ಸೆಪ್ಟಂಬರ್​ನಿಂದ ಪ್ರಜಾಸೇವೆ ಆಂದೋಲನ ಸಭೆ

ಉಡುಪಿಯ ಡಿಸಿ ಕಚೇರಿಯಲ್ಲಿ ನಡೆದ ಪ್ರಜಾಸೇವೆ ಆಂದೋಲನ ಸಭೆಯ ಪೂರ್ವಭಾವಿ ಸಭೆಯಲ್ಲಿ ಸ್ವರೂಪಾ ಟಿ.ಕೆ. ಮಾತನಾಡಿದರು. ಅಬೀದ್​ ಗದ್ಯಾಳ್​, ಸುಧಾಕರ್​ ನಾಯಕ್​, ಎಸ್​.ಎಸ್​. ಕಾದ್ರೋಳ್ಳಿ ಇತರರಿದ್ದರು.
ಉಡುಪಿಯ ಡಿಸಿ ಕಚೇರಿಯಲ್ಲಿ ನಡೆದ ಪ್ರಜಾಸೇವೆ ಆಂದೋಲನ ಸಭೆಯ ಪೂರ್ವಭಾವಿ ಸಭೆಯಲ್ಲಿ ಸ್ವರೂಪಾ ಟಿ.ಕೆ. ಮಾತನಾಡಿದರು. ಅಬೀದ್​ ಗದ್ಯಾಳ್​, ಸುಧಾಕರ್​ ನಾಯಕ್​, ಎಸ್​.ಎಸ್​. ಕಾದ್ರೋಳ್ಳಿ ಇತರರಿದ್ದರು.
Published on

* ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಮಾಹಿತಿ 

* ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ

ಉಡುಪಿ: ಜಿಲ್ಲೆಯ ಜನಸಾಮಾನ್ಯರ ಅಹವಾಲು ಆಲಿಸಿ, ಅವರಿಗಿರುವ ಸಮಸ್ಯೆಗಳನ್ನು ಸ್ಥಳಿಯ ಮಟ್ಟದಲ್ಲಿಯೇ ಪರಿಹರಿಸಲು ಸೆ.5ರಿಂದ ಪ್ರತಿ ಶನಿವಾರ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಪ್ರಜಾಸೇವಾ ಆಂದೋಲನ ಸಭೆ ನಡೆಯಲಿದೆ. ಪ್ರಜಾಸೇವಾ ಇಲಾಖೆಯಿಂದ ಹಮ್ಮಿಕೊಳ್ಳುವ ಈ ಮಹತ್ವದ ಸಭೆ ಯಶಸ್ವಿಗೊಳಿಸಲು ಎಲ್ಲ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ (ಆ.29) ಆಯೋಜಿಸಿದ್ದ ಜಿಲ್ಲೆಯಲ್ಲಿ ಪ್ರಜಾಸೇವೆ ಆಂದೋಲನ ಸಭೆ ನಡೆಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಉಸ್ತುವಾರಿ ಸಚಿವರ ಅಧ್ಯಕ್ಷತೆ

ರಾಜ್ಯ ಸರ್ಕಾರದ ನಿರ್ಧಾರದಂತೆ ಸೆ.5ರಿಂದ 1ನೇ ಮತ್ತು 3ನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ ಶಾಸಕರ ಉಪಸ್ಥಿತಿಯಲ್ಲಿ ತಾಲೂಕು ಮಟ್ಟದ ಸಭೆ ನಡೆಯಲಿದೆ. 2ನೇ ಮತ್ತು 4ನೇ ಶನಿವಾರ ಶಾಸಕರ ಅಧ್ಯಕ್ಷತೆಯಲ್ಲಿ ಹೋಬಳಿ ಮತ್ತು ಗ್ರಾಪಂಗಳಲ್ಲಿ ಸಭೆ ನಡೆಯಲಿದೆ. ಸರ್ಕಾರದ ವಿವಿಧ ಯೋಜನೆ, ಕಾರ್ಯಕ್ರಮಗಳು ಅರ್ಹರಿಗೆ ತಲುಪುವಂತೆ ಮಾಡುವುದು ಹಾಗೂ ಜನರು ಅನಗತ್ಯ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಈ ಸಭೆ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಅರ್ಜಿ ನಮೂನೆ ವಿತರಣೆ

ಸಭೆ ನಡೆಯುವ 15 ದಿನ ಮುಂಚಿತವಾಗಿ ಸಂಬಂಧಪಟ್ಟ ಕ್ಷೇತ್ರ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಅಹವಾಲುಗಳಿಗೆ ಸಂಬಂಧಿಸಿ ಮುದ್ರಿತ ಅರ್ಜಿ ನಮೂನೆ ತಲುಪಿಸಬೇಕು. ಸಭೆ ನಡೆಯುವ ಸ್ಥಳಗಳಲ್ಲಿ ಗಣಕಯಂತ್ರ, ಇಂಟರ್​ನೆಟ್​, ಪೀಠೋಪಕರಣ ಸೇರಿದಂತೆ ಅಗತ್ಯ ಮೂಲ  ಸೌಕರ್ಯ ಕಲ್ಪಿಸಿ ಇಲಾಖಾವಾರು ಕೌಂಟರ್​ ತೆರೆಯಬೇಕು. ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಪಾಲ್ಗೊಳ್ಳುವುದು ಕಡ್ಡಾಯ. ಈ ಸಭೆ ನಡೆಯುವ ದಿನ ಸಂಬಂಧಪಟ್ಟ ಇಲಾಖೆ ಬೇರೆ ಯಾವುದೇ ಸಭೆ ನಡೆಸುವಂತಿಲ್ಲ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ್​, ಎಎಸ್ಪಿ ಸುಧಾಕರ್​ ನಾಯಕ್​, ಜಿಪಂ ಉಪ ಕಾರ್ಯದರ್ಶಿ ಎಸ್​.ಎಸ್​. ಕಾದ್ರೋಳ್ಳಿ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ತಹಸೀಲ್ದಾರರು ಉಪಸ್ಥಿತರಿದ್ದರು.
"

ಸದರಿ ಸಭೆಗಳಲ್ಲಿ ಮಳಿಗೆ ತೆರೆದು ಇಲಾಖೆಯಿಂದ ದೊರೆಯುವ ಸೇವೆ, ಸೌಲಭ್ಯಗಳ ಮಾಹಿತಿ ನೀಡಬೇಕು. ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಇದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ತಾಲೂಕು ಮಟ್ಟದ ಸಭೆಗಳಲ್ಲಿ ವಿತರಿಸಲು ಸಿದ್ಧತೆ ಮಾಡಿಟ್ಟುಕೊಳ್ಳಬೇಕು. ಪ್ರಜಾಸೇವೆ ಸಭೆಗಳ ಕುರಿತಾಗಿ ಸಾರ್ವಜನಿಕರಿಗೆ ಅರಿವು ಮೂಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕು.

— ಸ್ವರೂಪಾ ಟಿ.ಕೆ. ಜಿಲ್ಲಾಧಿಕಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net