ರಥಬೀದಿಯಲ್ಲಿ 'ಭಕ್ತಪ್ರಿಯ'ನ ಲೀಲೋತ್ಸವ..!

ಉಡುಪಿ ರಥಬೀದಿಯಲ್ಲಿ ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ)ಕ್ಕೆ ವೇದವರ್ಧನ ಶ್ರೀ ಚಾಲನೆ ನೀಡಿದರು. ಕೃಷ್ಣಾಪುರ ಶ್ರೀ, ಡಾ. ಉದಯಕುಮಾರ್​ ಸರಳತ್ತಾಯ ಇತರರಿದ್ದರು. ವಿಟ್ಲಪಿಂಡಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರ ಸಮೂಹದತ್ತ ಪ್ರಸಾದದ ರೂಪವಾಗಿ ಚಕ್ಕುಲಿ, ಉಂಡೆ, ವಿವಿಧ ಹಣ್ಣು-ಹಂಪಲುಗಳನ್ನು ತೂರಿದ ವೇದವರ್ಧನ ಶ್ರೀ. (ಚಿತ್ರಗಳು: ಅರುಣಾಚಲ ಹೆಬ್ಬಾರ್​.)
ಉಡುಪಿ ರಥಬೀದಿಯಲ್ಲಿ ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ)ಕ್ಕೆ ವೇದವರ್ಧನ ಶ್ರೀ ಚಾಲನೆ ನೀಡಿದರು. ಕೃಷ್ಣಾಪುರ ಶ್ರೀ, ಡಾ. ಉದಯಕುಮಾರ್​ ಸರಳತ್ತಾಯ ಇತರರಿದ್ದರು. ವಿಟ್ಲಪಿಂಡಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರ ಸಮೂಹದತ್ತ ಪ್ರಸಾದದ ರೂಪವಾಗಿ ಚಕ್ಕುಲಿ, ಉಂಡೆ, ವಿವಿಧ ಹಣ್ಣು-ಹಂಪಲುಗಳನ್ನು ತೂರಿದ ವೇದವರ್ಧನ ಶ್ರೀ. (ಚಿತ್ರಗಳು: ಅರುಣಾಚಲ ಹೆಬ್ಬಾರ್​.)
Published on

* ಉಡುಪಿಯಲ್ಲಿ ವಿಟ್ಲಪಿಂಡಿ ಉತ್ಸವ, ಭಕ್ತರ ಕಲರವ

* ಸ್ವರ್ಣ ರಥದಲ್ಲಿ ಮೃಣ್ಮಯ ಮೂರ್ತಿ ಮೆರವಣಿಗೆ

ಉಡುಪಿ: ಕಡಗೋಲುಧಾರಿ ಉಡುಪಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ಶ್ರಾವಣ ಮಾಸದ ಶನಿವಾರ (ಸೆ.5)ಮಧ್ಯಾಹ್ನ ನಡೆದ 'ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ)'ವು ಸಹಸ್ರ ಸಂಖ್ಯೆಯ ಭಕ್ತರ ಹರ್ಷೋದ್ಗಾರದ ನಡುವೆ ಸಂಭ್ರಮದಿಂದ ನೆರವೇರಿತು.
ಶ್ರೀಕೃಷ್ಣ ಮಠದ ಮುಂಭಾಗದ ದ್ವಾರದಲ್ಲಿ ಶ್ರೀಕೃಷ್ಣನ ಮೃಣ್ಮಯ (ಮಣ್ಣಿನ) ಮೂರ್ತಿಯನ್ನು ಸ್ವರ್ಣ ರಥದಲ್ಲಿ ಪ್ರತಿಷ್ಠಾಪಿಸುವ ಮೂಲಕ ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ಬಾಲಕೃಷ್ಣನ ಲೀಲೋತ್ಸವಕ್ಕೆ ಚಾಲನೆ ನೀಡಿದರು. ದೇವರಿಗೆ ವಿಶೇಷ ಮಹಾಮಂಗಳಾರತಿ ಬೆಳಗಿದ ಬಳಿಕ ವಿಟ್ಲಪಿಂಡಿ ಮೆರವಣಿಗೆ ಆರಂಭಗೊಂಡಿತು.
ಪುಷ್ಪರಥದ ಸಾಥ್​
ಶ್ರೀಕೃಷ್ಣನ ರಥದೊಂದಿಗೆ ಅನಂತೇಶ್ವರ ಹಾಗೂ ಚಂದ್ರಮೌಳೇಶ್ವರ ದೇವರ ಉತ್ಸವ ಮೂರ್ತಿಯಿರುವ ಪುಷ್ಪರಥ (ವಿಮಾನ ರಥ)ವೂ ಮೆರವಣಿಗೆಗೆ ಸಾಥ್​ ನೀಡಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಎರಡೂ ರಥವನ್ನು ಎಳೆಯುವ ಮೂಲಕ ಜಯಘೋಷ ಹಾಕಿದರು. ರಥಬೀದಿಯಲ್ಲಿ ಪ್ರದಣಾಕಾರವಾಗಿ ರಥವನ್ನು ಎಳೆಯಲಾಯಿತು. ಶ್ರೀಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಪಾದರು ಪಾಲ್ಗೊಂಡಿದ್ದರು. 
ಹುಲಿಕುಣಿತದ ಮೆರಗು
ಲೀಲೋತ್ಸವದಲ್ಲಿ ಅನೇಕ ಹುಲಿವೇಷಧಾರಿಗಳು ಪಾಲ್ಗೊಂಡು ಮೆರವಣಿಗೆಯ ಸೊಬಗು ಹೆಚ್ಚಿಸಿದರು. ಹುಲಿ ಕುಣಿತಕ್ಕಾಗಿ ರಥಬೀದಿಯ ವಿವಿಧೆಡೆ ಸಜ್ಜು ಮಾಡಿದ್ದ ವೇದಿಕೆಯಲ್ಲಿ ಕುಣಿತ ಮಾಡುವ ಮೂಲಕ ಜನಸ್ತೋಮವನ್ನು ರಂಜಸಿದರು. ಹುಲಿಕುಣಿತದ ವಾದ್ಯಗಳ ಸದ್ದು ನೋಡುಗರಿಗೂ ಕುಣಿಯುವಂತೆ ಮಾಡಿತ್ತು. ಬನ್ನಂಜೆಯ ವಿಸ್ಮಯ ತಂಡವು ತಮಿಳುನಾಡು ಸಿಎಂ ವಿಜಯ್​ ಗೆಟ್​ಅಪ್​ ಮೂಲಕ ಗಮನ ಸೆಳೆಯಿತು.

ಮೊಸರು ಕುಡಿಕೆ ಗಮ್ಮತ್ತು

ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದ ಮೊಸರು ಕುಡಿಕೆ ಒಡೆಯುವ ಸಂಪ್ರದಾಯದಲ್ಲಿ ಮಠದ ಗೋವಳರು (ಗೊಲ್ಲರು) ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು. ಬಿಳಿಯ ಕಚ್ಚೆ, ಮೈಗೆ ನೀಲಿ ಬಣ್ಣ, ತಲೆಗೆ ಬೈಹುಲ್ಲಿನ ಮುಂಡಾಸು ಕೈಯಲ್ಲಿ ಬಿದಿರಿನ ಬೆತ್ತ ಹಿಡಿದು, ಕೇಕೇ ಹಾಕುತ್ತ ಕುಂಕುಮ&ಅರಿಶಿಣದ ನೀರು, ಮೊಸರು ತುಂಬಿದ್ದ ಕುಡಿಕೆ ಒಡೆದರು. ರಥಬೀದಿಯ ಸುತ್ತ ಗುರ್ಜಿಯಲ್ಲಿ ಅಳವಡಿಸಿದ್ದ ಎಲ್ಲ ಮೊಸರು ಕುಡಿಕೆಗಳನ್ನು ಒಡೆದು ಲೀಲೋತ್ಸವದ ಮೆರವಣಿಗೆಯ ಸಂಭ್ರಮ ಹೆಚ್ಚಿಸಿದರು. ಜನರೆಲ್ಲರೂ ಲೀಲೋತ್ಸವದಲ್ಲಿ ಕಂಡುಬಂದ ವಿಶೇಷ ಸಂದರ್ಭಗಳನ್ನು ತಮ್ಮ ಮೊಬೈಲ್​ ಹಾಗೂ ಕ್ಯಾಮರಾದಲ್ಲಿ ಸೆರೆಹಿಡಿದರು.

ಕೃಷ್ಣನ ವಿಗ್ರಹ ವಿಸರ್ಜನೆ

ಲೀಲೋತ್ಸವದ ಮೆರವಣಿಗೆಯಲ್ಲಿ ವೇದವರ್ಧನ ಶ್ರೀಗಳು ಭಕ್ತರತ್ತ ಚಕ್ಕುಲಿ, ವಿವಿಧ ಬಗೆಯ ಉಂಡೆ ಹಾಗೂ ಹಣ್ಣು&ಹಂಪಲುಗಳನ್ನು ತೂರಿದರು. ಮೆರವಣಿಗೆಯ ಅಂತ್ಯದ ಬಳಿಕ ಕೃಷ್ಣನ ಮಣ್ಣಿನ ಮೂರ್ತಿಯನ್ನು ಬೆಳ್ಳಿಯ ಪಲ್ಲಕ್ಕಿಯಲ್ಲಿಟ್ಟು ಮಧ್ವ ಸರೋವರದತ್ತ ಕೊಂಡೊಯ್ಯಲಾಯಿತು. ಶೀರೂರು ವೇದವರ್ಧನ ಶ್ರೀಗಳು ಹಾಗೂ ಶಿಷ್ಯರು ಕೃಷ್ಣ ಪ್ರೀತ್ಯರ್ಥವಾಗಿ ಬಣ್ಣದ ಓಕುಳಿಯಾಟ ಆಡಿದರು. ಬಳಿಕ ದೋಣಿಯಲ್ಲಿ ಮೂರ್ತಿಯೊಂದಿಗೆ ತೆರಳಿದ ಶ್ರೀಗಳು ಸರೋವರದ ಮಧ್ಯಭಾಗದಲ್ಲಿ ವಿಸರ್ಜನೆ ಮಾಡಿದರು. ತದನಂತರ ನಿತ್ಯದ ಉತ್ಸವ ಮೂರ್ತಿಗೆ ಮಧ್ವ ಮಂಟಪದಲ್ಲಿ ತೊಟ್ಟಿಲು ಸೇವೆ, ಶಯನ ಸೇವೆ ಹಾಗೂ ಇನ್ನಿತರ ಪೂಜಾ ವಿಧಾನ ನೆರವೇರುವುದರೊಂದಿಗೆ ಲೀಲೋತ್ಸವ ಸಂಪನ್ನಗೊಂಡಿತು.    

ಗಮನ ಸೆಳೆದ ಮಲ್ಲಯುದ್ಧ

ಈ ಬಾರಿಯ ಲೀಲೋತ್ಸವದಲ್ಲಿ ಜಗಜಟ್ಟಿಗಳ ಮಲ್ಲಯುದ್ಧ ಪ್ರದರ್ಶನ ವಿಶೇಷ ಆಕರ್ಷಣೆಯಾಗಿತ್ತು. ಜಿಲ್ಲೆ ಹಾಗೂ ವಿವಿಧ ರಾಜ್ಯಗಳಲ್ಲಿ ಪದಕಗಳನ್ನು ಗೆದ್ದ ಮೈಸೂರು ಪ್ರಾಂತ್ಯದ 9 ಜನ ಮಲ್ಲಯುದ್ಧ ಪ್ರವೀಣರು ಪ್ರದರ್ಶನ ನೀಡಿದರು. ಮಲ್ಲಯುದ್ಧದ ಪ್ರಮುಖ ನಾಲ್ಕು ಶೈಲಿಗಳಾದ ಹನುಮಂತಿ ಶೈಲಿ, ಜಾಂಬವತಿ ಶೈಲಿ, ಜರಾಸಂಧಿ ಶೈಲಿ, ಭೀಮಸೇನಿ ಶೈಲಿಗಳನ್ನು ಪ್ರದರ್ಶಿಸಿದರು. ಮಥುರೆಯಲ್ಲಿ ಶ್ರೀಕೃಷ್ಣ-ಬಲರಾಮನನ್ನು ಸಂಹರಿಸಲು ಅಂದಿನ ಪ್ರಖ್ಯಾತ ಮಲ್ಲಯುದ್ಧ ಪ್ರವೀಣರಾಗಿದ್ದ ಚಾಣೂರ-ಮುಷ್ಠಿಕ ಎಂಬವರನ್ನು ಕಂಸನು ಕಳುಹಸಿದ್ದನು. ಆದರೆ, ಮಲ್ಲಯುದ್ಧದಲ್ಲಿ ನಿಪುಣನಾಗಿದ್ದ ಕೃಷ್ಣನು ಅವರಿಬ್ಬರನ್ನೂ ಸಂಹರಿಸಿ ತನ್ನ ಬೌದ್ಧಿಕ, ದೈಹಿಕ, ಮಾನಸಿಕ ಶಕ್ತಿಯನ್ನು ತೋರ್ಪಡಿಸಿದ್ದನು. ಹರಿವಂಶದಲ್ಲಿಯೂ ಸಹ ಶ್ರೀಕೃಷ್ಣನ ಮಲ್ಲಯುದ್ಧದ ಚತುರತೆಯ ಕುರಿತು ಉಲ್ಲೇಖವಿದೆ. ಮಲ್ಲಯುದ್ಧವೂ ಸಹ ಕೃಷ್ಣನ ಬಾಲಲೀಲೆಯೇ ಆಗಿದೆ.
"

ಜನಸಾಮಾನ್ಯರಿಗೆ ಅದರಲ್ಲೂ ಶ್ರೀಕೃಷ್ಣನ ಭಕ್ತರಿಗೆ ಜನ್ಮಾಷ್ಟಮಿಯ ನಿಮಿತ್ತ ನಡೆಯುವ ವಿಟ್ಲಪಿಂಡಿ ಉತ್ಸವ ಇಷ್ಟವಾಗಬೇಕೆಂಬ ಕಾರಣಕ್ಕೆ ಎಂದಿನಂತೆ ಹುಲಿವೇಷ ಕುಣಿತ ಸ್ಪರ್ಧೆ ಆಯೋಜಿಸಲಾಗಿದೆ. ಚಿನ್ನದ ರಥದಲ್ಲಿ ಕೃಷ್ಣನ ಮಣ್ಣಿ ಮೂರ್ತಿಯ ಮೆರವಣಿಗೆ ನಡೆಯವ ವೇಳೆ ಕೃಷ್ಣನಿಗೆ ಪ್ರಿಯವಾಗಿದ್ದ ಮಲ್ಲಯುದ್ಧವನ್ನು ಈ ಬಾರಿ ಆಯೋಜಿಸಲಾಗಿದೆ. ಮೈಸೂರು ಪ್ರಾಂತ್ಯದ ಜಟ್ಟಿಗಳನ್ನು ಕರೆಸಲಾಗಿದ್ದು, ಅವರಿಗೆ ಮಲ್ಲಯುದ್ಧ ಪ್ರದರ್ಶಿಸಲು ಶೀರೂರು ಮಠದ ಮುಂಭಾಗದಲ್ಲಿ ವಿಶೇಷ ಅಂಕಣ ಸಿದ್ಧಪಡಿಸಿದ್ದು, ಸಹಸ್ರ ಸಂಖ್ಯೆಯಲ್ಲಿ ಜನರು ಈ ಕಲೆಯನ್ನು ವೀಕ್ಷಿಸಿದ್ದಾರೆ.

"

ಅಧರ್ಮದ ಸಂಹಾರ ಹಾಗೂ ಧರ್ಮದ ಪುನರುತ್ಥಾನಕ್ಕಾಗಿಯೇ ಭಗವಂತನು ಶ್ರೀಕೃಷ್ಣನ ಅವತಾರ ತಾಳಿದ ಎಂಬ ನಂಬಿಕೆ ಇಂದಿಗೂ ಸ್ಥಿರವಾಗಿದೆ. ಜನ್ಮಾಷ್ಟಮಿ ಆಚರಿಸುವುದು ಕೇವಲ ಸಂಭ್ರಮಕ್ಕಾಗಿ ಅಲ್ಲ. ಆತನ ಸ್ಮರಣೆಯೊಂದಿಗೆ ಗೀತೆಯಲ್ಲಿ ತಿಳಿಸಿದ ಸಂದೇಶ ಅಳವಡಿಸಿಕೊಂಡು, ಅನುಸರಿಸುವ ಸಂಕಲ್ಪಕ್ಕಾಗಿ ಈ ಉತ್ಸವ ನಡೆಯುತ್ತಿದೆ. ಕೃಷ್ಣ ಮಠದಲ್ಲಿ ನಡೆಯುವ ಎಲ್ಲ ಧಾರ್ಮಿಕ, ಸಾಂಸತಿಕ ಆಚರಣೆಗಳು ಶ್ರೀಕೃಷ್ಣ-ಮುಖ್ಯಪ್ರಾಣರ ಸ್ಮರಣೆ, ಸಂದೇಶವನ್ನು ಭಕ್ತಜನರಿಗೆ ತಲುಪಿಸುವುದೇ ಆಗಿದೆ. ಅವುಗಳಲ್ಲಿ ವಿಟ್ಲಪಿಂಡಿ ಪ್ರಮುಖ ಆಚರಣೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net