

ಪ್ರಶಾಂತ ಭಾಗ್ವತ ಉಡುಪಿ
ನೆಮ್ಮದಿ ರಹಿತ, ಒತ್ತಡ ಸಹಿತ ಕಾರ್ಯವಿಧಾನ ಹಾಗೂ ಕುಟುಂಬಗಳಲ್ಲಿ ವಿರಸ, ಅಪನಂಬಿಕೆ, ದಾಂಪತ್ಯ ಕಲಹಗಳಿಂದ ವಿಶ್ವದಲ್ಲಿ ದಿನೇದಿನೇ ಖಿನ್ನತೆ ಅಥವಾ ಮಾನಸಿಕ ರೋಗಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ.
ಜನರ ಮಾನಸಿಕ ಸ್ವಾಸ್ಥ್ಯ ರಕ್ಷಣೆಗಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್ಒ)ಯು 1992ರ ಅ.10ರಂದು 'ವಿಶ್ವ ಮಾನಸಿಕ ಆರೋಗ್ಯ ದಿನ' ಆಚರಣೆ ಆರಂಭಿಸಿದೆ. ಈ ದಿನಾಚರಣೆ ಮೂಲಕ ಜಾಗತಿಕವಾಗಿ ಮಾನಸಿಕ ಆರೋಗ್ಯ ಶಿಕ್ಷಣ, ಜಾಗೃತಿ ಮತ್ತು ಸಾಮಾಜಿಕ ಕಳಂಕ ನಿವಾರಿಸುವುದು ಉದ್ದೇಶ. ಈ ವರ್ಷದ ಥೀಮ್ 'ಕೇಳಿದ ಅನುಭವಗಳು: ನಿಜವಾದ ಧ್ವನಿಗಳು, ನಿಜವಾದ ಬದಲಾವಣೆ' ಎನ್ನುವುದಾಗಿದೆ.
ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ
ಪ್ರತಿವರ್ಷ ಅ.10ರಂದು ದೇಶಾದ್ಯಂತ ಎಲ್ಲ ಜಿಲ್ಲೆಗಳಲ್ಲೂ 'ವಿಶ್ವ ಮಾನಸಿಕ ಆರೋಗ್ಯ ದಿನ' ಆಚರಿಸಲಾಗುತ್ತದೆ. ಉಡುಪಿ ಜಿಲ್ಲೆಯಲ್ಲಿಯೂ ಸಹ ಮಾನಸಿಕ ಖಿನ್ನತೆಗೆ ಒಳಗಾದ ಜನರ ಆರೋಗ್ಯ ರಕ್ಷಣೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಮನೋವೈದ್ಯರು, ಕ್ಲಿನಿಕಲ್ ಸೈಕಾಲಾಜಿಸ್ಟ್, ಸೈಕಿಯಾಟ್ರಿಕ್ ಸೋಶಿಯಲ್ ವರ್ಕರ್, ಸೈಕಿಯಾಟ್ರಿಕ್ ನರ್ಸ್, ಕಮ್ಯುನಿಟಿ ನರ್ಸ್, ಸಫೋರ್ಟ್ ಸ್ಟಾಫ್ ಹೀಗೆ ವಿವಿಧ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಾರೆ.
ಮನೋಚೈತನ್ಯ ಶಿಬಿರ
ಮಾನಸಿಕವಾಗಿ ನೊಂದವರಿಗೆ ಚಿಕಿತ್ಸೆ ನೀಡಲು ಪ್ರತಿ ಮಂಗಳವಾರ ಕಾರ್ಕಳ ತಾಲೂಕು ಆಸ್ಪತ್ರೆ ಹಾಗೂ ಪ್ರತಿ ಶುಕ್ರವಾರ ಕುಂದಾಪುರ ತಾಲೂಕು ವಿಭಾಗೀಯ ಆಸ್ಪತ್ರೆಯಲ್ಲಿ ಉಚಿತವಾಗಿ ಮನೋಚೈತನ್ಯ ಶಿಬಿರ ಆಯೋಜಿಸಲಾಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ಪೇತ್ರಿ, ನಾಡಾ, ಬನ್ನೂರು, ಶಿರೂರು, ಗಂಗೊಳ್ಳಿ, ಬಜಗೋಳಿ, ಬೈಲೂರು, ಆವರ್ಸೆ, ಮಂದರ್ತಿ, ಕಾಪು, ಕೆಮ್ಮಣ್ಣು, ಮಲ್ಪೆ, ಮಣಿಪುರ, ಹಾಲಾಡಿ, ಬಾರ್ಕೂರು, ಕುಕ್ಕೆಹಳ್ಳಿ, ವಂಡ್ಸೆ, ಕೊಕ್ಕರ್ಣೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಾದ ಶಿರ್ವ, ಬೈಂದೂರಿನಲ್ಲಿ ತಿಂಗಳಲ್ಲಿ 1 ದಿನ ಮಾನಸಿಕ ಆರೋಗ್ಯ ಶಿಬಿರ ಆಯೋಜಿಸಲಾಗುತ್ತದೆ.
ಕ್ರ.ಸಂಖ್ಯೆ ವರ್ಷ ರೋಗಿಗಳ ಸಂಖ್ಯೆ
1) 2023-24 33,267
2) 2024-25 42,728
3) 2025-26 50,690
4) 2026-27 28,932 (ಸೆಪ್ಟೆಂಬರ್ ಅಂತ್ಯಕ್ಕೆ)
ಮನೋಚೈತನ್ಯ ಶಿಬಿರ ಯೋಜನೆಯಡಿ ಡಾ. ಎ.ವಿ. ಬಾಳಿಗಾ ಚಾರಿಟೀಸ್ ದೊಡ್ಡಣಗುಡ್ಡೆಯ ಸಹಯೋಗದೊಂದಿಗೆ ಉಡುಪಿಯ ಬಾಳಿಗಾ ಆಸ್ಪತ್ರೆಯಲ್ಲಿ ಮಾನಸಧಾರಾ ಕಾರ್ಯಕ್ರಮ ಹಾಗೂ ಉಡುಪಿ ಜಿಲ್ಲಾಸ್ಪತ್ರೆಯಲ್ಲಿರುವ ತುರ್ತು ಆರೈಕೆ ಮತ್ತು ಪುನಶ್ಚೇತನ ಕೇಂದ್ರದಲ್ಲಿ ನಿರಾಶ್ರಿತ ಮಾನಸಿಕ ರೋಗಿಗಳಿಗೆ ಆರೈಕೆ ಮಾಡಿ ಮರಳಿ ಅವರ ಮನೆಗೆ ತಲುಪಿಸುವುದು ಮಾಡಲಾಗುತ್ತದೆ. ಅಲ್ಲದೆ, ಮಣಿಪಾಲ ಕೆಎಂಸಿಯ ಮನೋರೋಗ ವಿಭಾಗದ ಸಹಕಾರದಲ್ಲಿ 'ಟೆಲಿ ಸೈಕಿಯಾಟ್ರಿ' ಶಿಬಿರ ನಡೆಯುತ್ತಿದೆ. ಸಮುದಾಯ ಆರೋಗ್ಯ ಕೇಂದ್ರ ಹೆಬ್ರಿ, ಕಾರ್ಕಳ ತಾಲೂಕಿನಲ್ಲಿ ತಿಂಗಳ ಮೊದಲ ಗುರುವಾರ, ಕುಂದಾಪುರ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಕಂಡ್ಲೂರಿನಲ್ಲಿ ಮೊದಲ ಸೋಮವಾರ ಹಾಗೂ ಸಿದ್ದಾಪುರದಲ್ಲಿ ಮೊದಲ ಗುರುವಾರ 'ಟೆಲಿ ಸೈಕಿಯಾಟ್ರಿ' ಶಿಬಿರ ನಡೆಯುತ್ತದೆ.