ಶಾರ್ಜಾ ಕೊಲೆ ಪ್ರಕರಣ ಫಾರೆನ್ಸಿಕ್​ ವರದಿಯಲ್ಲಿ ಬೆಚ್ಚೀಬಿಳಿಸುವ ಅಂಶ

ಶಾರ್ಜಾದ ಅಲ್​ ನಹ್ದಾ ಕಮರ್ಷಿಯಲ್​ ಏರಿಯಾದ ರ್ನಿಜನ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಕಾರಿನ ಡಿಕ್ಕಿಯಲ್ಲಿ ಎರಡು ಚೀಲಗಳಲ್ಲಿ ತುಂಬಿಡಲಾಗಿದ್ದ ಮೃತದೇಹ ಪತ್ತೆಯಾಗಿದ್ದು, ಹಂತಕರು ಕೊಲೆಯ ನಂತರ ಗರಗಸದಿಂದ ಮೂಳೆಗಳನ್ನು ಕತ್ತರಿಸಿ, ಮಾಂಸಖಂಡಗಳನ್ನು ಹರಿತವಾದ ಆಯುಧದಿಂದ ಬೇರ್ಪಡಿಸಿ 9 ಭಾಗಗಳಾಗಿ ಕತ್ತರಿಸಿದ್ದಾರೆ.
Sharjah murder case
ಕುಟುಂಬದೊಂದಿಗೆ ಅಲ್ವಿನ್​ ಪ್ರಕಾಶ್​ ಕುಂದರ್​
Published on

ಉಡುಪಿ: ಯುಎಇ ಶಾರ್ಜಾದಲ್ಲಿ ಭೀಕರ ರೀತಿಯಲ್ಲಿ ಹತ್ಯೇಗಿಡಾದ ಕುಂದಾಪುರ ಮೂಲದ ಅಲ್ವಿನ್​ ಪ್ರಕಾಶ್​ ಕುಂದರ್​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರ್ಜಾ ಫೊರೆನ್ಸಿಕ್​ ವರದಿ ಹೊರಬಿದ್ದಿದ್ದು, ಅತ್ಯಂತ ಬೆಚ್ಚೀಬಿಳಿಸುವ ಅಂಶಗಳು ಬಹಿರಂಗಗೊಂಡಿವೆ.

ಶಾರ್ಜಾದ ಅಲ್​ ನಹ್ದಾ ಕಮರ್ಷಿಯಲ್​ ಏರಿಯಾದ ರ್ನಿಜನ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ 'ಮಿತ್ಸುಬಿಷಿ ಲ್ಯಾನ್ಸರ್​' ಕಾರಿನ ಡಿಕ್ಕಿಯಲ್ಲಿ ಎರಡು ಚೀಲಗಳಲ್ಲಿ ತುಂಬಿಡಲಾಗಿದ್ದ ಮೃತದೇಹ ಪತ್ತೆಯಾಗಿದ್ದು, ಹಂತಕರು ಕೊಲೆಯ ನಂತರ ಗರಗಸದಿಂದ ಮೂಳೆಗಳನ್ನು ಕತ್ತರಿಸಿ, ಮಾಂಸಖಂಡಗಳನ್ನು ಹರಿತವಾದ ಆಯುಧದಿಂದ ಬೇರ್ಪಡಿಸಿ 9 ಭಾಗಗಳಾಗಿ ಕತ್ತರಿಸಿದ್ದಾರೆ.

ಸಂಪೂರ್ಣ ನಗ್ನ ಸ್ಥಿತಿಯಲ್ಲಿದ್ದ ದೇಹದ ತಲೆಯನ್ನು ಕಪ್ಪು ಪ್ಲಾಸ್ಟಿಕ್​ ಚೀಲದಲ್ಲೂ, ಇನ್ನುಳಿದ ಭಾಗಗಳನ್ನು ಪಾರದರ್ಶಕ ಪ್ಲಾಸ್ಟಿಕ್​ನಲ್ಲಿ ಸುತ್ತಿ ನೀಲಿ ಚೀಲದಲ್ಲಿಡಲಾಗಿತ್ತು. ಎದೆ ಮತ್ತು ಹೊಟ್ಟೆಯ ಮಧ್ಯಭಾಗವನ್ನು ಹಸಿರು ಚೀಲದಲ್ಲಿ ತುಂಬಿಸಲಾಗಿತ್ತು. ಎಡ ಎದೆಯ ಭಾಗದಲ್ಲಿ 7 ಮತ್ತು 8ನೇ ಪಕ್ಕೆಲುಬುಗಳ ನಡುವಿನಿಂದ ಆಳಕ್ಕೆ ಇರಿದ ಎರಡು ಗಾಯಗಳಾಗಿದ್ದು, ಎದೆಗೂಡಿನೊಳಗೆ ತೀವ್ರ ರಕ್ತಸ್ರಾವವಾಗಿದೆ. ಮೃತದೇಹವು ಕೊಳೆತ ಸ್ಥಿತಿಯಲ್ಲಿದ್ದು, ರಕ್ತದ ಮಾದರಿಯಲ್ಲಿ ಅಲ್ಪಪ್ರಮಾಣದ ಆಲ್ಕೋಹಾಲ್​ ಪತ್ತೆಯಾಗಿದೆ.

ಮೃತದೇಹ ತರಲು ಪ್ರಯತ್ನ

ಶಾರ್ಜಾದಲ್ಲಿ ಹತ್ಯೇಗಿಡಾದ ಪ್ರಕಾಶ್​ ಕುಂದರ್​, ಶವವನ್ನು ಆದಷ್ಟು ಶೀಘ್ರವಾಗಿ ಊರಿಗೆ ಕಳುಹಿಸುವಂತೆ ಕುಟುಂಬ ಸದಸ್ಯರು ಒತ್ತಾಯಿಸಿದ್ದಾರೆ. ಈ ಸಂಬಂಧ ಉಡುಪಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಮನವಿ ಮಾಡಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಒತ್ತಾಯಿಸಿದ್ದಾರೆ. ಜುಲೈ ತಿಂಗಳ ಕೊನೆಯ ಭಾಗದಲ್ಲಿ ಈ ಕೊಲೆ ನಡೆದಿದ್ದು ಈಗಾಗಲೇ ಎರಡು ತಿಂಗಳು ಕಳೆದಿದೆ.

ಸಿಸಿ ಕೆಮರಾದಲ್ಲಿ ಶವ ಸಾಗಾಟ ದೃಶ್ಯ ಸೆರೆ

ಸಿಸಿ ಕೆಮರಾದಲ್ಲಿ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರು ಎರಡು ಚೀಲಗಳಲ್ಲಿ ಶವವನ್ನು ಸಾಗಿಸುತ್ತಿರುವ ದೃಶ್ಯ ಶಾರ್ಜಾ ಪೊಲೀಸರಿಗೆ ಲಭ್ಯವಾಗಿದೆ. ಇನ್ನೊಂದೆಡೆ ಘಟನೆಯ ನಂತರ ಅಲ್ವಿನ್​ ಪತ್ನಿ ಹಾಗೂ ಪುತ್ರ ಭಾರತಕ್ಕೆ ಬಂದಿದ್ದು, ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿದಿದ್ದಾರೆ. ನಂತರದ ಅವರ ಚಲನವಲನದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಈ ಕೊಲೆಯಲ್ಲಿ ಯಾರ ಪಾತ್ರವಿದೆ ಎಂಬುದು ಸ್ಪಷ್ಟವಾಗಬೇಕು. ಅವರಿಬ್ಬರು ಊರಿಗೆ ಬಾರದೆ ನಾಪತ್ತೆಯಾಗಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ಸಹೋದರ ಪ್ರಶಾಂತ್​ ಕುಂದರ್​ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದೊಂದು ಅತ್ಯಂತ ಘೋರವಾದ ಕೃತ್ಯ. ಮಾಹಿತಿ ತಿಳಿಯುತ್ತಿದ್ದಂತೆಯೇ ವಿದೇಶಾಂಗ ಸಚಿವಾಲಯ ಹಾಗೂ ಶಾರ್ಜಾದ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಪತ್ರ ಬರೆಯಲಾಗಿದೆ. ಮೃತದೇಹವನ್ನು ಶೀಘ್ರವೇ ಭಾರತಕ್ಕೆ ತರಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಆರೋಪಿಗಳ ಪಟ್ಟಿಯಲ್ಲಿ ಮೃತರ ಪತ್ನಿ ಮತ್ತು ಮಗನ ಹೆಸರು ಕೇಳಿಬರುತ್ತಿದೆ. ಅವರು ಅನಿವಾರ್ಯ ಕಾರಣಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರಾ, ಕೃತ್ಯದಲ್ಲಿ ಅವರ ಭಾಗಿಯಾಗುವಿಕೆ ಇದೆಯೇ ಅಥವಾ ಅವರನ್ನು ಯಾರಾದರೂ ಸಂಚಿಗೆ ಬಳಸಿಕೊಂಡಿದ್ದಾರಾ ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕಿದೆ. -ಕೋಟ ಶ್ರೀನಿವಾಸ ಪೂಜಾರಿ, ಸಂಸದ.

ಶಾರ್ಜಾದಲ್ಲಿ ನಡೆದ ಉಡುಪಿ ನಿವಾಸಿ ಆಲ್ವಿನ್​ ಕುಂದರ್​ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಸಹೋದರ ಅಗತ್ಯ ನೆರವು ಕೋರಿ ಮನವಿ ಸಲ್ಲಿಸಿದ್ದಾರೆ. ಆರೋಪಿಯ ವಿರುದ್ಧ 'ಲೆಟರ್​ ರೋಗಟರಿ' ಅಥವಾ 'ರೆಡ್​ ಕಾರ್ನರ್​ ನೋಟಿಸ್​' ಅಥವಾ ಇಂಟರ್​ಪೋಲ್​ನ ಯಾವುದೇ ನೋಟಿಸ್​ಗಳನ್ನು ಹೊರಡಿಸದ ಹೊರತು ಸದ್ಯದ ಮಟ್ಟಿಗೆ ಉಡುಪಿ ಪೊಲೀಸರಿಂದ ಯಾವುದೇ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಆದಾಗ್ಯೂ, ತನಿಖೆಯ ಮುಂದಿನ ಪ್ರಗತಿಯ ಬಗ್ಗೆ ಕುಟುಂಬಕ್ಕೆ ಅನುಕೂಲವಾಗುವಂತೆ ದುಬೈನಲ್ಲಿರುವ ಭಾರತೀಯ ದೂತಾವಾಸದೊಂದಿಗೆ ಸಂಪರ್ಕ ಏರ್ಪಡಿಸುತ್ತಿದ್ದೇವೆ. ಅಲ್ಲದೆ, ಇಂಟರ್​ಪೋಲ್​ ಮಾರ್ಗಗಳ ಮೂಲಕ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದೇವೆ. ಹರಿರಾಂ ಶಂಕರ್​, ಎಸ್ಪಿ ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net