

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಶನಿವಾರ (ನ.21)ದಿಂದ ಲಕ್ಷದಿಪೋತ್ಸವ ಪ್ರಾರಂಭವಾಗಿದ್ದು, ನ.24ರ ವರೆಗೆ ನಡೆಯಲಿದೆ. ತನ್ನಿಮಿತ್ತ ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ವಾರ್ಷಿಕ ರಥೋತ್ಸವಗಳಿಗೆ ಚಾಲನೆ ನೀಡಿದರು.
ಹಣತೆ ಮುಹೂರ್ತ
ಶ್ರೀಕೃಷ್ಣ ಮಠದ ಒಳ ಹಾಗೂ ಹೊರ ಪ್ರಾಂಗಣದಲ್ಲಿ ಹಣತೆಗಳನ್ನು ಬೆಳಗಲು ಅಡಿಕೆ ಮರದ ಪಟ್ಟಿಯಿಂದ ಸಾಲು ರಚಿಸಲಾಗಿದೆ. ಸಾಯಂಕಾಲ ಪರ್ಯಾಯ ವೇದವರ್ಧನ ಶ್ರೀಗಳು ಹಣತೆಗಳನ್ನು ಸಾಲಿನಲ್ಲಿ ಇಟ್ಟು ಎಣ್ಣೆ ಹಾಕುವ ಮೂಲಕ ಹಣತೆ ಮುಹೂರ್ತ ನೆರವೇರಿಸಿ ದೀಪೋತ್ಸಕ್ಕೆ ಚಾಲನೆ ನೀಡಿದರು. ಕೃಷ್ಣಾಪುರ ಮಠದ ವಿದ್ಯಾಸಾಗರ ಶ್ರೀ, ಕಾಣಿಯೂರು ಮಠದ ವಿದ್ಯಾವಲ್ಲಭ ಶ್ರೀಗಳೂ ಸಹ ಹಣತೆಯನ್ನು ಜೋಡಿಸಿ ಗಮನ ಸೆಳೆದರು.
ನಿತ್ಯ ರಥೋತ್ಸವ
ಮಧ್ವಸರೋವರದ ಮಧ್ಯದಲ್ಲಿರುವ ಮಂಟಪದಲ್ಲಿ ಶೀರೂರು ವೇದವರ್ಧನ ಶ್ರೀ ಕ್ಷೀರಾಬ್ಧಿ ಪೂಜೆ ನಡೆಸಿದರು. ಅಷ್ಟಮಠದ ಪೇಜಾವರ, ಕಾಣಿಯೂರು, ಕೃಷ್ಣಾಪುರ ಮಠದ ಶ್ರೀಗಳು ತಮ್ಮ ಪಟ್ಟದ ದೇವರಿಗೆ ಅರ್ಘ್ಯ ಪ್ರದಾನ ಮಾಡಿದರು. ಬಳಿಕ ಸಂಪ್ರದಾಯದಂತೆ ಉತ್ಸವ ಮುಹೂರ್ತ ನೆರವೇರಿತು. ನವಗ್ರಹ ಪೂಜೆಯ ಬಳಿಕ ಮಧ್ವ ಸರೋವರದಲ್ಲಿ ತೆಪ್ಪೋತ್ಸವ, ಲಕ್ಷದಿಪೋತ್ಸವದ ನಿಮಿತ್ತ ರಥೋತ್ಸವ ನಡೆಯಿತು. ಶ್ರೀಕೃಷ್ಣನ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿದ ಬಳಿಕ ರಥಬೀದಿಯ ಸುತ್ತ ಸಾವಿರಾರು ಭಕ್ತರು ಸಂಭ್ರಮದಿಂದ ತೇರು ಎಳೆದರು.
ಶನಿವಾರದಿಂದ ಆರಂಭಗೊಂಡ ನಿತ್ಯ ರಥೋತ್ಸವದ ಸಂದರ್ಭದಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಕೃಷ್ಣಾಪುರ ಮಠದ ವಿದ್ಯಾಸಾಗರ ಶ್ರೀ, ಕಾಣಿಯೂರು ಮಠದ ವಿದ್ಯಾವಲ್ಲಭ ಶ್ರೀ, ಶೀರೂರು ಮಠದ ದಿವಾನ ಡಾ. ಉದಯಕುಮಾರ ಸರಳತ್ತಾಯ ಇನ್ನಿತರರು ಪಾಲ್ಗೊಂಡಿದ್ದರು.
ರಥೋತ್ಸವದ ನಿಮಿತ್ತ ರಥಬೀದಿಯಲ್ಲಿ ನಡೆದ ಸಿಡಿಮದ್ದುಗಳ ಪ್ರದರ್ಶನ ಗಮನ ಸೆಳೆಯಿತು.