ಮನೋರೋಗಿ ಸಹಜ ಸ್ಥಿತಿಗೆ; ಕುಟುಂಬಕ್ಕೆ ಹಸ್ತಾಂತರ

ಮನೋರೋಗ ಕಾಯಿಲೆಯಿಂದ ವಾಸಿಯಾದ ವ್ಯಕ್ತಿಯನ್ನು ಪಶ್ಚಿಮ ಬಂಗಾಳದ ಬಗ್ನಾನ್​ನಲ್ಲಿರುವ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಮನೋರೋಗ ಕಾಯಿಲೆಯಿಂದ ವಾಸಿಯಾದ ವ್ಯಕ್ತಿಯನ್ನು ಪಶ್ಚಿಮ ಬಂಗಾಳದ ಬಗ್ನಾನ್​ನಲ್ಲಿರುವ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
Published on: 

* ಏಳು ತಿಂಗಳ ಹಿಂದೆ ರಕ್ಷಿಸಲ್ಪಟ್ಟಿದ್ದ ಪಶ್ಚಿಮ ಬಂಗಾಳದ ವ್ಯಕ್ತಿ

ಉಡುಪಿ: ಏಳು ತಿಂಗಳ ಹಿಂದೆ ಬ್ರಹ್ಮಾವರ ಬಸ್​ ನಿಲ್ದಾಣದ ಬಳಿ ಅನಾಗರಿಕವಾಗಿ ಮತ್ತು ವಿಚಿತ್ರ ರೀತಿಯಲ್ಲಿ ವರ್ತಿಸುತ್ತ ತಿರುಗಾಡುತ್ತಿದ್ದ ಮನೋರೋಗಿ ಇದೀಗ ಚಿಕಿತ್ಸೆಯಿಂದ ಗುಣಮುಖನಾಗಿದ್ದು, ಪಶ್ಚಿಮ ಬಂಗಾಳದಲ್ಲಿರುವ ತನ್ನ ಕುಟುಂಬವನ್ನು ಸೇರಿದ್ದಾನೆ.

ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಮನೋರೋಗಿಯನ್ನು ರಕ್ಷಿಸಿ ಜಿಲ್ಲಾಸ್ಪತ್ರೆಯ ಇಸಿಆರ್​ಸಿ ವಿಭಾಗಕ್ಕೆ ದಾಖಲಿಸಿದ್ದರು.

5 ವರ್ಷದಿಂದ ಊರು ಬಿಟ್ಟಿದ್ದ ಪಶ್ಚಿಮ ಬಂಗಾಳದ ಬಗ್ನಾನ್​ ಮೂಲದ ಟೋಟೋನ್​ ಬೇರಾ (58) ಎಂಬವರು ಬ್ರಹ್ಮಾವರದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತ ಅಮಾನವೀಯ ರೀತಿಯಲ್ಲಿ ಕಾಲ ಕಳೆಯುತ್ತಿದ್ದರು. ವರ್ಷದಿಂದ ಸ್ನಾನವನ್ನೂ ಮಾಡದ ಆ ವ್ಯಕ್ತಿಯನ್ನು ಪೊಲೀಸರ ಸಹಾಯದಿಂದ ರಕ್ಷಿಸಿ ಚಿಕಿತ್ಸೆಗೆ ದಾಖಲಿಸಿದ್ದರು.

ಜಿಲ್ಲಾಸ್ಪತ್ರೆಯ ವೈದ್ಯರಾದ ಡಾ. ವಾಸುದೇವ, ಡಾ. ಸುನೀಲ ಹಾಗೂ ಇಸಿಆರ್​ಸಿ ತಂಡದ ವೈದ್ಯಕಿಯ ಚಿಕಿತ್ಸೆ ಮತ್ತು ವಿಭಾಗದ ಪ್ರಬಂಧಕ ಸುರೇಶ ಎಸ್​. ನಾವೂರು ಅವರ ಅವಿರತ ಶ್ರಮದಿಂದಾಗಿ ವ್ಯಕ್ತಿ ಸಹಜ ಸ್ಥಿತಿಗೆ ಬಂದಿದ್ದನು. ತನ್ನೂರಿನ ಮಾಹಿತಿಯನ್ನೂ ನೀಡಿದ್ದನು.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಮಾಜಿ ಧರ್ಮದರ್ಶಿ, ಇಂಜಿನಿಯರ್​ ಹಾಗೂ ಸಂಘದ ಸ್ವಯಂಸೇವಕರಾದ ಪ್ರಸನ್ನ ದರ್ಬೆ ಅವರ ಮುಕ್ತ ಸ್ಪಂದನೆ ಮತ್ತು ಸಹಕಾರದಿಂದ ಹಾಗೂ ಕಟ್ಟಡ ಕಾರ್ಮಿಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಪಶ್ಚಿಮ ಬಂಗಾಳದ ದೀಪಕ ದಾಸ ಅವರ ಜವಾಬ್ದಾರಿಯುತ ನಡೆಯಿಂದ ರೋಗಿಯನ್ನು ಕುಟುಂಬಕ್ಕೆ ಹಸ್ತಾಂತರಿಸಲು ಸಹಕಾರಿಯಾಯಿತು.

ಉಡುಪಿಯಿಂದ ಸುಮಾರು 2,150 ಕಿ.ಮೀ ದೂರದ ಬಗ್ನಾನ್​ ವರೆಗೆ ವ್ಯಕ್ತಿಯನ್ನು ಕರೆದೊಯ್ದು, ಅಲ್ಲಿ ಅಣ್ಣನಿಗೆ ಹಸ್ತಾಂತರಿಸಲಾಯಿತು ಎಂದು ವಿಶು ಶೆಟ್ಟಿ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net