ಜಾಗತಿಕ ಆರೋಗ್ಯ ಕ್ಷೇತ್ರ ತಲುಪಲಿ ಆಯುರ್ವೇದದ ಕೊಡುಗೆ

ಉಡುಪಿಯ ಎಸ್​ಡಿಎಂ ಆಯುರ್ವೇದ ಕಾಲೇಜ್​ನಲ್ಲಿ ಆಯೋಜಿಸಿದ್ದ 'ಕ್ಷಮತ್ವಂ' ಪೂರ್ವಭಾವಿ ಸಭೆಯನ್ನು ಡಾ. ಸಂಜಯ್​ ಕೆ.ಎಸ್​. ಉದ್ಘಾಟಿಸಿದರು. ಡಾ. ಮಮತಾ ಕೆ.ವಿ., ಡಾ. ನಿರಂಜನ್​ ರಾವ್​, ಡಾ. ನಾಗರಾಜ್​ ಎಸ್​., ಡಾ. ರವಿಶಂಕರ್​ ಬಿ.,  ಡಾ. ಎನ್​.ವಿ. ಶ್ರೀವತ್ಸ, ಡಾ. ಅಜಯನ್​ ಸದಾನಂದನ್​ ಇದ್ದರು.
ಉಡುಪಿಯ ಎಸ್​ಡಿಎಂ ಆಯುರ್ವೇದ ಕಾಲೇಜ್​ನಲ್ಲಿ ಆಯೋಜಿಸಿದ್ದ 'ಕ್ಷಮತ್ವಂ' ಪೂರ್ವಭಾವಿ ಸಭೆಯನ್ನು ಡಾ. ಸಂಜಯ್​ ಕೆ.ಎಸ್​. ಉದ್ಘಾಟಿಸಿದರು. ಡಾ. ಮಮತಾ ಕೆ.ವಿ., ಡಾ. ನಿರಂಜನ್​ ರಾವ್​, ಡಾ. ನಾಗರಾಜ್​ ಎಸ್​., ಡಾ. ರವಿಶಂಕರ್​ ಬಿ., ಡಾ. ಎನ್​.ವಿ. ಶ್ರೀವತ್ಸ, ಡಾ. ಅಜಯನ್​ ಸದಾನಂದನ್​ ಇದ್ದರು.
Published on: 

* ರಾ.ಗಾಂ.ಆ.ವಿ.ವಿ. ಡೀನ್​ ಡಾ. ಸಂಜಯ್​ ಕೆ.ಎಸ್​. ಆಶಯ

* ಉಡುಪಿಯ ಎಸ್​ಡಿಎಂ ಕಾಲೇಜ್​ನಲ್ಲಿ 'ಕ್ಷಮತ್ವಂ' ಪೂರ್ವಭಾವಿ ಸಭೆ

ಉಡುಪಿ: ಸಂಶೋಧನೆಯ ಮೂಲಕ ಆಯುರ್ವೇದದ ಜ್ಞಾನ ಬಲಪಡಿಸಿ, ವೈಜ್ಞಾನಿಕ ಆಧಾರ ಸ್ಥಾಪಿಸಬೇಕಿದೆ. ತನ್ಮೂಲಕ ಭಾರತೀಯ ಮೂಲದ ಆಯುರ್ವೇದದ ಕೊಡುಗೆಗಳನ್ನು ಜಾಗತಿಕ ಆರೋಗ್ಯ ಕ್ಷೇತ್ರಕ್ಕೆ ತಲುಪಿಸಬೇಕಿದೆ. ಅದಕ್ಕೆ 'ಕ್ಷಮತ್ವಂ' ಸಮ್ಮೇಳನವು ವೇದಿಕೆಯಾಗಲಿ ಎಂದು ರಾಜೀವ್​ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಆಯುಷ್​ವಿಭಾಗದ ಡೀನ್​ ಹಾಗೂ ಕುಂದಾಪುರ ರೂರಲ್​ ಆಯುರ್ವೇದ ಮೆಡಿಕಲ್​ ಕಾಲೇಜ್​ ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ಸಂಜಯ್​ ಕೆ.ಎಸ್​. ಆಶಯ ವ್ಯಕ್ತಪಡಿಸಿದರು.

ಉಡುಪಿಯ ಕುತ್ಪಾಡಿಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜ್​, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ 'ಸ್ವಯಂ ರೋಗನಿರೋಧಕ ಕಾಯಿಲೆಗಳಲ್ಲಿ ಅನುವಾದಾತ್ಮಕ ಆಯುರ್ವೇದ' ಎಂಬ ವಿಷಯದ 'ಕ್ಷಮತ್ವಂ-2026' ಅಂತಾರಾಷ್ಟ್ರೀಯ ಸಮ್ಮೇಳನದ ನಿಮಿತ್ತ ಮಂಗಳವಾರ (ಸೆ.29) ಆಯೋಜಿಸಿದ್ದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.

ವೈಜ್ಞಾನಿಕ ಸಂಶೋಧನೆ ಅಗತ್ಯ

ಕಾಲೇಜ್​ನ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ. ಮಾತನಾಡಿ, ಆಯುರ್ವೇದದ ತತ್ವ, ಚಿಕಿತ್ಸಾ ಪದ್ಧತಿ ಮತ್ತು ಔಷಧಗಳನ್ನು ವೈಜ್ಞಾನಿಕವಾಗಿ ದೃಢೀಕರಿಸಲು ದೊಡ್ಡ ಪ್ರಮಾಣದಲ್ಲಿ ಬಹುಕೇಂದ್ರೀಯ ಸಂಶೋಧನೆ ಅತ್ಯಗತ್ಯ. ಆಯುರ್ವೇದದ ಜ್ಞಾನವನ್ನು ಸಮಕಾಲೀನ ಸಂಶೋಧನಾ ವಿಧಾನದಲ್ಲಿ ಸಂಯೋಜಿಸಿ ಅದರ ಪರಿಣಾಮವನ್ನೂ ವೈಜ್ಞಾನಿಕವಾಗಿ ಸ್ಥಾಪಿಸಬೇಕಿದೆ. ಅದಕ್ಕಾಗಿ ಆಯುರ್ವೇದ ಔಷಧದ ಮಾನಕೀಕರಣ, ಮತ್ತು ಮಾನ್ಯತೆಗಾಗಿ ವ್ಯಾಪಕ ಬಹುಕೇಂದ್ರೀಯ ಅಧ್ಯಯನ ಅಗತ್ಯ ಎಂದರು.

ನವದೆಹಲಿಯ ಅಖಿಲ ಭಾರತ ಆಯುರ್ವೇದ ಸಂಸ್ಥೆಯ ಪ್ರಾಧ್ಯಾಪಕ ಡಾ. ರವಿಶಂಕರ್​ ಬಿ., ಪಾಲಕ್ಕಾಡ್​ ಸ್ವಾಸ್ಥ್ಯಕ್ಷೇತ್ರಂ ಆಯುರ್ವೇದ ಆರೋಗ್ಯ ಕೇಂದ್ರದ ಮುಖ್ಯ ಸಲಹೆಗಾರ ಡಾ. ಎನ್​.ವಿ. ಶ್ರೀವತ್ಸ, ಕೊಯಮತ್ತೂರಿನ ಸೆಂಟರ್​ ಫಾರ್​ ಇಂಡಿಯನ್​ ಮೆಡಿಕಲ್​ ಹೆರಿಟೇಜ್​ನ ಅಧ್ಯಕ್ಷ ಡಾ. ಅಜಯನ್​ ಸದಾನಂದನ್​ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.

ಕಾಲೇಜ್​ನ ಉಪಪ್ರಾಂಶುಪಾಲರು (ಶೈಕ್ಷಣಿಕ) ಡಾ. ನಾಗರಾಜ್​ ಎಸ್​., ಕ್ಷಮತ್ವಂ ಸಮ್ಮೇಳನದ ಸಂಘಟನಾ ಕಾರ್ಯದರ್ಶಿಗಳಾದ ಡಾ. ಪ್ರಸನ್ನ ಎನ್​. ಮೊಗಸಾಲೆ, ಡಾ. ಅರ್ಹಂತ್​ ಕುಮಾರ್​ ಎ. ಉಪಸ್ಥಿತರಿದ್ದರು.

ಎಸ್​ಡಿಎಂ ಕಾಲೇಜ್​ನ ಉಪಪ್ರಾಂಶುಪಾಲ (ಕ್ಲಿನಿಕಲ್​) ಡಾ. ನಿರಂಜನ್​ ರಾವ್​ ಸ್ವಾಗತಿಸಿದರು. ಡಾ. ಅರುಣಕುಮಾರ್​ ಮತ್ತು ಡಾ. ಶುಭಾ ಪಿ.ಯು. ಕಾರ್ಯಕ್ರಮ ನಿರೂಪಿಸಿದರು. ದ್ರವ್ಯಗುಣ ವಿಭಾಗದ ಮುಖ್ಯಸ್ಥ ಡಾ. ಶ್ರೀಕಾಂತ್​ ಪಿ. ವಂದಿಸಿದರು.

ಗಳಿಸಿದ ಜ್ಞಾನವನ್ನು ಸಮಾಜದ ಒಳಿತಿಗಾಗಿ ಹಂಚಿ ಮುಂದಿನ ಪೀಳಿಗೆಗೂ ಹಸ್ತಾಂತರಿಸಬೇಕು. ಸಮಾಜದ ಕಲ್ಯಾಣಕ್ಕೆ ಕೊಡುಗೆ ನೀಡುವುದು ಶಿಕ್ಷಣದ ಪ್ರಮುಖ ಉದ್ದೇಶ. ವ್ಯವಸ್ಥಿತ ಸಂಶೋಧನೆ ಮತ್ತು ವ್ಯಾಪಕ ಪ್ರಸಾರದ ಮೂಲಕ ಆಯುರ್ವೇದದ ಸಮೃದ್ಧ ಜ್ಞಾನ ಜಾಗತಿಕ ಸಮುದಾಯಕ್ಕೆ ತಲುಪಿಸುವ ಕಾರ್ಯವಾಗಬೇಕು.

> ಡಾ. ನಿರಂಜನ್​ ರಾವ್​. ಎಸ್​ಡಿಎಂ ಕಾಲೇಜ್​ನ ಉಪಪ್ರಾಂಶುಪಾಲ (ಕ್ಲಿನಿಕಲ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net