

** ಕಾರ್ಯಾಚರಣೆಯಲ್ಲಿ ಕೇಂದ್ರೀಯ ತನಿಖಾ ದಳ ಯಶಸ್ಸು
** ಕಲಿ ಯೋಗೀಶನ ಪರಮಾಪ್ತ ಬಂಧನ, ಎಸ್ಪಿ ಹರಿರಾಮ ಶಂಕರ ಮಾಹಿತಿ
ಉಡುಪಿ: ಕೇಂದ್ರೀಯ ತನಿಖಾ ದಳ (ಸಿಬಿಐ), ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ), ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್ಎ) ಮತ್ತು ಕರ್ನಾಟಕ ಪೊಲೀಸರ ಸಹಯೋಗದೊಂದಿಗೆ 'ರೆಡ್ ನೋಟಿಸ್' ಜಾರಿಯಲ್ಲಿದ್ದ ರಾಜೇಶ ಕೇಶವ ಆಚಾರ್ಯ (ಕಲಿ ಯೋಗೀಶನ ಪರಮಾಪ್ತ)ನನ್ನು ಯುಎಇಯಿಂದ ಭಾರತಕ್ಕೆ ಗಡೀಪಾರು ಮಾಡಿಸುವಲ್ಲಿ ನ. 27ರಂದು ಯಶಸ್ವಿಯಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ ಶಂಕರ ಮಾಹಿತಿ ನೀಡಿದ್ದಾರೆ.
ರಾಜೇಶ ಕೇಶವ ಆಚಾರ್ಯನು ಕರ್ನಾಟಕ ಪೊಲೀಸರು ದಾಖಲಿಸಿದ ಕೊಲೆ ಪ್ರಕರಣವೊಂದರಲ್ಲಿ ಬೇಕಾದ ಆರೋಪಿಯಾಗಿದ್ದನು. 2002ರ ಜುಲೈನಲ್ಲಿ ನಡೆದ ಈ ಘಟನೆಯಲ್ಲಿ, ಈತ ಇತರ ಆರೋಪಿಗಳೊಂದಿಗೆ ಸೇರಿ ಮನೋಹರ ಶೆಟ್ಟಿ ಎಂಬು ವರನ್ನು ಕೊಲೆ ಮಾಡಿದ್ದನೆಂದು ಆರೋಪಿಸಲಾಗಿದೆ.
ಈತ 2019ರಲ್ಲಿ ಭಾರತದಿಂದ ಪರಾರಿಯಾಗಿದ್ದನು. ರಾಜೇಶ ಆಚಾರ್ಯ ಸೇರಿದಂತೆ ಪ್ರಕರಣದ ಎಲ್ಲ ಆರೋಪಿಗಳ ವಿರುದ್ಧ ಈಗಾಗಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಕರ್ನಾಟಕ ಪೊಲೀಸರ ಕೋರಿಕೆಯ ಮೇರೆಗೆ ಇಂಟರ್ಪೋಲ್ ಮೂಲಕ ಈತನ ವಿರುದ್ಧ 'ರೆಡ್ ನೋಟಿಸ್' ಹೊರಡಿಸಲಾಗಿತ್ತು. ತದನಂತರ, ಯುಎಇ ಅಧಿಕಾರಿಗಳು ಈತನ ಇರುವಿಕೆಯನ್ನು ಪತ್ತೆಹಚ್ಚಿ ಬಂಧಿಸಿದರು. ಕಳೆದ ಮೂರು ತಿಂಗಳ ಹಿಂದಷ್ಟೇ ಈತನ ಪಾಸ್ ಪೋರ್ಟ್ ರದ್ದುಪಡಿಸಲಾಗಿತ್ತು.
ಕಾನೂನು ಪ್ರಕ್ರಿಯೆಗಳನ್ನು ಪೂರೈಸಿದ ನಂತರ ಯುಎಇ ಅಧಿಕಾರಿಗಳು ಈತನನ್ನು ಭಾರತಕ್ಕೆ ಹಸ್ತಾಂತರಿಸಿದರು. ಮುಂಬೈಗೆ ಆಗಮಿಸಿದ ಈತನನ್ನು ಕರ್ನಾಟಕ ಪೊಲೀಸ ವಿಭಾಗದ ಮಂಗಳೂರು ಸಿಟಿ ಹಾಗೂ ಉಡುಪಿ ಪೊಲೀಸ್ ತಂಡದವರು ಜಂಟಿಯಾಗಿ ವಶಕ್ಕೆ ತೆಗೆದುಕೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಭಾರತದಲ್ಲಿ ಇಂಟರ್ಪೋಲ್ನ 'ನ್ಯಾಷನಲ್ ಸೆಂಟ್ರಲ್ ಬ್ಯೂರೋ' ಆಗಿ ಕಾರ್ಯನಿರ್ವಹಿಸುವ ಸಿಬಿಐ, ಅಂತಾರಾಷ್ಟ್ರೀಯ ಪೊಲೀಸ್ ಸಹಕಾರವನ್ನು ಸುಗಮಗೊಳಿಸಲು 'ಭಾರತ್ ಪೋಲ್' ಮೂಲಕ ದೇಶಾದ್ಯಂತ ಇರುವ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುತ್ತದೆ. 2019ರಿಂದ ಇಲ್ಲಿಯವರೆಗೆ ಇಂಟರ್ಪೋಲ್ ಮೂಲಕ 300ಕ್ಕೂ ಹೆಚ್ಚು ಅಪರಾಧಿಗಳನ್ನು ಭಾರತಕ್ಕೆ ಕರೆತರಲಾಗಿದೆ. ಇದರಲ್ಲಿ 2026ರಲ್ಲಿ ಈ ವರೆಗೆ ಪರಾರಿಯಾದ 77 ಅಪರಾಧಿಗಳನ್ನು ಯಶಸ್ವಿಯಾಗಿ ಭಾರತಕ್ಕೆ ಕರೆತರಲಾಗಿದೆ ಎಂದು ಎಸ್ಪಿ ಹರಿರಾಮ ತಿಳಿಸಿದ್ದಾರೆ.