

ಉಡುಪಿ: ಮಧುಮೇಹ ನಿಯಂತ್ರಣ ಜಾಗೃತಿ ಮಾಸದ ನಿಮಿತ್ತ ಮುನಿಯಾಲು ಆಯುರ್ವೇದ ಕಾಲೇಜ್ ಮತ್ತು ಆಸ್ಪತ್ರೆಯ ಶಲ್ಯತಂತ್ರ ಹಾಗೂ ಸ್ವಸ್ಥವೃತ್ತ ವಿಭಾಗದ ವತಿಯಿಂದ ಸೋಮವಾರ (ನ.23) ಆಯೋಜಿಸಿದ್ದ 'ಮಧುಮೇಹದ ಗಾಯಗಳ ನಿರ್ವಹಣೆಯ ವಿಶೇಷ ಆರೋಗ್ಯ ತಪಾಸಣಾ ಉಚಿತ ಶಿಬಿರ'ವನ್ನು ಸಂಸ್ಥೆಯ ಪ್ರಾಂಶುಪಾಲ ಡಾ. ಬಿ.ಸತ್ಯನಾರಾಯಣ ಉದ್ಘಾಟಿಸಿದರು.
ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಯೋಗೀಶ ಶೆಟ್ಟಿ, ಶಲ್ಯತಂತ್ರ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ. ಗುರುರಾಜ ಡಿ., ಪ್ರಾಧ್ಯಾಪಕ ಡಾ. ರಮೇಶ, ಸಹಪ್ರಾಧ್ಯಾಪಕ ಡಾ. ರಾಜಕಿರಣ ಹಾಗೂ ಸಹಾಯಕ ಪ್ರಾಧ್ಯಾಪಕಿ ಡಾ. ಹರ್ಷಿತಾ ಉಪಸ್ಥಿತರಿದ್ದರು.
ಮಣಿಪಾಲದ ಶಿವಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಮುನಿಯಾಲು ಆಯುರ್ವೇದ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನ.28ರ ವರೆಗೆ ಶಿಬಿರ ನಡೆಯಲಿದೆ. ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 4:30ರ ವರೆಗೆ ನಡೆಯಲಿದೆ.
ವಿಶೇಷ ಚಿಕಿತ್ಸೆ, ರಿಯಾಯಿತಿ
ಮಧುಮೇಹದಿಂದ ಉಂಟಾಗುವ ಹಾಗೂ ದೀರ್ಘಕಾಲದಿಂದ ಗುಣವಾಗದ ಗಾಯಗಳಿಗೆ ಆಯುರ್ವೇದದ ವಿಶೇಷ ಚಿಕಿತ್ಸೆ ಮತ್ತು ರಿಯಾಯಿತಿ ದರದಲ್ಲಿ ಔಷಧ ಒದಗಿಸಲಾಗುವುದು. ಶಿಬಿರದಲ್ಲಿ ವೈದ್ಯಕೀಯ ಉಚಿತ ಸಮಾಲೋಚನೆ, ಪಂಚಕರ್ಮ ಚಿಕಿತ್ಸೆ ಮತ್ತು ಪ್ರಯೋಗಾಲಯ ಪರೀಕ್ಷೆಗಳಲ್ಲಿ ಶೇ.50 ರಿಯಾಯಿತಿ, ಔಷಧಗಳ ಮೇಲೆ ಶೇ.10 ರಿಯಾಯಿತಿ, ಫಿಸಿಯೋಥೆರಪಿ ಹಾಗೂ ಅಕ್ಯುಪಂಕ್ಚರ್ ಮತ್ತು ಟಿಇಎನ್ಎಸ್ ಚಿಕಿತ್ಸೆಯಲ್ಲಿ ಶೇ.20 ರಿಯಾಯಿತಿ ನೀಡಲಾಗುವುದು. ಅಲ್ಲದೆ, ಉಚಿತವಾಗಿ ಆಹಾರ ಪದ್ಧತಿ, ಯೋಗ ಸಮಾಲೋಚನೆ ಹಾಗೂ ಒಳರೋಗಿ ಚಿಕಿತ್ಸೆಯಲ್ಲಿ ರಿಯಾಯಿತಿ ಸೌಲಭ್ಯವೂ ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 8123403233 (ರಿಸೆಪ್ಷನ್), ಟೋಲ್ ಫ್ರೀ ಸಂಖ್ಯೆ 1800 425 3178 ಸಂಪರ್ಕಿಬಹುದು ಎಂದು ಸಂಸ್ಥೆ ತಿಳಿಸಿದೆ.