

ಉಡುಪಿ: ಸಾಮರಸ್ಯದ ಬದುಕು ಮತ್ತು ಒಗ್ಗಟ್ಟು ಸಮಾಜದ ದೊಡ್ಡ ಶಕ್ತಿಯಾಗಿದ್ದು ಅದುವೇ ಸಮಾಜದ ಗೌರವದ ಸಂಕೇತವಾಗಿದೆ. ಸಾಮರಸ್ಯದ ಸಮಾಜ ಕಟ್ಟುವುದು ಇಂದಿನ ಅತಿ ಅಗತ್ಯತೆಯಾಗಿದ್ದು, ಆ ಕಾರ್ಯವನ್ನು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಮುಖ್ಯ ಧ್ಯೇಯವಾಗಿ ಮಾಡಬೇಕಾಗಿದೆ ಎಂದು ರಾಜ್ಯ ವಕ್ಫ್, ಹಜ್, ಅಲ್ಪಸಂಖ್ಯಾತ ಕಲ್ಯಾಣ ಹಾಗೂ ಆರೋಗ್ಯ ಸಚಿವ ಯು.ಟಿ. ಖಾದರ್ ಕರೆ ನೀಡಿದರು.
ಉಡುಪಿಯ ವಿ.ಕೆ. ಪ್ಯಾರಡೈಸ್ ಕಟ್ಟಡದಲ್ಲಿ ರವಿವಾರ (ಅ.4) ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 25 ವರ್ಷ ಪೂರೈಸಿ ರಜತ ಸಂಭ್ರಮದಲ್ಲಿರುವ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ನೂತನ ಸ್ವಂತ ಕಚೇರಿ ಉದ್ಘಾಟಿಸಿ ಮಾತನಾಡಿದರು.
ಸೌಹಾರ್ದತೆ ಅಗತ್ಯ
ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, ಪ್ರೀತಿಯ ಮೂಲಕ ಸಮಾಜ ಕಟ್ಟುವ ಕಾರ್ಯ ನಾವೆಲ್ಲ ಮಾಡಬೇಕಾಗಿದೆ. ಒಕ್ಕೂಟವು ಸಮುದಾಯದ ಏಕತೆಯೊಂದಿಗೆ ಇನ್ನಿತರ ಸಮುದಾಯಗಳೊಂದಿಗೆ ಸೌಹಾರ್ದ ಮೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟದ ಸಂಚಾಲಕ ಸುಹೇಲ್ ಅಹ್ಮದ್ ಮರೂರು ಮಾತನಾಡಿ, ಸೌಹಾರ್ದದ ಸಮಾಜ ಕಟ್ಟುವಲ್ಲಿ ಒಕ್ಕೂಟದ ಪಾತ್ರ ಪ್ರಮುಖವಾಗಿದೆ. ಭಾರತವು ಜಾತ್ಯತಿತ, ಸೌಹಾರ್ದ ದೇಶವಾಗಿ ಉಳಿಯಬೇಕಾದರೆ ಇಂತಹ ನೂರಾರು ಒಕ್ಕೂಟ ಹುಟ್ಟಿಕೊಳ್ಳಬೇಕಿದೆ ಎಂದರು.
ಭಟ್ಕಳ ಮಜ್ಲಿಸ್ ಇ ಇಸ್ಲಾಹ್ ಓ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಯುದ್ದೀನ್ ಕುದ್ರೋಳಿ, ಸಹಬಾಳ್ವೆ ಕುಂದಾಪುರ ತಾಲೂಕು ಸಂಚಾಲಕ ರಾಮಕೃಷ್ಣ ಹೆರ್ಳೆ, ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ.ಮೊಯಿದಿನಬ್ಬ ಮಾತನಾಡಿದರು. ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಯಾಸೀನ್ ಮಲ್ಪೆ ಸಮಾರೋಪ ಭಾಷಣ ಮಾಡಿದರು.
ವಿಕೆ ಗ್ರೂಪ್ ಹಾಗೂ ಕಟ್ಟಡದ ಮಾಲೀಕ ಕರುಣಾಕರ್ ಎಂ. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಒಕ್ಕೂಟದ ಗೌರವಾಧ್ಯಕ್ಷ ಹಾಜಿ ಅಬ್ದುಲ್ಲ ಪರ್ಕಳ, ಮಾಜಿ ಅಧ್ಯಕ್ಷರಾದ ಹಾಜಿ ಅಬ್ದುಲ್ಲ ನಾವುಂದ, ಅಶ್ಫಕ್ ಕಾರ್ಕಳ, ಇಬ್ರಾಹಿಂ ಕೋಟ, ಹಿರಿಯ ಉಪಾಧ್ಯಕ್ಷ ಮುಹಮ್ಮದ್ ರಫೀಕ್ ಬಿಎಸ್ಎಫ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ಉಪಸ್ಥಿತರಿದ್ದರು.
ಉಡುಪಿ ಜಾಮೀಯ ಮಸೀದಿಯ ಖತೀಬ್ ಮೌಲಾನಾ ಅಬ್ದುಲ್ ರಶೀದ್ ಉಮರಿ ಕುರಾನ್ ಪಠಿಸಿದರು. ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಮೌಲಾನಾ ಝಮೀರ್ ಅಹ್ಮದ್ ರಶಾದಿ ಸ್ವಾಗತಿಸಿದರು. ಒಕ್ಕೂಟದ ಜಿಲ್ಲಾಧ್ಯಕ್ಷ ಮುಹಮ್ಮದ್ ಮೌಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹುಸೇನ್ ಕಟಪಾಡಿ ವಂದಿಸಿದರು. ಎಸ್.ಮುನೀರ್ ಕಂಡ್ಲೂರು ಹಾಗೂ ಜಿ.ಎಂ. ಶರೀಫ್ ಹೂಡೆ ಕಾರ್ಯಕ್ರಮ ನಿರೂಪಿಸಿದರು.