

ಉಡುಪಿ: ಕರಾವಳಿಯ ಪರಿಸರಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆ ಅಥವಾ ಹಾನಿಯಾಗದಂತೆ 'ಸಿರೇನಾ (ಜಲಕನ್ಯೆ)' ಲಕ್ಸುರಿ ಬೀಚ್ ರೆಸಾರ್ಟ್ ನಿರ್ಮಿಸಲಾಗಿದೆ. ರಾಜ್ಯ-ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರಾವಳಿಯನ್ನು ಗುರುತಿಸುವಂತಾಗಬೇಕು ಎಂಬ ಸಂಕಲ್ಪದೊಂದಿಗೆ 'ಸಿರೇನಾ' ಆರಂಭಿಸಲಾಗಿದೆ. ಮೀನುಗಾರರೂ ಸಹ ಇಂತಹ ಕಾರ್ಯ ಮಾಡಬಹುದು ಎನ್ನುವುದಕ್ಕೆ ಇದು ನಿದರ್ಶನ. ಕರಾವಳಿಯ ಸಂಸ್ಕೃತಿ ರಕ್ಷಣೆಯೊಂದಿಗೆ ಹಾಗೂ ಪ್ರವಾಸೋದ್ಯಮದ ಏಳಿಗೆಗೆ 'ಸಿರೇನಾ' ಪೂರಕವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಶ್ಯಾಮಿಲಿ ಗ್ರೂಪ್ನ ಮೆನೇಜಿಂಗ್ ಡೈರೆಕ್ಟರ್ ನಾಡೋಜ ಡಾ.ಜಿ ಶಂಕರ ತಿಳಿಸಿದರು.
ಉಡುಪಿ ಮಲ್ಪೆಯಲ್ಲಿ ತಂಪು ಗಾಳಿ, ಅಲೆಗಳ ನಾದ, ಪ್ರಕೃತಿ ಸೌಂದರ್ಯದ ಮಧ್ಯೆ ಸುಮಾರು 10 ಎಕರೆಗೂ ಅಧಿಕ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡ 'ಸಿರೇನಾ' ಲಕ್ಸುರಿ ಬೀಚ್ ರೆಸಾರ್ಟ್ಅನ್ನು ಶನಿವಾರ (ನ.28) ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕರಾವಳಿಯಲ್ಲಿಯೇ ಮಾದರಿ ರೆಸಾರ್ಟ್
2018 ಮತ್ತು 2023ರಲ್ಲಿ ಈ ಭೂಮಿ 30 ವರ್ಷದ ಲೀಸ್ಗೆ ಮಂಜೂರಾಗಿತ್ತು. ಇದು ಬೋಳು ಗುಡ್ಡೆಯ ತರಹ ಇತ್ತು. ಇಲ್ಲಿಂದ ಉಡುಪಿಯ ಅಥವಾ ಕರಾವಳಿ ಭಾಗದ ಸಂಸ್ಕೃತಿ, ಧಾರ್ಮಿಕ, ಆಹಾರ, ಸಮುದ್ರದ ಸೌಂದರ್ಯವನ್ನು ಜಗತ್ತಿಗೆ ತೋರ್ಪಡಿಸಬೇಕು ಎಂಬ ಆಶಯದಿಂದ ರೆಸಾರ್ಟ್ ಕಟ್ಟುವ ಯೋಚನೆ ಮಾಡಿದೆ. ದೇವರ ಅನುಗ್ರಹದಿಂದ ಕಡಲ ಸಂರಕ್ಷಣೆ ಹಾಗೂ ಸ್ವಚ್ಛತೆಯ ದೃಷ್ಟಿಯಿಂದ ಇಂದು 'ಸಿರೇನಾ' ಕಣ್ಮುಂದೆ ನಿಂತಿದ್ದಾಳೆ. ಕೇರಳದಿಂದ ಮಹಾರಾಷ್ಟ್ರದ ರತ್ನಾಗಿರಿಯವರೆಗಿನ ಕರಾವಳಿ ಪ್ರದೇಶದಲ್ಲಿ ಎಲ್ಲಿಯೂ ಇಂತಹ ರೆಸಾರ್ಟ್ ಇಲ್ಲ ಎಂಬ ಅಭಿಮಾನವೂ ಈಗ ಹೆಮ್ಮೆ ತರುತ್ತಿದೆ. ಅಂಬಲಪಾಡಿಯಲ್ಲಿಯೂ ಸಹ ಶ್ಯಾಮಿಲಿ ಸಮೂಹ ಸಂಸ್ಥೆಯಿಂದ ಸ್ಟಾರ್ ಹೋಟೆಲ್ ನಿರ್ಮಿಸಲಾಗುವುದು. ಒಳ್ಳೆಯ ಮನಸ್ಸಿನಿಂದ ಮಾಡಿದ ಕಾರ್ಯಕ್ಕೆ ಭಗವಂತನ ಒಲುಮೆ ಲಭಿಸುತ್ತದೆ ಎಂದು ತಿಳಿಸಿದರು.
ಕರಾವಳಿಗೆ ಕೊಡುಗೆ
ವಿಧಾನ ಪರಿಷತ್ ಮುಖ್ಯ ಸಚೇತಕ ಮಂಜುನಾಥ ಭಂಡಾರಿ ಮಾತನಾಡಿ, ಕರ್ನಾಟಕದ ಕರಾವಳಿ ಪ್ರದೇಶಕ್ಕೆ 'ಸಿರೇನಾ'ದ ಮೂಲಕ ಡಾ. ಜಿ.ಶಂಕರ ಅವರು ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಕರಾವಳಿಯ ಅಭಿವೃದ್ಧಿಯಲ್ಲಿ ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೆಗ್ಗುರುತಾಗಲಿದೆ. 1950ರಲ್ಲಿ ಮಂಗಳೂರಿನಲ್ಲಿ ರಣಜಿ ಕ್ರಿಕೆಟ್ ನಡೆದಿತ್ತು. ಬಳಿಕ ಇಂದಿನ ಕ್ರಿಕೆಟ್ ಆಟಗಾರರಿಗೆ ತಕ್ಕಂತೆ ಸೌಲಭ್ಯ ಒದಗಿಸುವ ವಸತಿ ವ್ಯವಸ್ಥೆ, ರೆಸಾರ್ಟ್ ಸೌಕರ್ಯ ಇದ್ದಿರಲಿಲ್ಲ. ಹೀಗಾಗಿ ರಣಜಿ ಕ್ರಿಕೆಟ್ ನಡೆದಿರಲಿಲ್ಲ. ನಮ್ಮ ಆ ಪ್ರಯತ್ನಕ್ಕೆ ಇರುವ ಕೊರತೆಯನ್ನು ಇದೀಗ 'ಸಿರೇನಾ' ನೀಗಿಸಿದೆ ಎಂದರು.
ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್, ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಶಾಸಕ ಕೆ. ರಘುಪತಿ ಭಟ್, ಸಾಯಿರಾಧಾ ಗ್ರೂಪ್ನ ಮಾಲೀಕ ಮನೋಹರ ಶೆಟ್ಟಿ ಮಾತನಾಡಿದರು.
ಎಸ್.ಅಂಗಾರ, ದಿನಕರ ಹೇರೂರು, ಗೋಪಾಲ ಪೂಜಾರಿ, ಶಾಲಿನಿ ಜಿ.ಶಂಕರ, ಶ್ಯಾಮಿಲಿ ನವೀನ್, ಶಂಕರ ಸಾಲಿಯಾನ್, ರಮೇಶ ಕಾಂಚನ್, ಅಶೋಕ ಕೊಡವೂರು, ಕಿಶನ್ ಹೆಗ್ಡೆ ಕೊಳ್ಕೆಬೈಲು, ಕುತ್ಯಾರು ನವೀನ ಶೆಟ್ಟಿ, ಆನಂದ ಸಿ. ಕುಂದರ್, ಪುರುಷೋತ್ತಮ ಶೆಟ್ಟಿ, ಶಂಕರ ಕುಂದರ್, ಜಯ ಸಿ. ಕೋಟ್ಯಾನ್, ಮೋಹನ ಬೇಂಗ್ರೆ, ಉದಯಕುಮಾರ ಹಟ್ಟಿಯಂಗಡಿ, ಸತೀಶ ಅಮೀನ್, ಕಿಶೊರ ಸುವರ್ಣ, ಎಡ್ಲಿನ್ ಕರ್ಕಡ, ನಾಗರಾಜ ಸುವರ್ಣ, ಕೃಷ್ಣ ಕೋಟ್ಯಾನ್, ಬೇಬಿ ಎಚ್. ಸಾಲಿಯಾನ್ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೆಸಾರ್ಟ್ ನಿರ್ಮಾಣದಲ್ಲಿ ಸಹಕರಿಸಿದ ಆರ್ಕಿಟೆಕ್ಟ್ಗಳಾದ ಯೋಗೀಶ್ಚಂದ್ರ, ಜಗದೀಶ ಕಾಂಚನ್, ರಾಹುಲ್ ಶೆಟ್ಟಿ, ಶ್ರೀಪತಿ ಭಟ್ ಉಚ್ಚಿಲ, ಕವನ್ ಕುಮಾರ ಹಾಗೂ ಸಂತೋಷ ಅವರನ್ನು ಸನ್ಮಾನಿಸಲಾಯಿತು.
ಭಾಗವತ ಕಾರ್ತಿಕ ಭಟ್ ಮತ್ತು ತಂಡದವರು ಯಕ್ಷಗಾನ ಶೈಲಿಯಲ್ಲಿ ಗಣಪತಿ ಸ್ತುತಿ ಹಾಡಿದರು. ಡಾ.ಜಿ.ಶಂಕರ ಎಲ್ಲರನ್ನೂ ಸ್ವಾಗತಿಸಿದರು. ನಿರೂಪಕ ಸಾಹಿಲ್ ರೈ ಕಾರ್ಯಕ್ರಮ ನಿರ್ವಹಿಸಿದರು. ಎಸ್.ಕೆ. ಆನಂದ್ ವಂದಿಸಿದರು.
ಸಿರೇನಾ ಬೀಚ್ ರೆಸಾರ್ಟ್ ಉದ್ಘಾಟನೆಯಲ್ಲಿ 'ಪ್ರೇಮದ ಊರಲಿ' ಸಿನಿಮಾದ ನಾಯಕ ನಟ ಶ್ರೀರಾಮ್ ಹಾಗೂ ನಾಯಕಿ ತಪಸ್ವಿನಿ ಪೂಣಚ್ಚ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಶ್ರೀರಾಮ್ ಮಾತನಾಡಿ, 'ಸಿರೇನಾ' ಹೆಸರೇ ಅತ್ಯಂತ ಆಕರ್ಷಿತವಾಗಿದೆ. ಬೆಂಗಳೂರಿನಲ್ಲಿ ಜನಸಾಗರವಿದ್ದರೆ ಇಲ್ಲಿ ಸಾಗರವೇ ಇದೆ. ಇಲ್ಲಿನ ಅಲೆಗಳಲ್ಲಿ ಶಬ್ದವಿದೆ. ಅದುವೇ ತೆರೆಯ ಸಂಗೀತ. ನನಗದು ಬಲು ಇಷ್ಟ. ಈ ರೆಸಾರ್ಟ್ನ ವಿನ್ಯಾಸ ಅತ್ಯದ್ಭುತವಾಗಿದೆ. ನನ್ನ ಸಿನಿಮಾ ಗೆಲ್ಲಿಸಿದ್ದಕ್ಕೆ ಕರಾವಳಿಯ ಜನತೆಗೆ ಈ ರೆಸಾರ್ಟ್ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ತಪಸ್ವಿನಿ ಮಾತನಾಡಿ, ಕರಾವಳಿಯೆಂದರೆ ನನಗೆ ತುಂಬ ಇಷ್ಟ. ಮೀನಿನ ಕರಿ ತಿನ್ನೋದು ಇನ್ನೂ ಇಷ್ಟ. ಇನ್ನು 'ಸಿರೇನಾ'ದಿಂದ ಹೋಗಲು ಮನಸ್ಸೇ ಇಲ್ಲ. ಇಲ್ಲಿನ ಪ್ರಕೃತಿ ಸೌಂದರ್ಯ ವರ್ಣಿಸಲು ಅಸಾಧ್ಯ ಎಂದರು. ಯುವ ನಟ-ನಟಿಯರನ್ನು ಡಾ. ಜಿ.ಶಂಕರ ಅವರು ಸನ್ಮಾನಿಸಿ, ನಿಮ್ಮ ಸಿನಿಮಾ ಪಯಣ ಇನ್ನಷ್ಟು ಉಜ್ವಲವಾಗಲಿ ಎಂದು ಹಾರೈಸಿದರು.