ಗ್ರಾಹಕರಿಗೆ ಕಲ್ಪಿಸಿ ಗುಣಮಟ್ಟದ ಇಂಟರ್​ನೆಟ್​ ಸೌಲಭ್ಯ

ಉಡುಪಿ ಜಿಪಂ ಸಭಾಣಗಣದಲ್ಲಿ ಬಿಎಸ್​ಎನ್​ಎಲ್​ ಅಧಿಕಾರಿಗಳೊಂದಿಗೆ ಕೋಟ ಶ್ರೀನಿವಾಸ ಪೂಜಾರಿ ಸಭೆ ನಡೆಸಿದರು. ಪ್ರತೀಕ ಬಾಯಲ್​, ಎಸ್​.ಎಸ್​. ಕಾದ್ರೊಳ್ಳಿ, ಬಿ.ಎಸ್​. ನಾಗರ್​, ಹೇಮಂತ, ರಾಜಶೇಖರ ಇದ್ದರು.
ಉಡುಪಿ ಜಿಪಂ ಸಭಾಣಗಣದಲ್ಲಿ ಬಿಎಸ್​ಎನ್​ಎಲ್​ ಅಧಿಕಾರಿಗಳೊಂದಿಗೆ ಕೋಟ ಶ್ರೀನಿವಾಸ ಪೂಜಾರಿ ಸಭೆ ನಡೆಸಿದರು. ಪ್ರತೀಕ ಬಾಯಲ್​, ಎಸ್​.ಎಸ್​. ಕಾದ್ರೊಳ್ಳಿ, ಬಿ.ಎಸ್​. ನಾಗರ್​, ಹೇಮಂತ, ರಾಜಶೇಖರ ಇದ್ದರು.
Published on: 

* ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

* ಭಾರತ್​ ನೆಟ್​ ಹಂತ-3ರ ಪುನರ್​ ಪರಿಶೀಲನಾ ಸಭೆ

ಉಡುಪಿ: ಎಲ್ಲ ಗ್ರಾಪಂ ಕಚೇರಿ, ಸರ್ಕಾರಿ ಶಾಲೆ, ಅಂಗನವಾಡಿ ಹಾಗೂ ಸಾರ್ವಜನಿಕ ಸೇವಾ ಕೇಂದ್ರಗಳು ವಿಶ್ವಾಸಾರ್ಹ ಡಿಜಿಟಲ್​ ಸಂಪರ್ಕ ಹೊಂದಿರಬೇಕು. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ವೇಗದ ಇಂಟರ್​ನೆಟ್​ ವ್ಯವಸ್ಥೆ ಕಲ್ಪಿಸುವ ಭಾರತ್​ ನೆಟ್​ ಹಂತ-3ರ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಿ ಗ್ರಾಹಕರಿಗೆ ಗುಣಮಟ್ಟದ ಇಂಟರ್​ನೆಟ್​ ಸೌಲಭ್ಯ ಕಲ್ಪಿಸಲು ಮುತುವರ್ಜಿ ವಹಿಸಬೇಕು ಎಂದು ಅಧಿಕಾರಿಗಳಿಗೆ ಉಡುಪಿ ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.

ಉಡುಪಿಯ ಜಿಪಂ ಕಚೇರಿಯ ಡಾ. ವಿ.ಎಸ್​. ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ಭಾರತ್​ ನೆಟ್​ ಹಂತ-3ರ ಪುನರ್​ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಹಳ್ಳಿಗಳಿಗೂ ಆಪ್ಟಿಕಲ್​ ಸಂಪರ್ಕ

ಭಾರತ್​ ನೆಟ್​ ಯೋಜನೆಯ 2 ಹಂತಗಳನ್ನು ಈಗಾಗಲೇ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಎಲ್ಲ ಗ್ರಾಮಗಳಿಗೆ ನಿರಂತರ, ವಿಶ್ವಾಸಾರ್ಹ ಹಾಗೂ ಅಡಚಣೆ ರಹಿತ ಸೇವೆ ನೀಡಬೇಕಿದ್ದರಿಂದ ಭಾರತ ಸರ್ಕಾರವು 3ನೇ ಹಂತದಲ್ಲಿ ಅಮೆಂಡೆಡ್​ ಭಾರತ್​ನೆಟ್​ ಪ್ರೋಗ್ರಾಂ ಜಾರಿಗೆ ತಂದಿದೆ. ಹಳ್ಳಿಗಳಿಗೂ ಆಪ್ಟಿಕಲ್​ ಫೈಬರ್​ ಸಂಪರ್ಕ ವಿಸ್ತರಿಸಲು ಉದ್ದೇಶಿಸಲಾಗಿದೆ. ಈ ಯೋಜನೆಯಡಿ ರಾಜ್ಯದಲ್ಲಿ ಪಾಲಿಕ್ಯಾಬ್​ ಇಂಡಿಯಾ ಲಿಮಿಟೆಡ್​ ಅನುಷ್ಠಾನ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಪ್ರತಿ ಮನೆಗೂ ನೀಡಿ ಸಂಪರ್ಕ

ಜಿಪಂ ಸಿಇಒ ಪ್ರತೀಕ ಬಾಯಲ್​ ಮಾತನಾಡಿ, ಸರ್ಕಾರದ ಎಲ್ಲ ಯೋಜನೆಗಳ ಮಾಹಿತಿ ಜನರಿಗೆ ತಲುಪಬೇಕು. ದೇಶದಲ್ಲಿ 3.5 ಲಕ್ಷ ಗ್ರಾಪಂಗಳಿಗೆ ಆಪ್ಟಿಕಲ್​ ಫೈಬರ್​ ಸಂಪರ್ಕ ಕೊಡುವುದು ಸರ್ಕಾರದ ಧ್ಯೇಯವಾಗಿದೆ. ಗ್ರಾಪಂಗಳಿಂದ ಪ್ರತಿ ಮನೆಗೂ ಸಂಪರ್ಕ ಕಲ್ಪಿಸುವ ಜವಾಬ್ದಾರಿ ಬಿಎಸ್​ಎನ್​ಎಲ್​ ಸಂಸ್ಥೆಯ ಅಧಿಕಾರಿಗಳ ಮೇಲಿದೆ ಎಂದರು.

ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಎಸ್​.ಎಸ್​. ಕಾದ್ರೊಳ್ಳಿ, ಬಿಎಸ್​ಎನ್​ಎಲ್​ ಕರ್ನಾಟಕದ ಭಾರತ್​ನೆಟ್​ ವಿಭಾಗದ ಜನರಲ್​ ಮ್ಯಾನೇಜರ್​ ಬಿ.ಎಸ್​. ನಾಗರ್​, ಮಂಗಳೂರಿನ ಜನರಲ್​ ಮ್ಯಾನೇಜರ್​ ಹೇಮಂತ, ಎಜೆಎಂ ರಾಜಶೇಖರ, ಬಿಎಸ್​ಎನ್​ಎಲ್​ನ ಅಧಿಕಾರಿಗಳು, ಫ್ರಾಂಚೈಸಿಯ ಪ್ರಮುಖರು ಉಪಸ್ಥಿತರಿದ್ದರು.

ಭಾರತ್​ ನೆಟ್​ನವರು ಮನೆ, ಶೈಕ್ಷಣಿಕ ಸಂಸ್ಥೆ ಹಾಗೂ ಸರ್ಕಾರಿ ಇಲಾಖೆಗಳಿಗೆ ನೀಡಿದ ಸಂಪರ್ಕಗಳನ್ನು ಸರಿಯಾಗಿ ನಿರ್ವಹಿಸಬೇಕು. ಸೇವೆಯಲ್ಲಿ ವ್ಯತ್ಯಾಸ ಅಥವಾ ತೊಂದರೆಯಾದರೆ ಜನರು ಖಾಸಗಿ ಸಂಸ್ಥೆಗಳ ಮೊರೆ ಹೋಗುತ್ತಾರೆ. ಹೀಗಾಗದಂತೆ ಎಚ್ಚರ ವಹಿಸಬೇಕು. ಎಲ್ಲ ಪಿಡಿಒಗಳು ಬಿಎಸ್​ಎನ್​ಎಲ್​ ಇಂಟರ್​ನೆಟ್​ ಬಗ್ಗೆ ಪ್ರತಿ ಮನೆಗೆ ಕರಪತ್ರ ಹಂಚಿ ಅರಿವು ಮೂಡಿಸಬೇಕು. ಭಾರತ್​ ನೆಟ್​ನ ಫ್ರಾಂಚೈಸಿಯಾಗಲು ಯುವಕರಿಗೆ ಅವಕಾಶ ಮಾಡಿಕೊಡಬೇಕು.
ಕೋಟ ಶ್ರೀನಿವಾಸ ಪೂಜಾರಿ. ಉಡುಪಿ ಸಂಸದ.