

ಉಡುಪಿ: ಹಲವು ಸಂಘ-ಸಂಸ್ಥೆಯಲ್ಲಿ ತೊಡಗಿಸಿಕೊಂಡಿರುವ ಸಂಘಟಕ, ರಂಗಕರ್ಮಿ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. ಅವರನ್ನು 'ಸಂಗೊಳ್ಳಿ ರಾಯಣ್ಣ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನ ಬಳಗ ದ.ಕ. ಮತ್ತು ಉಡುಪಿ ಜಿಲ್ಲಾಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ತಿಳಿಸಿದ್ದಾರೆ.
ನಾಟಕ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ರವಿರಾಜ್, ಪ್ರಸನ್ನ ಹೆಗ್ಗೋಡು, ಚಿದಂಬರಾವ್ ಜಂಬೆ ಅವರಂತಹ ಅನೇಕ ಹಿರಿಯ ನಿರ್ದೇಶಕರಿಂದ ರಂಗ ಶಿಕ್ಷಣ ಪಡೆದು ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ.
10ಕ್ಕೂ ಹೆಚ್ಚು ನಾಟಕಗಳಿಗೆ ನಿರ್ದೇಶನ, 20ಕ್ಕೂ ಹೆಚ್ಚು ನಾಟಕಗಳಿಗೆ ಬೆಳಗಿನ ವಿನ್ಯಾಸ ಮಾಡಿದ್ದಾರೆ. ಪ್ರತಿಷ್ಠಿತ ರಂಗಭೂಮಿ (ರಿ.) ಉಡುಪಿಯ ಸದಸ್ಯ, ಕೋಶಾಧಿಕಾರಿ, ಕಾರ್ಯದರ್ಶಿ, ಶಿಬಿರಗಳ ಸಂಚಾಲಕನಾಗಿ, 25 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ.
ಕರೊನಾ ಲಾಕ್ಡೌನ್ ಸಂದರ್ಭದಲ್ಲಿ 'ಹೀಗೊಂದು ರಂಗ ಕಲಿಕೆ' ಎನ್ನುವ ವಿಶಿಷ್ಟ ಪರಿಕಲ್ಪನೆಯಲ್ಲಿ ಯೂಟ್ಯೂಬ್ ಮೂಲಕ ಕರ್ನಾಟಕದ ಹಿರಿಯ ರಂಗ ನಿರ್ದೇಶಕರ ಮೂಲಕ "ನವರಸಗಳ ರಂಗ ಕಲಿಕೆ' ಪ್ರಸಾರ ಮಾಡಿದ್ದು, 10 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. 300ಕ್ಕೂ ಹೆಚ್ಚು ರಂಗ ನಟರು ಭಾಗವಹಿಸಿದ್ದು, ಅದೊಂದು ದಾಖಲೆಯಾಗಿತ್ತು.
ಆರೋಗ್ಯ ಮಾಹಿತಿಗಾಗಿ ಜಿಲ್ಲಾಡಳಿತದೊಂದಿಗೆ ಸೇರಿ 250ಕ್ಕೂ ಅಧಿಕ ಬೀದಿ ನಾಟಕಗಳ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 10ಕ್ಕೂ ಹೆಚ್ಚು ಸಿನಿಮಾ, ಧಾರವಾಹಿಗಳಲ್ಲಿ ನಟನೆ, ಸಹ ನಿರ್ದೇಶನ, ಯೂಟ್ಯೂಬ್ಗಳಲ್ಲಿ ಡಾ. ಸಾಲುಮರದ ತಿಮ್ಮಕ್ಕ ಸೇರಿದಂತೆ ಹಲವು ಸಾಕ್ಷ್ಯಚಿತ್ರ, ಪರಿಸರ ರಕ್ಷಣೆ-ಜಾಗೃತಿಗಾಗಿ 'ನಮ್ಮ ಮನೆ ನಮ್ಮ ಮರ' ಅಭಿಯಾನ, 27 ವರ್ಷದಿಂದ 500ಕ್ಕೂ ಹೆಚ್ಚು ಆರೋಗ್ಯ ಶಿಬಿರಗಳಲ್ಲಿ ಬಡ ರೋಗಿಗಳಿಗೆ ಉಚಿತ ಔಷಧ ಹಾಗೂ ಅಗತ್ಯ ಮೆಡಿಕಲ್ ಕಿಟ್ ನೀಡಿದ್ದಾರೆ.
ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷರಾಗಿ 4 ವರ್ಷದಿಂದ ಕನ್ನಡ ನಾಡು-ನುಡಿಗೆ ಸಂಬಂಧಿಸಿ ಸುಮಾರು 450ಕ್ಕೂ ಹೆಚ್ಚು ಕಾರ್ಯಕ್ರಮ ನಡೆಸಿರುವುದು ಇವರ ಹೆಗ್ಗಳಿಕೆ. ಕಥೆ ಕೇಳೋಣ, 200ಕ್ಕೂ ಅಧಿಕ ಮನೆಗಳಲ್ಲಿ ಮನೆಯೇ ಗ್ರಂಥಾಲಯ ಅಭಿಯಾನ, ಕನ್ನಡ ಮಾತನಾಡಲು ಬಾರದಿರುವವರಿಗಾಗಿ ಹಿರಿಯ ವಿದ್ವಾಂಸರಿಂದ ಶಿಬಿರ ಆಯೋಜಿಸಿದ್ದಾರೆ. ಹೀಗೆ ಬಹುಮುಖ ಪ್ರತಿಭೆಯ ರವಿರಾಜ್ ಎಚ್.ಪಿ. ಅವರಿಗೆ 'ಸಂಗೊಳ್ಳಿ ರಾಯಣ್ಣ' ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.