ಶ್ರೀಕೃಷ್ಣ ಪ್ರೀತ್ಯರ್ಥ ಬಾಳೆ ಮುಹೂರ್ತ

ಉಡುಪಿಯ ಸೋದೆ ವಾದಿರಾಜ ಮಠದ ತೋಟದಲ್ಲಿ ವಿದ್ಯಾವಲ್ಲಭ ಶ್ರೀಗಳೊಂದಿಗೆ ಎಚ್​.ಡಿ. ಕುಮಾರಸ್ವಾಮಿ ಅವರು ಬಾಳೆಗಿಡ ನೆಡುವ ಮೂಲಕ ಬಾಳೆ ಮುಹೂರ್ತಕ್ಕೆ ಚಾಲನೆ ನೀಡಿದರು. ಯಶ್​ಪಾಲ್​ ಸುವರ್ಣ, ಪಾಡಿಗಾರು ಶ್ರೀನಿವಾಸ ತಂತ್ರಿ ಇತರರಿದ್ದರು.
ಉಡುಪಿಯ ಸೋದೆ ವಾದಿರಾಜ ಮಠದ ತೋಟದಲ್ಲಿ ವಿದ್ಯಾವಲ್ಲಭ ಶ್ರೀಗಳೊಂದಿಗೆ ಎಚ್​.ಡಿ. ಕುಮಾರಸ್ವಾಮಿ ಅವರು ಬಾಳೆಗಿಡ ನೆಡುವ ಮೂಲಕ ಬಾಳೆ ಮುಹೂರ್ತಕ್ಕೆ ಚಾಲನೆ ನೀಡಿದರು. ಯಶ್​ಪಾಲ್​ ಸುವರ್ಣ, ಪಾಡಿಗಾರು ಶ್ರೀನಿವಾಸ ತಂತ್ರಿ ಇತರರಿದ್ದರು.
Published on: 

* ಭಾವಿ ಪರ್ಯಾಯ ಸೋದೆ ವಾದಿರಾಜ ಮಠದಿಂದ ಆಚರಣೆ

* ವಿಶ್ವವಲ್ಲಭ ಶ್ರೀಗಳೊಂದಿಗೆ ಬಾಳೆಗಿಡ ನೆಟ್ಟ ಕೇಂದ್ರ ಸಚಿವ ಕುಮಾರಸ್ವಾಮಿ

ಉಡುಪಿ: ಶ್ರೀಮಧ್ವಾಚಾರ್ಯರಿಂದ ಉಡುಪಿಯಲ್ಲಿ ಪ್ರತಿಷ್ಠಾಪಿತ ಶ್ರೀಕೃಷ್ಣನ ಎರಡು ವರ್ಷದ ಪೂಜಾ ಕೈಂಕರ್ಯದ ಸರದಿಯಲ್ಲಿರುವ ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥ ಶ್ರೀಪಾದರು ತಮ್ಮ ಭಾವೀ ಪರ್ಯಾಯದ ಪೂರ್ವಭಾವಿಯಾಗಿ ಮಠದ ಸಂಪ್ರದಾಯದಂತೆ ಸಕಲ ಶ್ರದ್ಧಾ-ಭಕ್ತಿಯಿಂದ ಭಾನುವಾರ (ನ.29) ಬೆಳಗ್ಗೆ ಬಾಳೆ ಮುಹೂರ್ತ ನೆರವೇರಿಸಿದರು.

ವಿಶ್ವವಲ್ಲಭ ಶ್ರೀಗಳು ಸೋದೆ ವಾದಿರಾಜ ಮಠದ 36ನೇ ಯತಿಯಾಗಿದ್ದು, ಎರಡನೇ ಬಾರಿ ಪರ್ಯಾಯ ಸೇವೆ ನಡೆಸಲಿದ್ದು, 2028ರ ಜ.18ರಂದು ಪರ್ಯಾಯ ಪೀಠಾರೋಹಣ ಮಾಡಲಿದ್ದಾರೆ. ತನ್ನಿಮಿತ್ತ ಪರ್ಯಾಯ ಪೂರ್ವಭಾವಿ ನಾಲ್ಕು ಮುಹೂರ್ತಗಳಲ್ಲಿ ಪ್ರಥಮವಾದ ಬಾಳೆ ಮುಹೂರ್ತವನ್ನು ಸಕಲ ಸದ್ಭಕ್ತರ ನಡುವೆ ಆಚರಿಸಿದರು.

ಸಚಿವ ಎಚ್​ಡಿಕೆ ಭಾಗಿ

ಸೋದೆ ಮಠದ ಬಾಳೆ ಮುಹೂರ್ತದಲ್ಲಿ ಕೇಂದ್ರ ಬೃಹತ್​ ಕೈಗಾರಿಕಾ ಹಾಗೂ ಉಕ್ಕು ಸಚಿವ ಎಚ್​.ಡಿ. ಕುಮಾರಸ್ವಾಮಿ ಪಾಲ್ಗೊಂಡು, ಮಠದ ತೋಟದಲ್ಲಿ ಶ್ರೀಗಳೊಂದಿಗೆ ಬಾಳೆಗಿಡ ನೆಟ್ಟು ಮುಹೂರ್ತಕ್ಕೆ ವಿಶೇಷ ಮೆರಗು ನೀಡಿದರು.

ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ, ಮಾಜಿ ಸಚಿವ ವಿನಯಕುಮಾರ ಸೊರಕೆ, ಮಾಜಿ ಶಾಸಕ ಕೆ.ರಘುಪತಿ ಭಟ್​, ಬಿಜೆಪಿ ನಾಯಕ ಕೆ.ಉದಯಕುಮಾರ ಶೆಟ್ಟಿ, ಸೋದೆ ಮಠದ ದಿವಾನ ಪಾಡಿಗಾರು ಶ್ರೀನಿವಾಸ ತಂತ್ರಿ, ವ್ಯವಸ್ಥಾಪಕ ಮಧ್ವೇಶ ತಂತ್ರಿ, ಪೂರ್ವಾಶ್ರಮದ ತಾಯಿ ವೇದಾವತಿ, ವಾಸುದೇವ ರಾವ್​, ಪ್ರದೀಪಕುಮಾರ ಕಲ್ಕೂರ, ಬೈಕಾಡಿ ಸುಪ್ರಸಾದ ಶೆಟ್ಟಿ, ಪ್ರೊ. ಎಂ.ಬಿ.ಪುರಾಣಿಕ ಸೇರಿದಂತೆ ಮಠದ ಶಿಷ್ಯರು, ಭಕ್ತರು ಉಪಸ್ಥಿತರಿದ್ದರು.

ರಥಬೀದಿಯಲ್ಲಿ ಶೋಭಾ ಮೆರವಣಿಗೆ

ಸೋದೆ ಮಠದ ಪಟ್ಟದ ದೇವರಾದ ಭೂ ವರಾಹ, ಹಯಗ್ರೀವ, ಭೂತ ರಾಜರಿಗೆ ಬೆಳಗ್ಗೆ 6:30ಕ್ಕೆ ವಿಶ್ವವಲ್ಲಭ ಶ್ರೀಗಳು ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು. ಬಳಿಕ ಸೋದೆ ಮಠದಿಂದ ಮಂಗಳ ವಾದ್ಯದೊಂದಿಗೆ ಕಬ್ಬು, ತುಳಸೀ ಸಹಿತ ಬಾಳಗಿಡದೊಂದಿಗೆ ಮೆರವಣಿಗೆಯಲ್ಲಿ ರಥಬೀದಿಯ ಪ್ರದಣೆ ಹಾಕಲಾಯಿತು. ಚಂದ್ರ ಮೌಳೀಶ್ವರ, ಅನಂತೇಶ್ವರ ದೇಗುಲದಲ್ಲಿ ಶ್ರೀಗಳು ಪ್ರಾರ್ಥನೆ ಸಲ್ಲಿಸದರು. ಬಳಿಕ ಶ್ರೀಕೃಷ್ಣ, ಮುಖ್ಯಪ್ರಾಣ, ಗರುಡ, ಸಿಂಹಾಸನದ ವಿಠ್ಠಲ ದೇವರು, ಭೋಜನ ಶಾಲೆಯ ಮುಖ್ಯಪ್ರಾಣ, ಸುಬ್ರಹ್ಮಣ್ಯ, ನವಗ್ರಹ, ವೃಂದಾವನ, ಭೂತರಾಜ ಸಹಿತ ಗುರುಪರಂಪರೆ, ಅಶ್ವತ್ಥ, ನಾಗ ದೇವರು, ಗೋಶಾಲೆಗೆ ತೆರಳಿ ನಮನ ಸಹಿತ ಪ್ರಾರ್ಥನೆ ಸಲ್ಲಿಸಿದರು. ಬಳಿಕ ರಥಬೀದಿಯ ಮೂಲಕ ಬೃಹತ್​ ಮೆರವಣಿಗೆಯಲ್ಲಿ ಸೋದೆ ಮಠದ ತೋಟಕ್ಕೆ ತೆರಳಿ ಬೆಳಗ್ಗೆ 7:45ಕ್ಕೆ ವೃಶ್ಚಿಕ ಲಗ್ನ ಮುಹೂರ್ತದಲ್ಲಿ ಬಾಳೆಗಿಡ ನೆಟ್ಟರು. ಈ ಸಂದರ್ಭದಲ್ಲಿ ಸಂಪ್ರದಾಯದಂತೆ ನವಗ್ರಹ ದಾನ, ಅಷ್ಟಮಠಗಳ ಸಹಿತ ಶಾಖಾ ಮಠಗಳ ಪ್ರತಿನಿಧಿಗಳಿಗೆ ವೀಳ್ಯ ಸಹಿತ ನಾರಿಕೇಳ ಫಲ ಹಾಗೂ ಧನ ನೀಡಿ ಗೌರವ ಸಲ್ಲಿಸಿದರು. ಅರ್ಚಕ ಗಿರೀಶ ಉಪಾಧ್ಯಾಯ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.

ಸೋದೆ ಮಠದಿಂದ ಕಬ್ಬು, ತುಳಸಿ ಸಹಿತವಾಗಿ ಬಾಳೆಗಿಡವನ್ನು ಉಡುಪಿ ರಥಬೀದಿಯಲ್ಲಿ ಮೆರವಣಿಗೆಯ ಮೂಲಕ ಕೊಂಡೊಯ್ದು ನೆಡಲಾಯಿತು.
ಸೋದೆ ಮಠದಿಂದ ಕಬ್ಬು, ತುಳಸಿ ಸಹಿತವಾಗಿ ಬಾಳೆಗಿಡವನ್ನು ಉಡುಪಿ ರಥಬೀದಿಯಲ್ಲಿ ಮೆರವಣಿಗೆಯ ಮೂಲಕ ಕೊಂಡೊಯ್ದು ನೆಡಲಾಯಿತು.
ಉಡುಪಿ ಪರ್ಯಾಯದ ಪೂರ್ವಭಾವಿಯಾಗಿ ಇಲ್ಲಿನ ಯತಿಗಳು ಕೈಗೊಳ್ಳುವ ಬಾಳೆ ಮುಹೂರ್ತ ಸಂಪ್ರದಾಯವು ಕೃಷಿ ಪ್ರಧಾನ್ಯತೆಯ ವಿಶಿಷ್ಟ ಪರಂಪರೆಯ ಪ್ರತೀಕವಾಗಿದೆ. ಇದೊಂದ ಭಕ್ತಿ, ಶ್ರದ್ಧೆಯ ಪವಿತ್ರ ಕಾರ್ಯಕ್ರಮ. ಭಕ್ತರ ಮೂಲಕ ಬಾಳೆ ನಾಟಿ, ಉತ್ಪನ್ನಗಳು ಶ್ರೀಕೃಷ್ಣನಿಗೆ ಸಮರ್ಪಿಸುವ ವಿಶಿಷ್ಟ ಕಾರ್ಯಕ್ರಮವಿದು. ನನಗೆ ಈ ಆಚರಣೆ ಇರುವುದು ತಿಳಿದಿರಲಿಲ್ಲ. ಇಂದು ಸಾಕ್ಷಾತ್ಕಾರವಾಗಿದ್ದು ರೈತರು, ಸಮಾಜಕ್ಕೆ ಒಳಿತಾಗಲಿ ಎಂದು ಹಾರೈಸುತ್ತೇನೆ.
ಎಚ್​.ಡಿ. ಕುಮಾರಸ್ವಾಮಿ. ಕೇಂದ್ರ ಸಚಿವ.