ಶಾಲಾ ಮಕ್ಕಳಿಗೂ ಪಠ್ಯವಾಗಲಿ ಚುಟುಕು ಸಾಹಿತ್ಯ

ಉಡುಪಿಯ ಅಂಬಲಪಾಡಿಯಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಆಯೋಜಿಸಿದ್ದ ಶಿಕ್ಷಕ ಸಾಹಿತಿಗಳ ಸಮ್ಮೇಳನವನ್ನು ಡಾ. ನೀ.ಬಿ. ವಿಜಯ ಬಲ್ಲಾಳ ಉದ್ಘಾಟಿಸಿದರು. ಆರ್.ಎಂ. ಕುಬೇರಪ್ಪ, ಪ್ರೊ. ಜಿ.ಯು. ನಾಯಕ್, ಡಾ. ಜಿ.ಎ. ಹೆಗಡೆ, ಕೃಷ್ಣಮೂರ್ತಿ ಕುಲಕರ್ಣಿ, ಎಚ್.ಸೋಮಶೇಖರ್ ಶೆಟ್ಟಿ ಇದ್ದರು.
ಉಡುಪಿಯ ಅಂಬಲಪಾಡಿಯಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಆಯೋಜಿಸಿದ್ದ ಶಿಕ್ಷಕ ಸಾಹಿತಿಗಳ ಸಮ್ಮೇಳನವನ್ನು ಡಾ. ನೀ.ಬಿ. ವಿಜಯ ಬಲ್ಲಾಳ ಉದ್ಘಾಟಿಸಿದರು. ಆರ್.ಎಂ. ಕುಬೇರಪ್ಪ, ಪ್ರೊ. ಜಿ.ಯು. ನಾಯಕ್, ಡಾ. ಜಿ.ಎ. ಹೆಗಡೆ, ಕೃಷ್ಣಮೂರ್ತಿ ಕುಲಕರ್ಣಿ, ಎಚ್.ಸೋಮಶೇಖರ್ ಶೆಟ್ಟಿ ಇದ್ದರು.
Published on

* ಧರ್ಮದರ್ಶಿ ಡಾ. ನೀ.ಬಿ. ವಿಜಯ ಬಲ್ಲಾಳ‌ ಆಶಯ

* ಕಚುಸಾಪ ಶಿಕ್ಷಕ ಸಾಹಿತಿಗಳ ರಾಜ್ಯಮಟ್ಟದ ಸಮ್ಮೇಳನ

ಉಡುಪಿ: ಕನ್ನಡ ಸಾಹಿತ್ಯ ಲೋಕಕ್ಕೆ ಚುಟುಕು ಸಾಹಿತ್ಯವೂ ಅತ್ಯಮೂಲ್ಯ ಕೊಡುಗೆ ನೀಡಿದೆ. 'ಚುಟುಕು ಬ್ರಹ್ಮ' ಖ್ಯಾತಿಯ ಕವಿ ದಿನಕರ ದೇಸಾಯಿ ಅವರ ಚುಟುಕು ಸಾಹಿತ್ಯ ವಿಶೇಷತೆ ಹೊಂದಿದೆ. ಚುಟುಕು ಸಾಹಿತ್ಯವನ್ನು ಗ್ರಾಮೀಣ ಮಕ್ಕಳಿಗೂ ತಿಳಿಯಪಡಿಸುವ ಅಗತ್ಯತೆಯಿದೆ. ಆ ನಿಟ್ಟಿನಲ್ಲಿ ಗ್ರಾಮೀಣ ಶಾಲೆಗಳ‌ ಮೂಲಕ ಚುಟುಕು ಸಾಹಿತ್ಯದ ವಿಶೇಷತೆಯನ್ನು ಪಠ್ಯದ ಮೂಲಕ ತಿಳಿಯಪಡಿಸುವ ಕಾರ್ಯವನ್ನು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಮಾಡಲಿ ಎಂದು ಅಂಬಲಪಾಡಿಯ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನೀ.ಬಿ. ವಿಜಯ ಬಲ್ಲಾಳ‌ ಆಶಿಸಿದರು.
ಉಡುಪಿ ಅಂಬಲಪಾಡಿ ದೇವಸ್ಥಾನದ ಭವಾನಿ ಸಭಾಂಗಣದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ (ಕಚುಸಾಪ) ವತಿಯಿಂದ ಭಾನುವಾರ ಆಯೋಜಿಸಿದ್ದ ಶಿಕ್ಷಕ ಸಾಹಿತಿಗಳ ರಾಜ್ಯಮಟ್ಟದ ಒಂಬತ್ತನೇ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಜಿಲ್ಲಾಧ್ಯಕ್ಷ ಪ್ರೊ.ಜಿ.ಯು. ನಾಯಕ್ ಮಾತನಾಡಿದರು. ಹಿರಿಯ ಶಿಕ್ಷಣ ತಜ್ಞ ಡಾ. ಆರ್.ಎಂ. ಕುಬೇರಪ್ಪ ಸರ್ವಾಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಸರ್ವಾಧ್ಯಕ್ಷ ಡಾ. ಜಿ.ಎ. ಹೆಗಡೆ ಕನ್ನಡ ಬಾವುಟ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.
ವಾಣಿಶ್ರೀ ಮತ್ತು ತಂಡದವರು ನಾಡಗೀತೆ ಹಾಡಿದರು. ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ಜಿಲ್ಲಾ ಕಾರ್ಯದರ್ಶಿ ಎಚ್.ಸೋಮಶೇಖರ್ ಶೆಟ್ಟಿ ಸ್ವಾಗತಿಸಿದರು. ರಾಜು ಎನ್.  ಆಚಾರ್ಯ ವಂದಿಸಿದರು. 

'ಗುರುಭ್ಯೋ ನಮಃ' ಪ್ರಶಸ್ತಿ ಪ್ರದಾನ

ರಾಷ್ಟ್ರೀಯ ಪ್ರಶಸ್ತಿ ವಿಜೇತ ವಿ.ಶೇಖರ್ ಶೆಟ್ಟಿ, ಬೇಲಾಡಿ ವಿಠ್ಠಲ್ ಶೆಟ್ಟಿ, ಅಶೋಕ ಕುಮಾರ್ ಶೆಟ್ಟಿ, ನಾಗಭೂಷಣ ಜೋಶಿ, ರಾಧಾಕೃಷ್ಣ ಉಪಾಧ್ಯಾಯ, ಸುರೇಶ್ ಮರಕಲ, ಮಹಮ್ಮದ ರಫೀಕ್, ನರೇಶ ಕುಮಾರ ಎಂ.ಜಿ., ಶಶಿಕಲಾ ಕುಕನೂರು, ರಾಜ್ಯ ಪ್ರಶಸ್ತಿ ಗಳಿಸಿದ ಶಶಿಕಲಾ ಶೇರೆಗಾರ, ನರೇಂದ್ರ ಕುಮಾರ್. ವಸಂತ್ ನಾಯಕ್, ಸೂರೀ ಭಟ್ಟ ಕುಮಟಾ, ಅಹಲ್ಯಾ ರಮಾನಂದ, ಶ್ರೀಕಾಂತ್ ಕೆ.ವಿ.,  ರಾಜಾರಾಮ್ ಐತಾಳ, ಕೃಷ್ಣಾ ಮೊಯ್ಲಿ, ಜಿ.ಯು. ನಾಯಕ್, ದಿನೇಶ್ ಶೆಟ್ಟಿಗಾರ ಅವರಿಗೆ 'ಗುರುಭ್ಯೋ ನಮಃ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಳಿಕ ನಡೆದ ವಿಚಾರ ಗೋಷ್ಠಿಯಲ್ಲಿ ನರೇಂದ್ರ ಕುಮಾರ್ ಕೋಟ, ಶಶಿಕಲಾ ಕುಕನೂರ ಉಪನ್ಯಾಸ ನೀಡಿದರು. ಜಿ.ಯು. ನಾಯಕ‌ ಅಧ್ಯಕ್ಷತೆ ವಹಿಸಿದ್ದರು. ಪ್ರೇಮಾ ಬಿರಾದಾರ ನಿರೂಪಿಸಿದರು.

ತ್ರಿಭಾಷಾ ಶಿಕ್ಷಣ ನೀತಿ ಜಾರಿಗೆ ಆಗ್ರಹ

ರಾಜ್ಯ ಸರ್ಕಾರ ಕನ್ನಡ ಪ್ರಾಥಮಿಕ ಶಾಲೆಗಳಿಗೆ ಕಾಯಕಲ್ಪ ನೀಡಲು ಹಾಗೂ ತ್ರಿಭಾಷಾ ಶಿಕ್ಷಣ ನೀತಿ ಜಾರಿಗೆ ಸಮ್ಮೇಳನ ಒತ್ತಾಯಿಸಿತು.  ಕೃಷ್ಣಮೂರ್ತಿ ಕುಲಕರ್ಣಿ ನಿರ್ಣಯ ಮಂಡಿಸಿದರು. ಸಭೆ ಸರ್ವಾನುಮತದಿಂದ ಅಂಗೀಕರಿಸಿತು. ಕಾಸರಗೋಡು ಗಡಿನಾಡ ಕನ್ನಡತಿ ಡಾ.ವಾಣಿಶ್ರೀ ತಂಡದಿಂದ ನೃತ್ಯ ಸಂಗೀತ ವೈಭವ ಜರುಗಿತು. ಡಾ.ಕುಬೇರಪ್ಪ ಸಮಾರೋಪ ಭಾಷಣ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net