

ಉಡುಪಿ: ಅಜ್ಜರಕಾಡಿನ ನೂತನ ಜಿಲ್ಲಾ ಆಸ್ಪತ್ರೆಯಲ್ಲಿ ಸುಸಜ್ಜಿತ ವೈದ್ಯಕಿಯ ಸೌಲಭ್ಯಗಳೊಂದಿಗೆ ರೋಗಿಗಳಿಗೆ ಚಿಕಿತ್ಸೆ ನೀಡುವ ಪ್ರಕ್ರಿಯೆ ಆರಂಭಿಸಬೇಕು. ಹಳೆ ಆಸ್ಪತ್ರೆಯ ಪರಿಕರಗಳನ್ನು ಹೊಸ ಜಿಲ್ಲಾ ಆಸ್ಪತ್ರೆಯಲ್ಲಿ ತಂದಿಟ್ಟರೆ ಸಾರ್ವಜನಿಕರೊಂದಿಗೆ ಸೇರಿ ಹೊರಗಡೆ ಎಸೆಯಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವಿಣ್ ಶೆಟ್ಟಿ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಸ್ಪತ್ರೆಯನ್ನು ಆರಂಭಿಸುವಂತೆ ಆಗ್ರಹಿಸಿ ಕರವೇ ನಡೆಸಿದ ಹೋರಾಟದ ಫಲವಾಗಿ ಜಿಲ್ಲಾಡಳಿತ ನ. 5ರೊಳಗೆ ಆಸ್ಪತ್ರೆ ಆರಂಭಿಸುವ ಭರವಸೆ ನೀಡಿದೆ. ಆದರೆ ತರಾತುರಿಯಲ್ಲಿ ಆಸ್ಪತ್ರೆ ಆರಂಭಿಸಲು ಹಳೆಯ ಜಿಲ್ಲಾಸ್ಪತ್ರೆಯ ಪರಿಕರಗಳನ್ನು ನೂತನ ಕಟ್ಟಡಕ್ಕೆ ತಂದು ಅಳವಡಿಸುವ ಕೆಲಸ ನಡೆಯುತ್ತಿದೆ. ನೂತನ ಜಿಲ್ಲಾಸ್ಪತ್ರೆಯನ್ನು ಅಗತ್ಯ ವೈದ್ಯಕಿಯ ಉಪಕರಣಗಳು ಹಾಗೂ ಸುಸಜ್ಜಿತ ಸೌಲಭ್ಯಗಳೊಂದಿಗೆ ಆರಂಭಿಸಬೇಕು ಎಂಬುದು ಸಂಘಟನೆಯ ಪ್ರಮುಖ ಬೇಡಿಕೆಯಾಗಿದೆ. ಕೇವಲ ಕಟ್ಟಡವನ್ನು ಸಿದ್ಧಪಡಿಸಿ, ಹಳೆಯ ಪರಿಕರಗಳನ್ನು ಸ್ಥಳಾಂತರಿಸುವ ಮೂಲಕ ಆಸ್ಪತ್ರೆ ಆರಂಭಿಸಿದರೆ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ದೊರೆಯುವುದಿಲ್ಲ ಎಂದು ಹೇಳಿದರು.
ಬಡ ರೋಗಿಗಳ ಆರೋಗ್ಯದ ವಿಚಾರದಲ್ಲಿ ಜಿಲ್ಲಾಡಳಿತ ಅಥವಾ ಸಂಬಂಧಪಟ್ಟ ಇಲಾಖೆ ರ್ನಿಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಸಂಘಟನೆಯ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕರವೇ ರಾಜ್ಯ ಸಂಚಾಲಕ ಪ್ರಸನ್ನ ಶೆಟ್ಟಿ, ಜಿಲ್ಲಾ ಗೌರವಾಧ್ಯಕ್ಷ ಅನ್ಸರ್ ಅಹಮದ್, ಪದಾಧಿಕಾರಿಗಳಾದ ದೇವಕಿ ಬ್ರಹ್ಮಾವರ, ಸುಧೀರ್ ಪೂಜಾರಿ, ಸುಮಾ ಆಚಾರ್ ಉಪಸ್ಥಿತರಿದ್ದರು.