

ಉಡುಪಿ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ತರೀಕೆರೆ, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ಆನೆ ದಾಳಿಯಿಂದ 50ಕ್ಕೂ ಹೆಚ್ಚು ಜನ ಅನಾಹುತಕ್ಕೊಳಗಾಗಿದ್ದಾರೆ. ಹೀಗಾಗಿ ಇತರ ಜಿಲ್ಲೆಗಳಿಂದ ಆನೆಗಳನ್ನು ಮೂಡಿಗೆರೆ ಮೂಲಕ ಭದ್ರ ಪ್ರದೇಶಕ್ಕೆ ಕಳುಹಿಸುವ ಚರ್ಚೆಯನ್ನು ನಿಲ್ಲಿಸಿ, ಆನೆ ನಿಯಂತ್ರಣಕ್ಕೆ ಬದಲಿ ವ್ಯವಸ್ಥೆ ರೂಪಿಸಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆ ಮತ್ತು ಕಾಡು ಪ್ರಾಣಿಗಳ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಬೆಂಗಳೂರಿನ ಗೃಹ ಕಚೇರಿಯಲ್ಲಿ ಶನಿವಾರ (ನ.28) ಭೇಟಿಯಾಗಿ ಚರ್ಚಿಸಿದರು.
ಆನೆ ನಿಯಂತ್ರಣಕ್ಕಾಗಿ ಈಗಾಗಲೇ ರಾಜ್ಯ ಸರ್ಕಾರ ಯೋಚಿಸಿದಂತೆ ತಡೆಬೇಲಿ ತುರ್ತಾಗಿ ಅಳವಡಿಸಲು ಕ್ರಮ ಕೈಗೊಳ್ಳಬೇಕು. ದೆಹಲಿಯಲ್ಲಿ ಪಾರ್ಲಿಮೆಂಟ್ ನಡೆಯುವ ಕಾರಣದಿಂದ ನ.30ರಂದು ಈ ವಿಚಾರವಾಗಿ ರಾಜ್ಯ ಸರ್ಕಾರ ಕರೆದ ಸಭೆಯಲ್ಲಿ ಭಾಗವಹಿಸಲಾಗುತ್ತಿಲ್ಲ. ಕಾಡಾನೆ ನಿಯಂತ್ರಣದ ಸಭೆಗೆ ನಮ್ಮೆಲ್ಲರ ಸಂಪೂರ್ಣ ಬೆಂಬಲವಿದೆ. ಸಮಸ್ಯೆಯನ್ನು ಪರಿಹರಿಸಲು ಅಗತ್ಯವಿದ್ದರೆ ಕೇಂದ್ರ ಸರ್ಕಾರ ಸಂಪರ್ಕವನ್ನೂ ಮಾಡೋಣ ಎಂದು ತಿಳಿಸಿದರು.
ಈ ವಿಚಾರವಾಗಿ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಅರಣ್ಯ ಸಚಿವರು ಭರವಸೆ ನೀಡಿದರು.