

ಉಡುಪಿ: ಸುಭಿಕ್ಷಾದ ಷೇರುದಾರರು ಮತ್ತು ಭಾ.ಕಿ.ಸಂ. ಸದಸ್ಯರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಸಾವಯವ ಗೂಬ್ಬರ ಪೂರೈಸಲಾಗುತ್ತಿದ್ದು ಇದರ ಪ್ರಯೋಜನ ಮಾಡಿಕೊಳ್ಳಬೇಕು. ಸಾವಯವ ಪದ್ಧತಿಯಲ್ಲಿ ಬೆಳೆದ ಶುದ್ಧ ಆಹಾರ ಉತ್ಪನ್ನಗಳಿಗೆ ಬಹು ಬೇಡಿಕೆಯಿದೆ. ಈ ನಿಟ್ಟಿನಲ್ಲಿ ಸುಭಿಕ್ಷಾ ಸಂಸ್ಥೆ ಹಾಗೂ ಭಾ.ಕಿ.ಸಂ.ದ ಮೂಲಕ ಸಂಸ್ಥೆಯ ಸದಸ್ಯ ರೈತರುಗಳು ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಭತ್ತ ಬೆಳೆದರೆ ಪ್ರತಿ ಕ್ವಿಂಟಾಲ್ಗೆ 4 ಸಾವಿರ ರೂ. ದರ ನೀಡಿ ಖರೀದಿಸಿ ಮಾರುಕಟ್ಟೆ ಮಾಡಲು ಸಿದ್ಧರಿದ್ದೇವೆ ಎಂದು ಸುಭಿಕ್ಷಾ ಸಾವಯವ ರೈತರ ಬಹುರಾಜ್ಯ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಆ. ಶ್ರೀ. ಆನಂದ್ ಭರವಸೆ ನೀಡಿದರು.
ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘದ ಕಾರ್ಯಾಲಯದಲ್ಲಿ ಜಿಲ್ಲಾಧ್ಯಕ್ಷ ನವೀನ್ಚಂದ್ರ ಜೈನ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಸಮಿತಿಯ ಮಾಸಿಕ ಸಭೆಯಲ್ಲಿ ಮಾತನಾಡಿದರು.
ಬೆಳೆಗಾರರಿಗೆ ತೀವ್ರ ನಷ್ಟ
ಪ್ರಸ್ತುತ ವರ್ಷ ತೀವ್ರ ಬರ ಪರಿಸ್ಥಿತಿ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆಯೂ ಗಣನೀಯ ಏರಿಕೆಯಾಗಿದೆ. ಈ ಬಾರಿ ಭತ್ತ ಉತ್ಪಾದನೆಯೂ ಕಳೆದ ವರ್ಷಕ್ಕೆ ಹೋಲಿಸಿದರೆ ಅರ್ಧದಷ್ಟು ಕಡಿಮೆಯಾಗುವ ಲಕ್ಷಣವಿದೆ. ಅಕ್ಕಿ ದರದಂತೆ ಭತ್ತದ ದರವೂ ಅಷ್ಟೇ ಪ್ರಮಾಣದಲ್ಲಿ ಏರಿಕೆಯಾಗಬೇಕಿದೆ. ಆದರೆ, ಅಕ್ಕಿ ಗಿರಣಿ ಮಾಲೀಕರು ಮತ್ತು ವ್ಯಾಪಾರಸ್ಥರು ಭತ್ತದ ಖರೀದಿ ದರ ಏರಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಭತ್ತ ಬೆಳೆಗಾರರಿಗೆ ನಷ್ಟದ ಪ್ರಮಾಣ ಹೆಚ್ಚುತ್ತಲೇ ಇದೆ. ಅನೇಕರು ಕೃಷಿಯಿಂದಲೇ ಹಿಂದೆ ಸರಿಯುವ ದುಸ್ಥಿತಿ ಬಂದಿದೆ ಎಂದರು.
ರೈತರಿಗೆ ಸಲಹೆ
ರೈತರು ತರಾತುರಿಯಲ್ಲಿ ಭತ್ತವನ್ನು ಮಿಲ್ಗಳಿಗೆ ಹಾಕಬಾರದು. ಸರಿಯಾಗಿ ಒಣಗಿಸಿ, ಸಂಸ್ಕರಿಸಿ, ದಾಸ್ತಾನು ಇಟ್ಟು ನಿಧಾನವಾಗಿ ಮಾರುಕಟ್ಟೆ ಮತ್ತು ಮಿಲ್ಗಳಿಗೆ ನೀಡಿದರೆ ಹೆಚ್ಚು ಬೆಲೆ ಪಡೆಯಬಹುದು. ರಾಜ್ಯದಾದ್ಯಂತ ತೀವ್ರ ಬರಗಾಲದಿಂದಾಗಿ ಎಲ್ಲಿಯೂ ಭತ್ತದ ನಾಟಿ ಸೂಕ್ತ ಪ್ರಮಾಣದಲ್ಲಿ ಆಗದ್ದರಿಂದ ಕಟಾವು ಯಂತ್ರಗಳ ಕೊರತೆ ಆಗುವುದಿಲ್ಲ. ನಮ್ಮ ಬೇಡಿಕೆಗೆ ತಕ್ಕಂತೆ ಕಟಾವು ಯಂತ್ರ ಸಿಗುವುದರಿಂದ ಮನಬಂದಂತೆ ಕಟಾವು ಯಂತ್ರಗಳ ಬಾಡಿಗೆ ನೀಡಬಾರದು. ಕರ್ತಾರ್ ಯಂತ್ರಕ್ಕೆ ಪ್ರತಿ ಗಂಟೆಗೆ 2,500ರೂ. ಮತ್ತು ಕ್ಲಾಸ್ ಇನ್ನಿತರ ಸಣ್ಣ ಯಂತ್ರಗಳಿಗೆ 2,300ಕ್ಕಿಂತ ಹೆಚ್ಚಿನ ಬಾಡಿಗೆ ನೀಡಬಾರದು ಎಂದು ರೈತರಿಗೆ ಕರೆ ನೀಡಲಾಯಿತು.
ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ಭಟ್ ಇರ್ವತ್ತೂರು, ಜಿಲ್ಲಾ ಪದಾಧಕಾರಿಗಳಾದ ಸೀತಾರಾಮ ಗಾಣಿಗ, ಸಂತೋಷ್ ಶೆಟ್ಟಿ, ಮೋಹನ್ ದಾಸ್ ಅಡ್ಯಂತಾಯ, ನಿರ್ಮಲಾ, ರೇವತಿ ಕಡ್ತಲ, ಕುಂದಾಪುರ ಮತ್ತು ಕಾರ್ಕಳ ತಾಲೂಕು ಪ್ರಮುಖರು, ಸುಭಿಕ್ಷಾ ಶೇರುದಾರರು, ವಿವಿಧ ಗ್ರಾಮ ಸಮಿತಿ ಪ್ರಮುಖರು ಉಪಸ್ಥತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಕಾರ್ಯಕ್ರಮ ನಿರ್ವಹಿಸಿದರು. ಚಂದ್ರಹಾಸ ಶೆಟ್ಟಿ ಇನ್ನಾ ವಂದಿಸಿದರು.
ಭತ್ತ ಬೆಳೆಯುವ ರೈತರ ಸಂಕಷ್ಟ ಅರ್ಥೈಸಿಕೊಂಡು ಸೂಕ್ತ ಬೆಂಬಲ ಬೆಲೆ ಘೋಷಿಸಿ ಭತ್ತ ಖರೀದಿಗೆ ಜಿಲ್ಲಾಡಳಿತ ಮುಂದಾಗಬೇಕು. ಆದರೆ, ಆಡಳಿತಗಾರರು ಯಾವುದೇ ಆಸಕ್ತಿ ತೋರುತ್ತಿಲ್ಲ. ಈ ಬಗ್ಗೆ ಜಿಲ್ಲಾಡಳಿತ ತಕ್ಷಣವೇ ರೈತ ಸಂಘಟನೆ ಮತ್ತು ಅಕ್ಕಿ ಗಿರಣಿ ಮಾಲೀಕರ ತುರ್ತು ಸಭೆ ಕರೆಯಬೇಕು. ಭತ್ತಕ್ಕೆ ನ್ಯಾಯಯುತ ಬೆಲೆ ನಿಗದಿ ಮಾಡಬೇಕು. ಗಿರಣಿ ಮಾಲೀಕರು ಮತ್ತು ವ್ಯಾಪಾರಸ್ಥರು ಕ್ವಿಂಟಾಲ್ಗೆ ಕನಿಷ್ಠ 4 ಸಾವಿರ ರೂ. ದರದಲ್ಲಿ ಖರೀದಿ ಮಾಡಲು ಮುಂದೆ ಬರುವಂತೆ ವಿನಂತಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.