ಹನುಮಗಿರಿ ಪ್ರವೇಶಿಸಿದ ಶ್ರೀರಾಮ-ಹನುಮ ಜ್ಯೋತಿ ರಥಯಾತ್ರೆ

 ಶ್ರೀರಾಮ-ಹನುಮ ಜ್ಯೋತಿ ರಥಯಾತ್ರೆಯನ್ನು ಹನುಮಗಿರಿ ಪ್ರವೇಶ ದ್ವಾರದಲ್ಲಿ ಸ್ವಾಗತಿಸಿ ಬಳಿಕ ಅವಳಿ ಜ್ಯೋತಿಯನ್ನು ಮೆರವಣಿಗೆಯ ಮೂಲಕ ಪಂಚಮುಖಿ ಆಂಜನೇಯ ಕ್ಷೇತ್ರಕ್ಕೆ ಕೊಂಡೊಯ್ಯಲಾಯಿತು.
ಶ್ರೀರಾಮ-ಹನುಮ ಜ್ಯೋತಿ ರಥಯಾತ್ರೆಯನ್ನು ಹನುಮಗಿರಿ ಪ್ರವೇಶ ದ್ವಾರದಲ್ಲಿ ಸ್ವಾಗತಿಸಿ ಬಳಿಕ ಅವಳಿ ಜ್ಯೋತಿಯನ್ನು ಮೆರವಣಿಗೆಯ ಮೂಲಕ ಪಂಚಮುಖಿ ಆಂಜನೇಯ ಕ್ಷೇತ್ರಕ್ಕೆ ಕೊಂಡೊಯ್ಯಲಾಯಿತು.
Published on
ಪುತ್ತೂರು ಗ್ರಾಮಾಂತರ: ಪುತ್ತೂರು, ಸುಳ್ಯ, ಕಡಬ ತಾಲೂಕು ಮತ್ತು ಕಾಸರಗೋಡು ಜಿಲ್ಲೆಯ 60 ಗ್ರಾಮಗಳಲ್ಲಿ ಸಂಚರಿಸಿ ಈಶ್ವರಮಂಗಲದ ಪಂಚಲಿಂಗೇಶ್ವರ ದೇವಳಕ್ಕೆ ಬಂದ ಶ್ರೀರಾಮ-ಹನುಮ ಜ್ಯೋತಿ ರಥಯಾತ್ರೆಯು ಗುರುವಾರ ಸಂಜೆ ಪಂಚಲಿಂಗೇಶ್ವರ ದೇವಳದಿಂದ ಹನುಮಗಿರಿ ಕ್ಷೇತ್ರಕ್ಕೆ ಮೆರವಣಿಗೆಯ ಮೂಲಕ ಪ್ರವೇಶಿಸಿತು. ಹನುಮಗಿರಿ ದ್ವಾರದ ಬಳಿ ರಥಯಾತ್ರೆಗೆ ಅದ್ದೂರಿ ಸ್ವಾಗತ ನೀಡಲಾಯಿತು.
ಪಂಚಲಿಂಗೇಶ್ವರ ದೇವಳದಿಂದ ಹನುಮಗಿರಿ ತನಕ ನಡೆದ ಶ್ರೀರಾಮ-ಹನುಮ ರಥಯಾತ್ರೆಯು ಚೆಂಡೆ ವಾದನ, ಸಿಂಗಾರಿ ಮೇಳ, ಶಂಖ-ಜಾಗಟೆ, ಕುಣಿತ ಭಜನೆ, ಬೆಳ್ಗೊಡೆಗಳ ವೈಭವದೊಂದಿಗೆ ಆಕರ್ಷಣೀಯವಾಗಿ ನಡೆಯಿತು. ಮಾತೆಯರು ಪೂರ್ಣಕುಂಭ ಸ್ವಾಗತ ನೀಡಿದರು. ಹನುಮಗಿರಿ ಪ್ರವೇಶ ದ್ವಾರದ ಬಳಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ರಥಯಾತ್ರೆಯನ್ನು ಸ್ವಾಗತಿಸಿದರು. ಬಳಿಕ ಮೆರವಣಿಗೆಯ ಮೂಲಕ ಅವಳಿ ಜ್ಯೋತಿಯನ್ನು ಪಂಚಮುಖಿ ಆಂಜನೇಯ ಕ್ಷೇತ್ರಕ್ಕೆ ಕೊಂಡೊಯ್ಯಲಾಯಿತು. ರಾಘವೇಶ್ವರ ಭಾರತಿ ಸ್ವಾಮೀಜಿ ಪಂಚಮುಖಿ ಕ್ಷೇತ್ರದಲ್ಲಿ ಅವಳಿ ಜ್ಯೋತಿಯನ್ನು ಬೆಳಗಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲು, ರಥಯಾತ್ರೆ ಸಮಿತಿ ಸಂಚಾಲಕ ಮುರಳೀಕೃಷ್ಣ ಹಸಂತಡ್ಕ, ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ಸಂಜೀವ ಮಠಂದೂರು, ಸೀತಾರಾಮ ರೈ ಕೆದಂಬಾಡಿಗುತ್ತು, ಸಾಜ ರಾಧಾಕೃಷ್ಣ ಆಳ್ವ, ರವಿಕಿರಣ್ ಶೆಟ್ಟಿ ಬೆದ್ರಾಡಿ, ಶಶಿಕುಮಾರ್ ರೈ ಬಾಲ್ಯೊಟ್ಟು, ಬೂಡಿಯಾರ್ ರಾಧಾಕೃಷ್ಣ ರೈ, ಪ್ರಧಾನ ಕಾರ್ಯದರ್ಶಿಗಳಾದ ಆರ್.ಸಿ.ನಾರಾಯಣ ರೆಂಜ, ನಹುಷಾ ಪಳನೀರು, ಕ್ಷೇತ್ರದ ಧರ್ಮದರ್ಶಿಗಳಾದ ಶಿವರಾಮ ಪಿ.ಈಶ್ವರಮಂಗಲ ಮತ್ತು ಶಿವರಾಮ ಶರ್ಮ ಕತ್ರಿಬೈಲು, ನಾರಾಯಣಿ ಅಮ್ಮ, ಅನುಪಮಾ, ಹರಿಪ್ರಸಾದ್ ಪೆರಿಯಾಪು, ಅರವಿಂದ್ ದರ್ಬೆ, ಬಾಲಸುಬ್ರಹ್ಮಣ್ಯ ಸರ್ಪಮಲೆ, ಈಶ್ವರಿ ಬೇರ‌್ಕಡಪು, ನಾಗಪ್ಪ ಗೌಡ ಬೊಮ್ಮೆಟಿ, ಕಿರಣ್ ಬಲ್ನಾಡು ಮತ್ತಿತರರು ಉಪಸ್ಥಿತರಿದ್ದರು.

60 ಗ್ರಾಮಗಳಲ್ಲಿ ಸಂಚಾರ

60 ಗ್ರಾಮಗಳಲ್ಲಿ ಸಂಚರಿಸಿದ ಅವಳಿ ಜ್ಯೋತಿ ರಥಯಾತ್ರೆ ಹನುಮಗಿರಿ ತಲುಪಿದ ಬಳಿಕ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಅವಳಿ ಜ್ಯೋತಿಯನ್ನು ಪ್ರಜ್ವಲಿಸಲಾಯಿತು. ಈ ಜ್ಯೋತಿ ಬ್ರಹ್ಮಕಲಶೋತ್ಸವಕ್ಕೆ ವಿಶೇಷ ಬೆಳಗು ನೀಡಿದೆ. ಹನುಮಗಿರಿ ಬ್ರಹ್ಮಕಲಶೋತ್ಸವದ ಅಂಗವಾಗಿ ರಾಮ ಜನ್ಮಭೂಮಿಯಾದ ಅಯೋಧ್ಯೆಯ ರಾಮ ಮಂದಿರದ ಗರ್ಭಗುಡಿಯಿಂದ ಸ್ವೀಕರಿಸಿ ವಿಶೇಷ ಬಸ್ಸಿನಲ್ಲಿ ತಂದು, ರಾಜ್ಯದ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯನ ಜನ್ಮಸ್ಥಾನ ಜ್ಯೋತಿಯ ಜತೆ ಸೇರಿಸಲಾಯಿತು. ಅಲ್ಲಿಂದ ಹೊರಟ ಶ್ರೀರಾಮ ಜ್ಯೋತಿಯು, ಅಂಜನಾದ್ರಿಯ ಆಂಜನೇಯ ಜ್ಯೋತಿಯ ಜತೆ ಸೇರಿಸಿ, ಅಲಂಕೃತ ರಥದಲ್ಲಿರಿಸಿ ಗಂಗಾಜಲ, ಅಯೋಧ್ಯೆಯ ಮೃತ್ತಿಕೆ, ಋಷ್ಯಮೂಕ ಪರ್ವತದ ಮೃತ್ತಿಕೆಯೊಂದಿಗೆ ಶ್ರೀರಾಮ-ಹನುಮ ರಥಯಾತ್ರೆ ಕ್ಷೇತ್ರ ತಲುಪಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net