವ್ಯವಸ್ಥೆ ಹಾಗೂ ರಿಟೇಲ್​ ವ್ಯಾಪಾರಕ್ಕೆ ಈಗಾಗಲೇ ಧಕ್ಕೆ ಆರಂಭವಾಗಿದೆ. ಝೊಮೆಟೋ, ಸ್ವಿಗ್ಗಿ ಸೇರಿದಂತೆ ವಿವಿಧ ವಿದೇಶಿ ಕಂಪನಿಗಳಲ್ಲಿ ಭಾರತದ 1.20 ಕೋಟಿಗೂ ಅಧಿಕ ಜನ ಕೆಲಸ ಮಾಡುತ್ತಿದ್ದಾರೆ. ಈ ಕಂಪನಿಗಳು ನಾಳೆ ತಮ್ಮ ಉದ್ಯಮ ಬದಲಿಸಿದರೆ ಅಥವಾ ಅವರ ಕೆಲಸಗಳಿಗೆ ರೋಬೋ ವ್ಯವಸ್ಥೆ ಅಳವಡಿಸಿದರೆ ದೇಶದ ಕೋಟ್ಯಂತರ ಜನರಿಗೆ ಕೆಲಸ ಇಲ್ಲದಾಗುತ್ತದೆ. ಹೀಗಾಗಿ 'ಮೇಕ್​ ಫಾರ್ ​ ಇಂಡಿಯಾ'ದಿಂದ ಜನತೆಗೆ ಉದ್ಯೋಗ ಸೃಷ್ಟಿಯಾಗುತ್ತದೆ ಎಂದರು.

ಬೇಡ ಪೋಸ್ಟರ್​ ಸಂಸ್ಕೃತಿ

ರಾಜಕೀಯವು ಕೇವಲ ಪೋಸ್ಟರ್​ ಸಂಸ್ಕೃತಿಗೆ ಸೀಮಿತವಾಗಬಾರದು. ಮುಖ್ಯಮಂತ್ರಿ ಅಥವಾ ಮಾಜಿ ಮುಖ್ಯಮಂತ್ರಿ ಬರುತ್ತಿದ್ದಾರೆಂದರೆ ಪೋಸ್ಟರ್​ ಹಾಕುತ್ತಾರೆ. ಅದರ ಬದಲು ಸರ್ಕಾರ ಉಡುಪಿಗೆ ಏನು ಮಾಡಿದೆ ಎಂಬುದನ್ನು ಜನರಿಗೆ ತಿಳಿಸುವ ಪೋಸ್ಟರ್​ ಹಾಕುವ ಮಟ್ಟಕ್ಕೆ ರಾಜಕೀಯ ಬೆಳೆಯಬೇಕು. ರಾಜಕೀಯ ಪಕ್ಷಗಳ ನಡುವೆ ಅಭಿವೃದ್ಧಿ ಕಾರ್ಯಗಳ ಆಧಾರದಲ್ಲಿ ಸ್ಪರ್ಧೆ ಏರ್ಪಟ್ಟಾಗ ಮಾತ್ರ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯ. ಕರ್ನಾಟಕವು ಇನ್ನಷ್ಟು ಉತ್ತಮ ಸರ್ಕಾರ ನಿರೀಕ್ಷಿಸುವ ಅರ್ಹತೆ ಹೊಂದಿದೆ ಎಂದರು.

ಜವಾಬ್ದಾರಿಯಾಗಲಿ ರಾಜಕೀಯ

ಕರ್ನಾಟಕದಲ್ಲಿ ರಾಜಕೀಯವು ಹೆಚ್ಚು ಜವಾಬ್ದಾರಿಯುತವಾಗಬೇಕು. ಜನರಿಗೆ ಉಚಿತ ಕೊಡುಗೆ ಘೋಷಿಸಿ ಮತ ಪಡೆಯುವ ರಾಜಕಾರಣಕ್ಕೆ ಸೀಮಿತವಾಗದೆ, ರಾಜ್ಯಕ್ಕೆ ಉತ್ತಮ ಆಡಳಿತ ನೀಡುವತ್ತ ಪಕ್ಷಗಳು ಗಮನಹರಿಸಬೇಕು. ಕರಾವಳಿ ಭಾಗದಲ್ಲಿ ಕೈಗಾರಿಕೆಗೆ ಹೆಚ್ಚಿನ ಅವಕಾಶವಿದ್ದು, ಯುವ ಸಮುದಾಯ ಈ ಕ್ಷೇತ್ರದ ಪ್ರಯೋಜನ ಪಡೆಯಬೇಕು. ಬೆಂಗಳೂರು ಮಾತ್ರ ಅಭಿವೃದ್ಧಿಯಾದರೆ ಸಾಲದು. ರಾಜ್ಯದ ಜಿಡಿಪಿಗೆ ಶೇ. 65ರಷ್ಟು ಕೊಡುಗೆ ಬೆಂಗಳೂರು ನೀಡುತ್ತಿದೆ. ಆದರೆ, ಕರ್ನಾಟಕವು ಬೆಂಗಳೂರು ಅವಲಂಬಿತ ರಾಜ್ಯವಾಗಬಾರದು. ವಿಜಯಪುರ, ಕಲಬುರಗಿ, ಗದಗ, ಉಡುಪಿ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳೂ ಸಮಾನವಾಗಿ ಅಭಿವೃದ್ಧಿಯಾಗಬೇಕು ಎಂದರು.

ಸಂವಾದದಲ್ಲಿ ಆಲ್​ ಇಂಡಿಯಾ ಮೊಬೈಲ್​ ರಿಟೇಲರ್ಸ್​ ಅಸೋಸಿಯೇಷನ್​ನ ಸ್ಥಾಪಕಾಧ್ಯಕ್ಷ ಕೈಲಾಷ್​ ಎಲ್​. ಅಧ್ಯಕ್ಷತೆ ವಹಿಸಿದ್ದರು. ರಾಜ್ಯಾಧ್ಯಕ್ಷ ರವಿಕುಮಾರ್​, ಕಾರ್ಯದರ್ಶಿ ಸುಹಾಸ್​ ಕಿಣಿ, ಜಿಲ್ಲಾಧ್ಯಕ್ಷ ವಿವೇಕ್​ ಜಿ. ಸುವರ್ಣ ಉಪಸ್ಥಿತರಿದ್ದರು.

ಸಭಿಕರು ಕೇಳಿದ ವಿವಿಧ ಪ್ರಶ್ನೆಗಳಿಗೆ ಅಣ್ಣಾಮಲೈ ಉತ್ತರಿಸಿದರು.

ರಾಜಕೀಯಕ್ಕೆ ಹೊಸತನವೇ 'ವೀ ದ ಲೀಡರ್ಸ್​' ಉದ್ದೇಶ

ತಮಿಳುನಾಡು ರಾಜಕೀಯದಲ್ಲಿರುವ ಅನೇಕ 'ರಾಜಕೀಯ'ವನ್ನು ಹಾಗೂ ಏಕವ್ಯಕ್ತಿ ನಾಯಕತ್ವ ಸೇರಿದಂತೆ ಚಾಲ್ತಿಯಲ್ಲಿರುವ ಕೆಟ್ಟ ವ್ಯವಸ್ಥೆ ಒಡೆದುಹಾಕಿ ಹೊಸತು ಕಟ್ಟುವ ಉದ್ದೇಶವೇ ನಮ್ಮ 'ವೀ ದ ಲೀಡರ್ಸ್​' ಸಂಘಟನೆಯ ಉದ್ದೇಶ. ಅದಕ್ಕಾಗಿ ತಳಮಟ್ಟದಿಂದ ಕಾರ್ಯ ಮಾಡುತ್ತಿದ್ದೇವೆ. ಕಳೆದ 4 ತಿಂಗಳಿಂದ 'ಸಿಟಿಜನ್​ ಗ್ರೂಪ್​' ಮಾಡಿದ್ದು 21 ಲಕ್ಷ ಜನರ ನೋಂದಣಿಯಾಗಿದ್ದು, ಶೀಘ್ರದಲ್ಲೇ 50 ಲಕ್ಷಕ್ಕೆ ಏರಿಸುವ ಗುರಿಯಿದೆ. ಪ್ರತಿ ತಿಂಗಳು ವಿವಿಧ ವಿಷಯದ ಕುರಿತು ಕಾರ್ಯಯೋಜನೆ ಮಾಡುತ್ತಿದ್ದೇವೆ. ಜುಲೈನಲ್ಲಿ ಡ್ರಗ್ಸ್​ಗೆ ಕಡಿವಾಣ ಅಭಿಯಾನ, ಆಗಸ್ಟ್​, ಸೆಪ್ಟೆಂಬರ್​ನಲ್ಲಿ ಪರಿಸರ ರಕ್ಷಣೆಯಲ್ಲಿ 100ಕ್ಕೂ ಅಧಿಕ ಕೆರೆ ಹಾಗೂ ಪ್ರಮುಖ ನದಿಗಳ ತಟಗಳಲ್ಲಿ ಸ್ವಚ್ಛತೆ, 13 ಲಕ್ಷ ಗಿಡ ನೆಡಲಾಗಿದೆ. 800 ಮೆಟ್ರಿಕ್​ ಟನ್​ ಪ್ಲಾಸ್ಟಿಕ್​ ತ್ಯಾಜ್ಯ ತೆರವು ಮಾಡಲಾಗಿದೆ. ಈ ಅಕ್ಟೋಬರ್​ನಲ್ಲಿ ಮಹಿಳಾ ಸಬಲೀಕರಣ ಹಾಗೂ ರಕ್ಷಣೆ, ನವೆಂಬರ್​ನಲ್ಲಿ ಯುವಸಮುದಾಯಕ್ಕೆ ಕೌಶಲ ತರಬೇತಿ ನೀಡಲಾಗುವುದು. ಡಿಸೆಂಬರ್​ನಲ್ಲಿ ಸ್ಥಳೀಯ ಚುನಾವಣೆ ನಡೆಯಲಿದ್ದು ಸಂಘಟನೆಯ ಸದಸ್ಯರನ್ನೇ ಚುನಾವಣೆಗೆ ನಿಲ್ಲಿಸಲಾಗುವುದು. ಬಳಿಕ ನಡೆಯುವ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗೂ ಸಹ ಸ್ಪರ್ಧೆ ಮಾಡಲಾಗುವುದು ಎಂದು ಅಣ್ಣಾಮಲೈ ತಿಳಿಸಿದರು.

ಯಾವುದೇ ದೇಶ ಬಲಿಷ್ಠವಾಗಬೇಕಾದರೆ ಅದು ರಾಜಕೀಯವಾಗಿಯೂ ಬಲಿಷ್ಠವಾಗಿರಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 5 ವರ್ಷಕ್ಕೊಮ್ಮೆ ಚುನಾವಣೆ ನಡೆದು ಸರ್ಕಾರ ಬದಲಾವಣೆಗೆ ಅವಕಾಶವಿರುತ್ತದೆ. ಅಮೆರಿಕವು ಕಳೆದ 10 ವರ್ಷದಲ್ಲಿ 7 ಅಧ್ಯಕ್ಷರನ್ನು ಕಂಡಿದೆ. ಚೀನಾದಂತೆ ಏಕಪಕ್ಷ ಆಡಳಿತ ನಡೆಸುವುದು ಸಾಧ್ಯವಾಗುತ್ತಿಲ್ಲ. ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದರೂ ಅನೇಕ ತೊಡಕುಗಳ ನಡುವೆಯೂ ಕಳೆದ 11 ವರ್ಷದಿಂದ ದೇಶದ ಜಿಡಿಪಿಯು ಗಮನಾರ್ಹವಾಗಿ ಬೆಳವಣಿಗೆ ಹೊಂದಿದೆ.
ಕೆ.ಅಣ್ಣಾಮಲೈ. 'ವೀ ದ ಲೀಡರ್ಸ್​' ಸಂಸ್ಥಾಪಕ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net